ಆ್ಯಪ್ನಗರ

ಪರಮೇಶ್ವರ್‌, ಜಾಲಪ್ಪಗೆ ಐಟಿ ಶಾಕ್‌: ದಿನದ ಪ್ರಮುಖ 10 ಬೆಳವಣಿಗೆಗಳು

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜಾಲಪ್ಪ ಅವರ ಮೇಲೆ ಗುರುವಾರ ಐಟಿ ದಾಳಿ ನಡೆದಿದ್ದು ಇಡೀ ದಿನದ ಪ್ರಮುಖ ಬೆಳವಣಿಗೆಗಳು ಹೀಗಿವೆ.

Vijaya Karnataka Web 10 Oct 2019, 9:58 pm
ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆರ್‌.ಎಲ್‌. ಜಾಲಪ್ಪ ನಿವಾಸ, ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಆಪ್ತರ ಮನೆಗಳ ಮೇಲೆಲ್ಲಾ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಡಿ.ಕೆ. ಶಿವಕುಮಾರ್‌ ಪ್ರಕರಣದ ನಂತರ ರಾಜ್ಯದಲ್ಲಿ ನಡೆದಿರುವ ಪ್ರಮುಖ ದಾಳಿ ಇದಾಗಿದ್ದು, ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ಪ್ರಮುಖ ಮಾಹಿತಿ ಇಲ್ಲಿದೆ.
Vijaya Karnataka Web i t raid


* ಡಾ. ಜಿ ಪರಮೇಶ್ವರ್‌ಗೆ ಐಟಿ ಶಾಕ್

ತೆರಿಗೆ ವಂಚನೆ ಆರೋಪ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಕಚೇರಿಗಳು, ನಿವಾಸಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದರು. ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು, ನೆಲಮಂಗಲ ತಾಲೂಕಿನ ಶಿಕ್ಷಣ ಸಂಸ್ಥೆಗಳು, ಬೆಂಗಳೂರಿನ ಸದಾಶಿವ ನಗರದ ನಿವಾಸ ಸೇರಿದಂತೆ ಮೂರು ಪ್ರತ್ಯೇಕ ಕಡೆಗಳಲ್ಲಿ ಪರಮೇಶ್ವರ್ ಅವರಿಗೆ ಸೇರಿದ ಸ್ವತ್ತುಗಳ ಮೇಲೆ ದಾಳಿಯಾಗಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸದಾಶಿವನಗರದಲ್ಲಿರುವ ಮನೆಯಲ್ಲಿ ಸುಮಾರು ಹತ್ತು ಅಧಿಕಾರಿಗಳ ತಂಡ ಬೆಳಗ್ಗೆ 8 ಗಂಟೆಯಿಂದ ಶೋಧ ನಡೆಸುತ್ತಿದ್ದಾರೆ. ದಾಳಿ ಸಮಯದಲ್ಲಿ ಮನೆಯಲ್ಲಿ ಪರಮೇಶ್ವರ್ ಅವರು ಇರಲಿಲ್ಲ. ಅವರ ಕುಟುಂಬ ಸದಸ್ಯರು, ಆಪ್ತರು, ಕೆಲಸಗಾರರಿಂದಲೂ ಐಟಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪರಂ, ಜಾಲಪ್ಪ ಕೋಟೆಗೆ ಐಟಿ ಲಗ್ಗೆ-ಹಾರ್ಡ್ ಡಿಸ್ಕ್‌ನಲ್ಲಿದ್ಯಾ ಟಾಪ್ ಸೀಕ್ರೆಟ್ !

* ಆರ್‌.ಎಲ್‌. ಜಾಲಪ್ಪ ಕುಟುಂಬದ ಮೇಲೂ ರೇಡ್

ಡಾ.ಜಿ. ಪರಮೇಶ್ವರ್‌ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವ ಹೊತ್ತಲ್ಲೇ ಕೋಲಾರ ಹೊರವಲಯದ ಆರ್.ಎಲ್‌. ಜಾಲಪ್ಪ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. 10ಕ್ಕೂ ಹೆಚ್ಚು ಅಧಿಕಾರಿಗಳು ಆದಾಯ ತೆರಿಗೆ ಪಾವತಿ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಜಾಲಪ್ಪ ಮಗನ ಮನೆ ಮೇಲೆ ಸಹ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿರುವ ಜಾಲಪ್ಪ ಪುತ್ರ ರಾಜೇಂದ್ರ ಮನೆ ಮೇಲೆ ದಾಳಿ ನಡೆದಿದೆ.

* ಪರಮೇಶ್ವರ್ ಆಪ್ತ ರಂಗನಾಥ್ ಮನೆ ಮೇಲೂ ದಾಳಿ

ಪರಮೇಶ್ವರ್ ಆಪ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ರಂಗನಾಥ್ ಎಂಬುವವರ ಮನೆ ಮೇಲೂ ದಾಳಿ ನಡೆಸಲಾಗಿದೆ. ರಂಗನಾಥ್ ಪರಮೇಶ್ವರ್‌ರವರ ನೆಲಮಂಗಲ ಭಾಗದ ವ್ಯವಹಾರ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ನೆಲಮಂಗಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವ ರಂಗನಾಥ್, ಭೂಮಿ ಖರೀದಿ ಇನ್ನಿತರ ವ್ಯವಹಾರದಲ್ಲಿ ಪರಮೇಶ್ವರ್ ಜೊತೆ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಎರಡು ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಅವರ ಮನೆಯನ್ನು ಶೋಧ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

* ಪರಮೇಶ್ವರ್‌ ಶಿಕ್ಷಣ ಸಂಸ್ಥೆಗಳಲ್ಲಿ ಬಿಗುವಿನ ವಾತಾವರಣ

ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಸಿದ್ಧಾರ್ಥ ಎಂಜಿನಿಯರ್ ಕಾಲೇಜಿನಲ್ಲಿ ಬಿಗುವಿನ ವಾತಾವರಣ ಕಂಡು ಬಂತು.

ನಗರದ ಹೊರವಲಯದ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಮೇಲೆ ಮುಂಜಾನೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮರಳೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ವಿಶ್ವವಿದ್ಯಾಲಯಕ್ಕೂ ಬೆಳಗ್ಗೆಯಿಂದಲೇ ಐಟಿ ದಾಳಿಯ ಬಿಸಿ ತಟ್ಟಿದೆ. ಐಟಿ ದಾಳಿ ವಿಷಯ ತಿಳಿದ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿನ ಮುಖ್ಯ ದ್ವಾರದಲ್ಲಿ, ವಿವಿಧ ವಿಭಾಗದ ಕ್ಲಾಸ್ ರೂಂ ಹಾಗೂ ಹೊರಗಡೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.

ಪರಂ, ಜಾಲಪ್ಪಗೆ ಐಟಿ ಶಾಕ್! ಅಧಿವೇಶನದ ಹೊತ್ತಲ್ಲೇ 'ಕೈ' ಕಟ್, ಬಾಯ್ ಮುಚ್?

* ದಾಳಿಗೆ ನಮ್ಮ ಆಕ್ಷೇಪವಿಲ್ಲ: ಪರಮೇಶ್ವರ್‌

ಐಟಿ ದಾಳಿ ಕುರಿತು ಪರಮೇಶ್ವರ್ ಪ್ರತಿಕ್ರಿಯೆ ನೀಡಿ, 'ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿದ್ದು ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಕಾನೂನು ನಿಯಮಬಾಹಿರವಾಗಿ ಏನಾದರೂ ನಡೆದಿದ್ದರೆ ಅಧಿಕಾರಿಗಳು ಕ್ರಮ ಜರುಗಿಸಲಿ; ನಮ್ಮ ಅಭ್ಯಂತರವಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದರೆ ಮಾತ್ರ ಯೋಚಿಸಬೇಕಿತ್ತು. ನಮ್ಮಿಂದ ಯಾವುದೇ ತಪ್ಪು, ಅವ್ಯವಹಾರಗಳಾಗಿಲ್ಲ,' ಎಂದರು. ಪರಮೇಶ್ವರ್ ಅವರು ದಾಳಿ ಸಂದರ್ಭದಲ್ಲಿ ಕೊರಟಗೆರೆ ಪ್ರವಾಸದಲ್ಲಿದ್ದರು. ಅವರನ್ನು ಕೊರಟಗೆರೆಯಿಂದ ಸದಾಶಿವನಗರದ ಮನೆಗೆ ಕರೆಸಿಕೊಂಡಿರುವ ಐಟಿ ಅಧಿಕಾರಿಗಳು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

* ಕೈ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂದ ಸಿದ್ದರಾಮಯ್ಯ

ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಐಟಿ ದಾಳಿ ನಡೆಸಲಾಗುತ್ತಿದ್ದು, ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗಿತ್ತು. ಕೇಂದ್ರ ಸರ್ಕಾರ ಐಟಿ, ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

* ರಾಜಕೀಯ ಪ್ರೇರಿತ ದಾಳಿ: ಬಿ.ಕೆ. ಹರಿಪ್ರಸಾದ್‌

ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕ ಡಾ. ಜಿ. ಪರಮೇಶ್ವರ್ ಅವರ ಮೇಲಿನ ಐಟಿ ದಾಳಿಯು ರಾಜಕೀಯ ದ್ವೇಷದ ದಾಳಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು. ಜಿ. ಪರಮೇಶ್ವರ್ ಅವರ ಸದಾಶಿವನಗರ ನಿವಾಸಕ್ಕೆ ಅವರನ್ನು ಭೇಟಿಯಾಗಲು ಬಂದಿದ್ದ ಹರಿಪ್ರಸಾದ್‌, ಸುದ್ದಿಗಾರರ ಜೊತೆ ಮಾತನಾಡಿ, "ಬಿಜೆಪಿಯಲ್ಲಿನ ಭ್ರಷ್ಟ ನಾಯಕರ ಮೇಲೆ ಐಟಿ, ಸಿಬಿಐ, ಇ.ಡಿ ಇಲಾಖೆಗಳು ದಾಳಿ ಮಾಡುತ್ತಿಲ್ಲ. ಆ ಪಕ್ಷದಲ್ಲಿನ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಐಟಿ, ಸಿಬಿಐ, ಇ.ಡಿಯನ್ನು ಕೇಂದ್ರ ದುರ್ಬಳಕೆ‌ ಮಾಡಿಕೊಳ್ಳುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ" ಎಂದು ವಾಗ್ದಾಳಿ ನಡೆಸಿದರು.

* ಐಟಿ ದಾಳಿಗೆ ಕೆ.ಸಿ ವೇಣುಗೋಪಾಲ್ ಖಂಡನೆ

ಡಾ. ಜಿ ಪರಮೇಶ್ವರ್ ಅವರ ಮೇಲೆ ನಡೆದಿರುವ ಐಟಿ ದಾಳಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಖಂಡಿಸಿದ್ದಾರೆ. ಒಂದೆಡೆ ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ ಶಿವಕುಮಾರ್ರನ್ನು ದೆಹಲಿಯ ತಿಹಾರ್ ಜೈಲಿಗೆ ಹಾಕಲಾಗಿದೆ. ಇನ್ನೊಂದೆಡೆ ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ಐಟಿ ದಾಳಿ ಮಾಡಿಸಲಾಗಿದೆ. ಕೇಂದ್ರ ಸರ್ಕಾರವೂ ಐಟಿ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರನ್ನು ಟಾರ್ಗೇಟ್ ಮಾಡಲಾಗುತ್ತಿದೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದಿದ್ದಾರೆ.

* ಐಟಿ ಯಾವ ಪಕ್ಷದವರನ್ನೂ ಟಾರ್ಗೆಟ್ ಮಾಡಿಲ್ಲ- ಬಚ್ಚೇಗೌಡ

ಆದಾಯ ತೆರಿಗೆ ಇಲಾಖೆ ಯಾವ ಪಕ್ಷದವರನ್ನೂ ಟಾರ್ಗೆಟ್ ಮಾಡಲಿಲ್ಲ ಎಂದು ಸಂಸದ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. ಐಟಿ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಕಾಂಗ್ರೆಸ್ ಆರೋಪವನ್ನು ನಿರಾಕರಿಸಿರುವ ಬಚ್ಚೇಗೌಡ ಐಟಿ ಪಕ್ಷಾತೀತವಾಗಿದೆ ಎಂದಿದ್ದಾರೆ.

* ಐಟಿ ಅಧಿಕಾರಿಗಳಿಂದ ಮುಂದುವರಿದ ತನಿಖೆ
ಡಾ. ಜಿ ಪರಮೇಶ್ವರ್ ಹಾಗೂ ಜಾಲಪ್ಪ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ದಾಖಲೆಗಳ ಪರಶೀಲನೆ ಹಾಗೂ ತನಿಖೆಯನ್ನು ಮುಂದುವರಿಸಿದ್ದಾರೆ. ಈಗಾಗಲೇ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು ಮಹತ್ವದ ಸುಳಿವುಗಳು ಸಿಕ್ಕಿವೆ ಎನ್ನಲಾಗಿದೆ. ಸುಳಿವು ಆಧರಿಸಿ ಮತ್ತಷ್ಟು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ