ಆ್ಯಪ್ನಗರ

ಕೈ ನಾಯಕರೊಂದಿಗೆ ಕಣ್ಣಾಮುಚ್ಚಾಲೆ

ದೋಸ್ತಿ ನಾಯಕರ ಕೈಗೆ ಆಕಸ್ಮಿಕವಾಗಿ ಸಿಕ್ಕಿ ಬಿದ್ದು ನಿರಂತರ ಹದಿನೈದು ಗಂಟೆ ಕಾಲ ಬ್ರೈನ್‌ ವಾಶ್‌ಗೆ ಒಳಗಾಗಿ ...

Vijaya Karnataka 15 Jul 2019, 5:00 am
ಬೆಂಗಳೂರು: ದೋಸ್ತಿ ನಾಯಕರ ಕೈಗೆ ಆಕಸ್ಮಿಕವಾಗಿ ಸಿಕ್ಕಿ ಬಿದ್ದು ನಿರಂತರ ಹದಿನೈದು ಗಂಟೆ ಕಾಲ ಬ್ರೈನ್‌ ವಾಶ್‌ಗೆ ಒಳಗಾಗಿ ಕಾಂಗ್ರೆಸ್‌ನಲ್ಲೇ ಉಳಿದುಕೊಳ್ಳುವ ಭರವಸೆ ನೀಡಿದ್ದ ಎಂ.ಟಿ.ಬಿ.ನಾಗರಾಜ್‌ ಭಾನುವಾರ ಬೆಳಗ್ಗೆಯೇ ಮುಂಬಯಿಗೆ ಹಾರಿ ಅತೃಪ್ತ ಶಾಸಕರನ್ನು ಸೇರಿಕೊಳ್ಳುವ ಮೂಲಕ ಕೊನೆಗೂ 'ಕೈ' ಕೊಟ್ಟಿದ್ದಾರೆ.
Vijaya Karnataka Web 1307-2-2-01 (4)


ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಮೂಲಕ ಅವರು ಮುಂಬಯಿಗೆ ಪ್ರಯಾಣ ಬೆಳೆಸಿ ಅತೃಪ್ತ ಶಾಸಕರ ಬಣವನ್ನು ಸೇರಿಕೊಂಡರು. ಆದರೆ ಶುಕ್ರವಾರದಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಭಾನುವಾರವೂ ತಾವು ಇರುವ ತಾಣವನ್ನು ಗುಟ್ಟಾಗಿಯೇ ಉಳಿಸಿಕೊಂಡರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮನ್ನು ಸಂಪರ್ಕಿಸಬಹುದೆಂಬ ಕಾರಣಕ್ಕೆ ಸುಧಾಕರ್‌ ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಮುಂಬಯಿ ತಲುಪುತ್ತಿದ್ದಂತೆ ಮೈತ್ರಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಾಗರಾಜ್‌ ಯಾವುದೇ ಕಾರಣಕ್ಕೂ ರಾಜೀನಾಮೆ ನಿರ್ಧಾರ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲೇ ಸೇರಬೇಕಿತ್ತು

ಮೂಲಗಳ ಪ್ರಕಾರ ಡಾ.ಸುಧಾಕರ್‌ ಹಾಗೂ ಎಂ.ಟಿ.ಬಿ.ನಾಗರಾಜ್‌ ಶನಿವಾರವೇ ಮುಂಬಯಿ ತಲುಪಬೇಕಿತ್ತು. ಬೆಳಗ್ಗೆ 6.30ಕ್ಕೆ ವಿಶೇಷ ವಿಮಾನದ ವ್ಯವಸ್ಥೆಯಾಗಿತ್ತು. ಆದರೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಾಗರಾಜ್‌ ಮನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ರಾಜೀನಾಮೆ ನಿರ್ಧಾರ ವಾಪಸ್‌ ಪಡೆಯುವಂತೆ ಪಟ್ಟು ಹಿಡಿದರು. ಐದು ಗಂಟೆಗಳ ಕಾಲ ಶಿವಕುಮಾರ್‌ ನಾಗರಾಜ್‌ ಮನೆಯಲ್ಲೇ ಇದ್ದು, ಕೊನೆಗೆ ಸಿದ್ದರಾಮಯ್ಯ ನಿವಾಸಕ್ಕೆ ಅವರನ್ನು ತಲುಪಿಸಿದ್ದರು. ರಾತ್ರಿ ಹತ್ತು ಗಂಟೆಯವರೆಗೂ ಸಿದ್ದರಾಮಯ್ಯ ನಿವಾಸದಲ್ಲಿ ಓಲೈಕೆ ಪ್ರಯತ್ನ ಮುಂದುವರಿದಿತ್ತು. ಒತ್ತಡಕ್ಕೆ ಕಟ್ಟು ಬಿದ್ದು ಒಪ್ಪಿಗೆ ಸೂಚಿಸಿದ್ದ ನಾಗರಾಜ್‌, ಕೆಲವೇ ನಿಮಿಷದಲ್ಲಿ ತಮ್ಮ ನಡೆ ಬದಲಾಯಿಸಿದ್ದರು. ಸುಧಾಕರ್‌ ಒಪ್ಪಿದರೆ ಮಾತ್ರ ರಾಜೀನಾಮೆ ವಾಪಸ್‌ ಪಡೆಯುತ್ತೇನೆ ಎಂದು ಹೇಳಿಕೆ ನೀಡಿ ಮೈತ್ರಿ ಮುಖಂಡರಿಗೆ ದಿಗಿಲು ಹುಟ್ಟಿಸಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಮುಂಬಯಿನಲ್ಲಿರುವ ಎಸ್‌.ಟಿ.ಸೋಮಶೇಖರ್‌ಗೆ ಕರೆ ಮಾಡಿ ಕೊಟ್ಟ ಮಾತಿನಂತೆ ಬೆಳಗ್ಗೆ ನಿಮ್ಮ ಜತೆಯಾಗುತ್ತೇನೆ ಎಂದು ಭರವಸೆ ನೀಡಿದರು.

ಭಾನುವಾರ ಬೆಳಗ್ಗೆ ನಾಗರಾಜ್‌ ಜತೆಗೆ ಬಿಜೆಪಿ ಶಾಸಕ ಆರ್‌.ಅಶೋಕ್‌ ಜತೆಯಾಗಿ ಮುಂಬಯಿಗೆ ತೆರಳಿರುವುದು ಈಗ ಕಾಂಗ್ರೆಸ್‌ ಆಕ್ಷೇಪಕ್ಕೆ ಕಾರಣವಾಗಿದೆ. ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂಬುದಕ್ಕೇ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದು ಆರೋಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ