ಆ್ಯಪ್ನಗರ

ಕೆಎಂಎಫ್‌ನಿಂದ ವಿಟಮಿನ್‌ಯುಕ್ತ ಹಾಲು ಬಿಡುಗಡೆ

ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್‌)ವು ವಿಟಮಿನ್‌ 'ಎ' ಹಾಗೂ ...

Vijaya Karnataka 31 Jul 2019, 5:00 am
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್‌)ವು ವಿಟಮಿನ್‌ 'ಎ' ಹಾಗೂ 'ಡಿ' ಸಾರವರ್ಧನೆ(ಫೋರ್ಟಿಫಿಕೇಷನ್‌) ಮಾಡಿರುವ 'ನಂದಿನಿ' ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Vijaya Karnataka Web BNG-3007-2-2-NANDINI BIDUGADE


ನಗರದಲ್ಲಿರುವ ಕೆಎಂಎಫ್‌ ಕೇಂದ್ರ ಕಚೇರಿಯಲ್ಲಿ ನೂತನ ಉತ್ಪನ್ನವನ್ನು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಡಾ.ಮಂಜುನಾಥ್‌ ''ದೇಶದ ಶೇ.70ರಷ್ಟು ಜನರು ವಿಟಮಿನ್‌ 'ಎ' ಹಾಗೂ 'ಡಿ' ಜೀವಸತ್ವಗಳ ಕೊರತೆ ಎದುರಿಸುತ್ತಿದ್ದಾರೆ. ಇದರಿಂದ ಇರುಳು ಅಂಧತ್ವ, ಮೂಳೆ, ಹೃದ್ರೋಗ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದೆ. ಸೂರ್ಯನ ಬಿಸಿಲಿಗೆ ಶರೀರವನ್ನು ಹೆಚ್ಚು ಸಮಯ ಒಡ್ಡದ ಕಾರಣ ಜೀವಸತ್ವಗಳ ಕೊರತೆ ಉಂಟಾಗುತ್ತಿದ್ದು, ಅವುಗಳನ್ನು ಹಾಲಿನ ಮೂಲಕ ಮರಳಿ ಪಡೆದುಕೊಳ್ಳುವ ಕೆಎಂಎಫ್‌ ಶ್ರಮ ಸಾರ್ಥಕ,'' ಎಂದರು.

''ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕ್ರಮ ತಪ್ಪಿರುವುದಕ್ಕೆ ಹೆಚ್ಚು ಜನರು ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಶೇ.25ರಷ್ಟು ಮಂದಿ ಹೃದ್ರೋಗಿಗಳಲ್ಲಿ 40 ವರ್ಷದೊಳಗಿನವರಾಗಿದ್ದಾರೆ. ಇತ್ತೀಚಿಗೆ 20-40 ವಯೋಮಾನದವರು ಸಕ್ಕರೆ ಕಾಯಿಲೆ, ಹೃದ್ರೋಗಕ್ಕೆ ಹೆಚ್ಚು ಈಡಾಗುತ್ತಿದ್ದು, 'ಮದುಮಕ್ಕಳಲ್ಲಿ ಮಧುಮೇಹ' ಎಂಬ ನಾಣ್ನುಡಿ ಚಾಲ್ತಿಗೆ ಬರುವಂತಾಗಿದೆ. ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಪೌಷ್ಟಿಕಾಂಶದ ಕಣಜವಾಗಲಿ,'' ಎಂದು ಅವರು ಹಾರೈಸಿದರು.

ಗ್ರಾಹಕರಿಗೆ ಹೊರೆ ವರ್ಗಾವಣೆ ಇಲ್ಲ

ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಎಂ.ಟಿ.ಕುಲಕರ್ಣಿ ಮಾತನಾಡಿ ''ಸಂಸ್ಥೆ ಪೂರೈಸುತ್ತಿರುವ ಎಲ್ಲ ಬಗೆಯ ಹಾಲಿನಲ್ಲಿ ಜೀವಸತ್ವಗಳನ್ನು ಸೇರಿಸಲಾಗಿದೆ. ಇದಕ್ಕಾಗಿ ಪ್ರತಿ ಲೀ. ಹಾಲಿಗೆ 3-4 ಪೈಸೆ ವೆಚ್ಚವಾಗಲಿದ್ದು, ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಟಾಟಾ ಟ್ರಸ್ಟ್‌ ತನ್ನ ಸಿಎಸ್‌ಆರ್‌ ನಿಧಿಯಡಿ ವರ್ಷದ ಮಟ್ಟಿಗೆ ಹಣ ಭರಿಸಲಿದ್ದು, ಆನಂತರ ಸಂಸ್ಥೆಯೇ ಹಣ ಹೊಂದಿಸಿಕೊಳ್ಳಲಿದೆ,'' ಎಂದು ಸ್ಪಷ್ಟಪಡಿಸಿದರು.

ಕೆಎಂಎಫ್‌ ನಿರ್ದೇಶಕ(ಆಡಳಿತ) ಬಿ.ಎಂ.ಸುರೇಶ್‌ಕುಮಾರ್‌, ಪಶು ಇಲಾಖೆಯ ನಿರ್ದೇಶಕ ಡಿ.ಎನ್‌.ಹೆಗಡೆ, ಎನ್‌ಡಿಡಿಬಿಯ ಡಿಜಿಎಂ ಜೈ ಸಿಂಘಾನಿ ಮತ್ತಿತರರಿದ್ದರು.

1000 ಕೆ.ಜಿ. ಮಿಲ್ಲೆಟ್‌ ಲಡ್ಡು ಮಾರಾಟದ ಗುರಿ

''ಸಿರಿಧಾನ್ಯಗಳಿಂದ ತಯಾರಿಸಿರುವ 'ಮಿಲ್ಲೆಟ್‌ ಲಡ್ಡು' ನೂತನವಾಗಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿತ್ಯ 1000 ಕೆ.ಜಿ. ಮಿಲ್ಲೆಟ್‌ ಲಡ್ಡು ಮಾರಾಟ ಮಾಡುವ ಗುರಿ ಹೊಂದಲಾಗಿದೆ,'' ಎಂದು ಎಂ.ಟಿ.ಕುಲಕರ್ಣಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ