ಆ್ಯಪ್ನಗರ

ಮಹದಾಯಿ ತೀರ್ಪಿನ ವಿರುದ್ಧ ಮೇಲ್ಮನವಿ ನಿಶ್ಚಿತ: ಡಿಕೆಶಿ

ಮಹದಾಯಿ ಜಲ ವಿವಾದ ಸಂಬಂಧ ನ್ಯಾಯಮಂಡಳಿ ಇತ್ತೀಚೆಗೆ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Vijaya Karnataka 19 Aug 2018, 8:28 am
ಬೆಂಗಳೂರು: ಮಹದಾಯಿ ಜಲ ವಿವಾದ ಸಂಬಂಧ ನ್ಯಾಯಮಂಡಳಿ ಇತ್ತೀಚೆಗೆ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.
Vijaya Karnataka Web d k s


ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'' ನಮ್ಮ ನೀರು, ನಮ್ಮ ಹಕ್ಕು, ಇದು ನಮ್ಮ ಬದ್ಧತೆ. ಮಹದಾಯಿ ನ್ಯಾಯಮಂಡಳಿಯು ರಾಜ್ಯಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಿಲ್ಲ. 34 ಟಿಎಂಸಿ ನೀರು ಕೇಳಿದ್ದರೂ ಅರ್ಧದಷ್ಟು ನೀರು ಸಹ ನಮಗೆ ದೊರೆತಿಲ್ಲ. ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್‌ ಉತ್ಪಾದನೆಗೆ ನಮಗೆ ಅಗತ್ಯವಿರುವಷ್ಟು ನೀರು ಲಭ್ಯವಾಗಿಲ್ಲ. ಹೀಗಾಗಿ ಈ ತೀರ್ಪನ್ನು ಕರ್ನಾಟಕ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಗೋವಾ ಸಹ ನ್ಯಾಯಮಂಡಳಿ ತೀರ್ಪಿಗೆ ತಕರಾರು ತೆಗೆದಿದೆ. ಹೀಗಾಗಿ ಮೇಲ್ಮನವಿ ಅನಿವಾರ್ಯ,'' ಎಂದು ಪ್ರತಿಪಾದಿಸಿದರು.

''ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕೋ ಅಥವಾ ನ್ಯಾಯಮಂಡಳಿಯ ಮುಂದೆಯೇ ಮೇಲ್ಮನವಿ ಸಲ್ಲಿಸಬೇಕೋ ಎಂಬ ಗೊಂದಲಗಳಿವೆ. ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯದ ಮಟ್ಟಿಗೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದು ಸೂಕ್ತ,'' ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

''ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರು ಅಂತಾರಾಜ್ಯ ನದಿ ನೀರು ಹಂಚಿಕೆ ಕುರಿತು ಇದೇ 20 ರಂದು ದಿಲ್ಲಿಯಲ್ಲಿ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದು ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ವಿಚಾರದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಲಾಗುವುದು,'' ಎಂದು ಹೇಳಿದರು.

''ರಾಜ್ಯದ ಹಲವು ಕಡೆ ಸುರಿದ ಉತ್ತಮ ಮಳೆಯಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಅಧಿಕಾರಿಗಳು ಜಲಾಶಯಗಳ ಗಸ್ತು ನಡೆಸುತ್ತಿದ್ದಾರೆ. ಸಾರ್ವಜನಿಕ ಸಂಚಾರ ಕೂಡ ನಿಷೇಧಿಸಲಾಗಿದೆ. ಕೆಲವು ಕಡೆ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ಕೆರೆಗಳನ್ನು ತುಂಬಿಸುವುದಕ್ಕೆ ಚಾಲನೆ ಕೊಡಲಾಗಿದೆ,'' ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ