ಆ್ಯಪ್ನಗರ

ಬಂಡಾಯ ಶಾಸಕರು ಅತೃಪ್ತರಲ್ಲ, ಸಂತೃಪ್ತರು: ನಂಬಿಕೆ ದ್ರೋಹಿಗಳು ನೀವು ಎಂದು ಜರಿದ ಡಿಕೆಶಿ

''ನೀವ್ಯಾರೂ ಬಿಜೆಪಿ ಸರಕಾರದಲ್ಲಿ ಸಚಿವರಾಗಲು ಸಾಧ್ಯವೇ ಇಲ್ಲ ಬಿಜೆಪಿ ಟ್ರ್ಯಾಪ್‌ಗೆ ಸಿಕ್ಕಿ ನೀವು ರಾಜಕೀಯವಾಗಿ ಸಮಾಧಿಯಾಗಿದ್ದೀರಿ...

Vijaya Karnataka 24 Jul 2019, 5:00 am
ಬೆಂಗಳೂರು: ''ನೀವ್ಯಾರೂ ಬಿಜೆಪಿ ಸರಕಾರದಲ್ಲಿ ಸಚಿವರಾಗಲು ಸಾಧ್ಯವೇ ಇಲ್ಲ. ಬಿಜೆಪಿ ಟ್ರ್ಯಾಪ್‌ಗೆ ಸಿಕ್ಕಿ ನೀವು ರಾಜಕೀಯವಾಗಿ ಸಮಾಧಿಯಾಗಿದ್ದೀರಿ. ನಂಬಿಕೆ ದ್ರೋಹ ಬಗೆದಿರುವ ನಿಮಗೆ ರಾಜಕೀಯ ಭವಿಷ್ಯವಿಲ್ಲ'' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿಧಾನಸಭೆಯಲ್ಲಿ ಮಂಗಳವಾರ ಬಂಡಾಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web 2307-2-2-01 (25)


''ಧರ್ಮಸಿಂಗ್‌ ಸರಕಾರದಲ್ಲಿ ನನ್ನನ್ನು ಹೊರಗಿಟ್ಟಾಗ, ಸಿದ್ದರಾಮಯ್ಯ 6 ತಿಂಗಳು ಸಂಪುಟಕ್ಕೆ ತೆಗೆದುಕೊಳ್ಳದಿದ್ದಾಗ, ನನ್ನ ಮನೆ ಮೇಲೆ ಐಟಿ, ಇಡಿ ದಾಳಿ ನಡೆದಾಗ ನೋವಾಗಲಿಲ್ಲ. ಆದರೆ, ದಶಕಗಳ ಮಿತ್ರರಾದ ನೀವು ಬೆನ್ನಿಗೆ ಚೂರಿ ಹಾಕಿದ್ದರ ನೋವು ಸಹಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಮನೆ ಮಕ್ಕಳೆಂದು ರಾಜಕೀಯ ಭವಿಷ್ಯಕ್ಕೆ ನಾನು ಪಲ್ಲಕ್ಕಿ ಹೊತ್ತಿದ್ದೇನೆ. ನಿಮ್ಮ ರಾಜಕೀಯ ಬೆಳವಣಿಗೆಯಲ್ಲಿ ನನ್ನ ಸಣ್ಣ ಪಾತ್ರ ಇದೆ. ನಂಬಿಕೆ ದ್ರೋಹ ಮಾಡಿದ್ದೀರಿ. ನನ್ನ ಹೊಟ್ಟೆ ಉರಿಯುತ್ತಿದೆ'' ಎಂದು ಸದನದಲ್ಲಿ ನೋವು ತೋಡಿಕೊಂಡರು.

ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು ''ನೀವು ಅತೃಪ್ತರಲ್ಲ, ಸಂತೃಪ್ತರು. ಸೋಮವಾರ ರಾತ್ರಿಯೂ ಮುಂಬಯಿಯಲ್ಲಿರುವ ಬಂಡಾಯ ಶಾಸಕರು ನನ್ನೊಂದಿಗೆ ಮಾತನಾಡಿದರು. ಒಬ್ಬ ಡಿಸಿಎಂ ಆಗ್ತಾನೆ, ಇನೊಬ್ಬ ನೀರಾವರಿ ಸಚಿವನಾಗ್ತಾನೆ, ಮಗದೊಬ್ಬ ಗೃಹ ಸಚಿವನಾಗ್ತಾನೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಬಿಜೆಪಿಯವರು ಈ ಎಲ್ಲ 15 ಜನರನ್ನು ರಾಜಕೀಯವಾಗಿ ಸಮಾಧಿ ಮಾಡಿಬಿಟ್ಟಿದ್ದಾರೆ. 11ನೇ ದಿನದ ಕಾರ್ಯಕ್ಕೆ ಮೈಸೂರು ಮಲ್ಲಿಗೆ, ಸೇವಂತಿಗೆಯೊಂದಿಗೆ ಬರುವುದಷ್ಟೇ ಬಾಕಿ ಇದೆ'' ಎಂದು ವ್ಯಂಗ್ಯವಾಡಿದರು.

''ಇತ್ತೀಚೆಗೆ ವಿಶ್ವನಾಥ್‌ ಬಿಡುಗಡೆ ಮಾಡಿರುವ 'ಮಲ್ಲಿಗೆ ಮಾತು' ಪುಸ್ತಕದಲ್ಲಿ ಹುಟ್ಟಿ ಬೆಳೆದ ಪಕ್ಷ ಧಿಕ್ಕರಿಸಿ ಶತ್ರು ಮನೆಯಲ್ಲಿ ಆಸರೆಗೆ ಹೋಗುವರನ್ನು ಏನೆನ್ನಬೇಕು. ಹೊಸ ಹುಲ್ಲುಗಾವಲಲ್ಲಿ ಮೇಯಲು ಹೊರಟಿದ್ದಾರೆ ಎಂದು ಹೇಳಲೇ..., ಎಂದು ಪಕ್ಷಾಂತರಿಗಳ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಈಗ ವಿಶ್ವನಾಥ್‌ ಯಾವ ಹುಲ್ಲುಗಾವಲುಗೆ ಮೇಯಲು ಹೋಗಿದ್ದಾರೆ '' ಎಂದು ಪ್ರಶ್ನಿಸಿದರು.

ನನಗೇ ಶಕ್ತಿ ಇರಲಿಲ್ಲವೇ ?

''ಕಾಂಗ್ರೆಸ್‌ನ ಐವರು ಶಾಸಕರು ರಾಜೀನಾಮೆ ಕೊಡಲು ಸ್ಪೀಕರ್‌ ಬಳಿ ಬಂದಾಗ ನಾನು ಅವರನ್ನು ಮನೆಗೆ ಕರೆದೊಯ್ದೆ. ಆ ಸಂದರ್ಭದಲ್ಲಿ ಅವರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ‌ ಇರಲಿಲ್ಲವೇ? ಮುನಿರತ್ನರನ್ನು ಲಾಕ್‌ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. ಆದರೆ, ದಶಕಗಳ ಕಾಲ ಒಟ್ಟಿಗೇ ಬೆಳೆದ ಸ್ನೇಹಿತರ ಮೇಲೆ ನಂಬಿಕೆ ಇಟ್ಟೆ. ವಿಶ್ವಾಸದ್ರೋಹವಾಯಿತು'' ಎಂದು ವಿಶೇಷವಾಗಿ ಬೆಂಗಳೂರಿನ ಅತೃಪ್ತ ಶಾಸಕರನ್ನು ಗುರಿಯಾಗಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದರು.


ನೊಂದಿದ್ದೇನೆ, ಜೈಲಿಗೆ ಹೋಗಲೂ ಸಿದ್ಧ

''ಗುಜರಾತ್‌ನ ಮುಸ್ಲಿಂ ನಾಯಕರೊಬ್ಬರ ಬೆನ್ನಿಗೆ ನಿಂತೆ ಎಂಬ ಕಾರಣಕ್ಕೆ ಐಟಿ, ಇಡಿಯಿಂದ ಬೇಕಾದಷ್ಟು ಕಷ್ಟ, ನೋವು ಅನುಭವಿಸಿದ್ದೇನೆ. ಪಕ್ಷದ ಸೂಚನೆಯಂತೆ ಸ್ನೇಹಿತರೊಬ್ಬರ ಬೆಂಬಲಕ್ಕೆ ನಿಂತಿದ್ದಕ್ಕೆ ಇದೆಲ್ಲವನ್ನೂ ಅನುಭವಿಸಲು ನಾನು ಸಿದ್ಧನಿದ್ದೇನೆ. ಬಂಗಾರಪ್ಪ, ಎಸ್‌.ಎಂ.ಕೃಷ್ಣ ನನ್ನನ್ನು ಸಚಿವನಾಗಿ ಮಾಡಿ ಬೆಳೆಸಿದರು. ಮೊದಲ ಬಾರಿಗೆ ಜೈಲು ಮಂತ್ರಿಯಾಗಿದ್ದ ನಾನು ಅದೇ ಜೈಲಿಗೆ ಹೋಗಲೂ ಮಾನಸಿಕವಾಗಿ ತಯಾರಾಗಿದ್ದೇನೆ. ಬಿಜೆಪಿಯವರು ನನ್ನನ್ನು ಜೈಲಿಗೆ ಅಟ್ಟಲೇಬೇಕು ಎಂದು ತಂತ್ರ ಹೆಣೆದಿದ್ದಾರೆ. ಸ್ವಾಭಿಮಾನಕ್ಕಾಗಿ ಬದುಕಿರುವ ನಾನು ಇದಕ್ಕೆಲ್ಲಾ ಹೆದರುವುದಿಲ್ಲ'' ಎಂದು ಗುಡುಗಿದರು.

ಬಿಎಸ್‌ವೈ ಛಲಕ್ಕೆ ಅಭಿನಂದನೆ!

''ಯಶಸ್ಸಿಗೆ ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ, ವಿದುರನ ನೀತಿ, ಕೃಷ್ಣನ ತಂತ್ರದಂತೆ ಯಡಿಯೂರಪ್ಪನ ಛಲವೂ ಬೇಕು. ಸತತ 6 ಬಾರಿ ಪ್ರಯತ್ನದಲ್ಲಿ ಸೋಲಾದರೂ ಎದೆಗುಂದದೆ 7ನೇ ಬಾರಿಗೆ ನಮ್ಮ 15 ಶಾಸಕರನ್ನು ಕದ್ದೊಯ್ದ ಯಡಿಯೂರಪ್ಪ ಅವರನ್ನು ಅಭಿನಂದಿಸುವೆ'' ಎಂದು ಶಿವಕುಮಾರ್‌ ಟಾಂಗ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ