ಆ್ಯಪ್ನಗರ

ರಾಜ್ಯ ಪೊಲೀಸರಿಗಿಲ್ಲ ರಾಷ್ಟ್ರಪತಿ ಪದಕ ಭಾಗ್ಯ

ಗಣರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ಪೊಲೀಸ್‌ ಮತ್ತು ದೇಶದ ವಿವಿಧ ಭದ್ರತಾ ಪಡೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಪತಿ ಪದಕವನ್ನು ಸಾಮಾನ್ಯವಾಗಿ ರಾಜ್ಯದ ಅಧಿಕಾರಿಗಳು ಪ್ರತಿವರ್ಷವೂ ಪಡೆಯುತ್ತಿದ್ದರು.

Vijaya Karnataka Web 25 Jan 2019, 9:43 pm
ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿಗಳ ಆಂತರಿಕ ಕಲಹ ಹಾಗೂ ಸರಕಾರದ ನಿರ್ಲಕ್ಷ್ಯ ಧೋರಣೆಯ ಪರಿಣಾಮ ಪ್ರತಿಷ್ಠಿತ ರಾಷ್ಟ್ರಪತಿ ಪದಕದ ಭಾಗ್ಯ ಈ ವರ್ಷ ಕರ್ನಾಟಕದ ಯಾರೊಬ್ಬರಿಗೂ ಬಂದಿಲ್ಲ.
Vijaya Karnataka Web police


ಗಣರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷ ಪೊಲೀಸ್‌ ಮತ್ತು ದೇಶದ ವಿವಿಧ ಭದ್ರತಾ ಪಡೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರಪತಿ ಪದಕವನ್ನು ಸಾಮಾನ್ಯವಾಗಿ ರಾಜ್ಯದ ಅಧಿಕಾರಿಗಳು ಪ್ರತಿವರ್ಷವೂ ಪಡೆಯುತ್ತಿದ್ದರು.

ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ತಮ್ಮನ್ನು ಪುರಸ್ಕಾರಕ್ಕೆ ಪರಿಗಣಿಸಿಲ್ಲ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣದಲ್ಲಿ (ಸಿಎಟಿ) ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ರಾಜ್ಯದಿಂದ ಅರ್ಹರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೆ ನಿಗದಿತ ಸಮಯದೊಳಗೆ ಕಳುಹಿಸಲು ಆಗಿಲ್ಲ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಜ.25ರಂದು ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್‌ ಪದಕ, ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಸೇರಿ ನಾಲ್ಕು ವಿಭಾಗಗಳಲ್ಲಿ ಪದಕಗಳಿಗೆ ಹೆಸರು ಘೋಷಣೆ ಮಾಡಲಾಗುತ್ತದೆ. ರಾಷ್ಟ್ರಪತಿ ಭವನದಿಂದ ರಾಜಭವನಕ್ಕೆ ಪದಕಗಳನ್ನು ರವಾನಿಸಲಾಗುತ್ತದೆ. ರಾಜಭವನದಲ್ಲಿ ರಾಜ್ಯಪಾಲರು ಪದಕ ಪ್ರಧಾನ ಮಾಡಿ ಗೌರವಿಸುವುದು ಸಂಪ್ರದಾಯ.

2018ರಲ್ಲಿ ಐಪಿಎಸ್‌ ಅಧಿಕಾರಿಗಳು ಸೇರಿ 25 ಸಿಬ್ಬಂದಿಗೆ ಪದಕ ಲಭಿಸಿತ್ತು. ಪೊಲೀಸ್‌ ಪಡೆಯಲ್ಲಿ ಉತ್ಸಾಹ, ಹುಮ್ಮಸ್ಸು, ಗೌರವ ಜೊತೆಗೆ ಸೇವೆ ಗುರುತಿಸಲಾಗಿದೆ ಎಂಬ ಭಾವನೆ ಮೂಡಿಸುವ ಪದಕವೂ ಅತ್ಯಂತ ಮಹತ್ವದ್ದು, ಆದರೆ, ಈ ಬಾರಿ ಐಪಿಎಸ್‌ ಅಧಿಕಾರಿಗಳ ಒಳಜಗಳ ಮತ್ತು ಸರಕಾರದ ನಿರ್ಲಕ್ಷ್ಯತನದಿಂದ ಕೈ ತಪ್ಪಿವೆ ಎಂದು ಪೊಲೀಸ್‌ ಇಲಾಖೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಪಟ್ಟಿ ಕಳುಹಿಸಲಾಗಿತ್ತು
ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಾನ್ಸ್‌ಟೇಬಲ್‌ಗಳವರೆಗೆ ಒಟ್ಟು 33 ಮಂದಿಯ ಹೆಸರನ್ನು ನವೆಂಬರ್‌ ಮೊದಲ ವಾರದಲ್ಲಿ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಿಂದ ಗೃಹ ಇಲಾಖೆಗೆ ರವಾನಿಸಲಾಗಿತ್ತು. ಸಿಎಟಿಯಿಂದ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ರವಾನಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಗೃಹ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯ ಸರಕಾರ, ಹಿರಿಯ ಅಧಿಕಾರಿಯೊಬ್ಬರ ಮನವೊಲಿಸಿದ್ದರೆ ಪದಕ ಪಟ್ಟಿ ಕಳುಹಿಸಲು ಯಾವುದೇ ತೊಂದರೆ ಆಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

855 ಪದಕ
ಕರ್ನಾಟಕ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಬಿಎಸ್‌ಎಫ್‌, ಎನ್‌ಎಸ್‌ಜಿ ಸೇರಿದಂತೆ 50 ಪಡೆಗಳ 855 ಅಧಿಕಾರಿ ಮತ್ತು ಸಿಬ್ಬಂದಿಗೆ ಗಣರಾಜ್ಯತ್ಸೋವ ಪದಕ ಲಭಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ