ಆ್ಯಪ್ನಗರ

ತಾರಕಕ್ಕೇರಿದ ಟ್ಟೀಟ್‌ ಫೈಟ್‌: ಸದಾನಂದ ಗೌಡ-ಸೂಲಿಬೆಲೆ ಸಂಬಂಧ ‘ಬ್ಲಾಕ್‌’ನಲ್ಲಿ ಅಂತ್ಯ

ಇಂದು ಸೂಲಿಬೆಲೆಯವರಿಗೆ ತಿರುಗೇಟು ನೀಡಿದ್ದ ಸದಾನಂದ ಗೌಡ, ಗಾಂಧೀಜಿ ಮಾತನ್ನು ಉಲ್ಲೇಖಿಸಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಇದೀಗ ಅವರು ಟ್ಟಿಟ್ಟರ್‌ನಲ್ಲಿ ಸೂಲಿಬೆಲೆಯವರನ್ನು ಬ್ಲಾಕ್‌ ಕೂಡ ಮಾಡಿದ್ದಾರೆ.

Vijaya Karnataka Web 2 Oct 2019, 7:55 pm

ಬೆಂಗಳೂರು: ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮತ್ತು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನಡುವೆ ನಡೆಯುತ್ತಿದ್ದ ಟ್ಟಿಟ್ಟರ್‌ ಸಮರ, ಹೇಳಿಕೆಗಳ ಮೇಲಾಟ 'ಬ್ಲಾಕ್‌'ನಲ್ಲಿ ಅಂತ್ಯಕೊಂಡಿದೆ. ಅರ್ಥಾತ್‌ ಚಕ್ರವರ್ತಿ ಸೂಲಿಬೆಲೆಯವರನ್ನು ಸದಾನಂದ ಗೌಡ ಟ್ಟಿಟರ್‌ನಲ್ಲಿ ಬ್ಲಾಕ್‌ ಮಾಡಿದ್ದಾರೆ.
Vijaya Karnataka Web Sadananda Gowda Sulibele


ಈ ಸುದ್ದಿಯನ್ನು ಸ್ವತಃ ಚಕ್ರವರ್ತಿ ಸೂಲಿಬೆಲೆ ಟ್ಟಿಟರ್‌ನಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್ಯೂ (ಧನ್ಯವಾದ) ಎಂಬುದಾಗಿ ವ್ಯಂಗ್ಯ ಭರಿತ ಪ್ರತಿಕ್ರಿಯೆ ನೀಡಿದ್ದಾರೆ.


ಹಿನ್ನೆಲೆ


ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ ಎಂಬುದಾಗಿ ಚಕ್ರವರ್ತಿ ಸೂಲಿಬೆಲೆಯವರನ್ನು ಉದ್ದೇಶಿಸಿ ಸದಾನಂದ ಗೌಡ ಮಂಗಳವಾರ ಟ್ಟೀಟ್‌ ಮಾಡಿದ್ದರು.

ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ದೇಶದ್ರೋಹಿಗಳು-ಸದಾನಂದ ಗೌಡ

ಇದನ್ನು ರೀ ಟ್ಟೀಟ್‌ ಮಾಡಿದ್ದ ಸೂಲಿಬೆಲೆ, “ಸದಾನಂದ ಗೌಡರೇ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ?” ಎಂಬುದಾಗಿ ಚಾಟಿ ಬೀಸಿದ್ದರು.


ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡ, ಗಾಂಧೀಜಿ ಮಾತನ್ನು ಉಲ್ಲೇಖಿಸಿ ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಎಂದಿದ್ದಾರೆ.

ಪ್ರವಾಹ ಪರಿಹಾರ ಡಿವಿಎಸ್ 'ದಾರಿತಪ್ಪಿಸುವ' ಹೇಳಿಕೆಗೆ ಸೂಲಿಬೆಲೆ ಗರಂ

"ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ," ಎಂಬುದಾಗಿ ಸದಾನಂದ ಗೌಡರು ಪ್ರತಿಕ್ರಿಯೆ ನೀಡಿದ್ದರು; ಜೊತೆಗೆ ಟ್ಟೀಟ್‌ ಕೂಡ ಮಾಡಿದ್ದಾರೆ.


ಇದಾದ ಬೆನ್ನಿಗೆ ಇದೀಗ ಚಕ್ರವರ್ತಿ ಸೂಲಿಬೆಲೆಯವರನ್ನು ಸದಾನಂದ ಗೌಡರು ಟ್ಟಿಟ್ಟರ್‌ನಲ್ಲಿ ಬ್ಲಾಕ್‌ ಮಾಡಿದ್ದಾರೆ.

ಇದೇ ಸೂಲಿಬೆಲೆ 2019ರಲ್ಲಿ ಸದಾನಂದ ಗೌಡರು ಸೇರಿದಂತೆ ಎಲ್ಲಾ ಬಿಜೆಪಿ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಯಾಚನೆ ಮಾಡಿದ್ದರು. ಅದೇ ಸೂಲಿಬೆಲೆ ಮತ್ತು ಸದಾನಂದ ಗೌಡರು ಇಂದು ಉತ್ತರ ಕರ್ನಾಟಕದ ನೆರೆ ಪರಿಹಾರ ವಿಚಾರಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ