ಆ್ಯಪ್ನಗರ

ಮುಕ್ತ ವಿವಿ ಪ್ರವೇಶ ಪ್ರಕ್ರಿಯೆ ಶೀಘ್ರ ಆರಂಭ

ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ನವೀಕರಣ ಖಚಿತವಾಗಿರುವ ನಡುವೆಯೇ 2018-19ನೇ ಅವಧಿಯಲ್ಲಿಯೇ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಯುಜಿಸಿ ಮತ್ತು ಕೆಎಸ್‌ಒಯು ಅಧಿಕಾರಿಗಳ ಸಭೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

Vijaya Karnataka Web 6 Jul 2018, 7:28 am
-ನಾಗರಾಜ್‌ ನವೀಮನೆ ಮೈಸೂರು
Vijaya Karnataka Web vv


ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ನವೀಕರಣ ಖಚಿತವಾಗಿರುವ ನಡುವೆಯೇ 2018-19ನೇ ಅವಧಿಯಲ್ಲಿಯೇ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಯುಜಿಸಿ ಮತ್ತು ಕೆಎಸ್‌ಒಯು ಅಧಿಕಾರಿಗಳ ಸಭೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ವಾರದೊಳಗೆ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಸಭೆ ಬಳಿಕ ಹೊಸದಿಲ್ಲಿಯಿಂದ ದೂರವಾಣಿಯಲ್ಲಿ ಮಾತನಾಡಿದ ಕರಾಮುವಿವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ, ''ವಿವಿಗೆ ಮಾನ್ಯತೆ ನೀಡುವ ಸಂಬಂಧ ಯುಜಿಸಿಯೊಂದಿಗೆ ನಡೆದ ಸಭೆ ಫಲಪ್ರದವಾಗಿದೆ. ನ್ಯಾಕ್‌ ಸಮಿತಿ ಅಧ್ಯಕ್ಷ ಪ್ರೊ.ಚೌಹಾಣ್‌ ಹಾಗೂ ವಿವಿಧ ವಿಶ್ವ ವಿದ್ಯಾನಿಲಯದ ಆರು ಪರಿಣಿತರು ಸಭೆಯಲ್ಲಿ ಭಾಗವಹಿಸಿದ್ದರು. ಇವರೆಲ್ಲರಿಗೂ ದಾಖಲೆ ಸಮೇತ ವಿವರಿಸಲಾಯಿತು. ತಂಡದ ಎಲ್ಲರ ಅನುಮಾನ, ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದು, ಶೀಘ್ರದಲ್ಲೇ ಮಾನ್ಯತೆ ಸಂಬಂಧ ಅಧಿಕೃತ ಒಪ್ಪಿಗೆ ನೀಡಲಿದ್ದಾರೆ. ವಾರದೊಳಗೆ ಸಿಹಿ ಸುದ್ದಿ ನಿರೀಕ್ಷಿಸಬಹುದು. ತಾಂತ್ರಿಕೇತರ 32 ಕೋರ್ಸ್‌ಗಳನ್ನು ಕರ್ನಾಟಕದಲ್ಲಿ ಮಾತ್ರ ನಡೆಸಲು ಸಮ್ಮತಿ ಸಿಕ್ಕಿದ್ದು, ನನ್ನೊಂದಿಗೆ ಕರಾಮುವಿವಿ ಕುಲಸಚಿವ ಡಾ.ಖಾದರ್‌ ಪಾಷ, ಡೀನ್‌ ಡಾ.ಜಗದೀಶ್‌ ಹಾಗೂ ಕರಾಮುವಿವಿ ಯುಜಿಸಿ ಘಟಕದ ಸಂಯೋಜನಾಧಿಕಾರಿ ಡಾ.ಎನ್‌.ಜಿ.ರಾಜು ಭಾಗವಹಿಸಿದ್ದರು,'' ಎಂದು ಶಿವಲಿಂಗಯ್ಯ ತಿಳಿಸಿದರು.

ಚರ್ಚೆ ವಿಷಯಗಳೇನು?: '' 2018-19ರ ಸಾಲಿಗೆ ಮಾನ್ಯತೆ ನೀಡುವ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಯುಜಿಸಿ ಗುರುವಾರ ಸಭೆ ಕರೆದಿತ್ತು. 32 ತಾಂತ್ರಿಕೇತರ ಕೋರ್ಸ್‌ಗಳನ್ನು ಆರಂಭಿಸುವ ಸಂಬಂಧ ಇರುವ ವ್ಯವಸ್ಥೆ ಬಗ್ಗೆ ಯುಜಿಸಿ ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು. ವಿವಿಯಲ್ಲಿರುವ ಸಿಬ್ಬಂದಿ, ಮೂಲ ಸೌಕರ‍್ಯ, ವ್ಯಾಸಂಗ ಕೇಂದ್ರ, ಪ್ರಾದೇಶಿಕ ಕೇಂದ್ರ, ಯಾವ ಕೋರ್ಸ್‌ ತೆರೆಯಲು ಉದ್ದೇಶಿಸಲಾಗಿದೆ? ಪ್ರವೇಶ ಪ್ರಕ್ರಿಯೆ ಹೇಗೆ ನಡೆಯಲಿದೆ? ಪರೀಕ್ಷೆ ಯಾವಾಗ? ಮುಂತಾದ ಪ್ರಶ್ನೆಗಳನ್ನು ಯುಜಿಸಿ ತಂಡದ ಪರಿಣಿತರು ಎತ್ತಿದರು. ಅಂಕಿ-ಅಂಶಗಳ ಮೂಲಕ ಅಗತ್ಯ ದಾಖಲೆ ನೀಡಿ ಅನುಮಾನಗಳನ್ನು ಬಗೆಹರಿಸಲಾಯಿತು,'' ಎಂದು ಶಿವಲಿಂಗಯ್ಯ ತಿಳಿಸಿದರು.

ಜುಲೈ 15ರ ಬಳಿಕ ಆನ್‌ಲೈನ್‌ ಪ್ರವೇಶ


''ಈಗಾಗಲೇ ಯುಜಿಸಿ ರಾಜ್ಯ ಮುಕ್ತ ವಿವಿಗಳಿಗೆ ಅನ್ವಯವಾಗುವಂತೆ ಜಾರಿಗೊಳಿಸಿರುವ 2017ರಲ್ಲಿ ನಿಯಮಾವಳಿ ಪ್ರಕಾರ ನಾನಾ ಬೋಧಕರ ನೇಮಕವಾಗಿದೆ. ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಎಸ್ಸಿ, ಎಂಬಿಎ, ಬಿ.ಇಡಿ ಕೋರ್ಸ್‌ಗಳ ಪ್ರವೇಶ ಜುಲೈ 15ರ ನಂತರ ಆರಂಭಗೊಳ್ಳಲಿದೆ. ಮೊದಲೆಲ್ಲಾ ಇಡೀ ವರ್ಷದಲ್ಲಿ ಯಾವಾಗಲಾದರೂ ಶೈಕ್ಷಣಿಕ ವರ್ಷವನ್ನು ಆರಂಭಿಸಬಹುದಿತ್ತು. ಇದೀಗ ಜನವರಿ, ಜುಲೈ ತಿಂಗಳಿನಲ್ಲೇ ಆರಂಭಿಸಬೇಕೆಂಬ ನಿಯಮವಿದೆ. ಹೀಗಾಗಿ ಜುಲೈನಲ್ಲೇ 32 ಕೋರ್ಸ್‌ಗಳಿಗೆ ಪ್ರವೇಶ ಆರಂಭಗೊಳ್ಳಲಿದೆ. ಆನ್‌ಲೈನ್‌ ಪ್ರವೇಶ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಆಗಿದೆ. ಅರ್ಜಿ ಭರ್ತಿಯಿಂದ ಹಿಡಿದು ಅಗತ್ಯ ದಾಖಲೆ, ಪ್ರವೇಶ ಶುಲ್ಕ ಎಲ್ಲವನ್ನೂ ಆನ್‌ಲೈನ್‌ ಮೂಲಕ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ ಅಪ್‌ಲೋಡ್‌ ಮಾಡಿದಾಗ ಪ್ರವೇಶ ಶುಲ್ಕದ ವಿವರ ಸಿಗುತ್ತದೆ,'' ಎಂದು ಶಿವಲಿಂಗಯ್ಯ ತಿಳಿಸಿದರು.


ಈಗಾಗಲೇ 2018-19ನೇ ಶೈಕ್ಷಣಿಕ ಅವಧಿಗೆ ಮಾನ್ಯತೆ ಖಚಿತಗೊಂಡಿದೆ. ಗುರುವಾರ ನಡೆದ ಸಭೆ ಇದನ್ನು ಮತ್ತಷ್ಟು ಖಚಿತಪಡಿಸಿದೆ. ವಾರದೊಳಗೆ ಅನುಮತಿ ಪತ್ರ ಸಿಗಲಿದೆ. ಜು. 15 ಅಥವಾ ಅಂತ್ಯದ ವೇಳೆಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. 2013ರಿಂದ 15ರ ಅವಧಿಯಲ್ಲಿ ಪಡೆದ ಪದವಿಗೆ ಮಾನ್ಯತೆ ದೊರಕಿಸುವ ವಿಚಾರವನ್ನು ಹಂತಹಂತವಾಗಿ ಚರ್ಚಿಸಿ ಪರಿಹರಿಸಲಾಗುವುದು.

- ಪ್ರೊ.ಡಿ. ಶಿವಲಿಂಗಯ್ಯ, ಕರಾಮುವಿವಿ ಕುಲಪತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ