ಆ್ಯಪ್ನಗರ

ಕೊರೊನಾ ಎಫೆಕ್ಟ್: ರೇಷ್ಮೆ ಬೆಳೆಗಾರರ ನೆರವಿಗೆ ಬರಲು ಬಿಎಸ್‌ವೈಗೆ ಡಿಕೆಶಿ ಪತ್ರ

ಕೊರೊನಾ ಲಾಕ್ ಡೌನ್‌ನಿಂದಾಗಿ ತೊಂದರೆಯನ್ನು ಅನುಭವಿಸುತ್ತಿರುವ ರೇಷ್ಮೆ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.

Vijaya Karnataka Web 25 Mar 2020, 5:15 pm
ಬೆಂಗಳೂರು: ಕೊರೊನಾ ಕಾರಣದಿಂದಾಗಿ ತಾವು ಉತ್ಪಾದಿಸಿದ ರೇಷ್ಮೆ ಗೂಡುಗಳನ್ನು ವಿಲೇವಾರಿ ಮಾಡಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ರೇಷ್ಮೆ ಬೆಳೆಗಾರರು, ಇದರಿಂದ ಪರೋಕ್ಷ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರೇಷ್ಮೆ ಬಿಚ್ಚಾಣಿಕೆದಾರರ ನೆರವಿಗೆ ಬರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
Vijaya Karnataka Web dk shivakumar


ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಮಳವಳ್ಳಿ, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಕಡೆ ರೇಷ್ಮೆ ಬೆಳೆಗಾರರು ಗೂಡುಗಳನ್ನು ಉತ್ಪಾದಿಸಿಟ್ಟಿದ್ದಾರೆ. ಆದರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್ ಡೌನ್ ನಿಂದಾಗಿ ರೈತರು ರೇಷ್ಮೆ ಗೂಡುಗಳನ್ನು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ.

ಕೊರೊನಾ ತಡೆ : ನೆರವಿಗೆ ಮುಂದಾದ ಎನ್ ಜಿ ಓ ಹಾಗೂ ದಾನಿಗಳು

ಒಂದು ಕಡೆ ಮಾರುಕಟ್ಟೆ ಬಂದ್ ಆಗಿದೆ. ಇನ್ನೊಂದೆಡೆ ರೈತರು ಮನೆಯಿಂದ ಹೊರಗೆ ಕಾಲಿಡಲಾಗುತ್ತಿಲ್ಲ. ಇದರಿಂದ ಉತ್ಪನ್ನ ಹಾಳಾಗುತ್ತಿದೆ. ಜತೆಗೆ ರೇಷ್ಮೆ ಬಿಚ್ಚಾಣಿಕೆದಾರರೂ ಕೆಲಸವಿಲ್ಲದೆ ದಿನನಿತ್ಯದ ಬದುಕಿಗೆ ಪರಿತಪಿಸುತ್ತಿದ್ದಾರೆ.

ಹೀಗಾಗಿ ರಾಜ್ಯ ಸರಕಾರವೇ ರೈತರಿಂದ ರೇಷ್ಮೆ ಗೂಡುಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು. ಇಲ್ಲವೇ ರೈತರೇ ರೇಷ್ಮೆ ಮಾರುಕಟ್ಟೆಗಳಿಗೆ ಗೂಡುಗಳನ್ನು ತಂದು ಬಿಕರಿ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕಮಲ್‌ನಾಥ್‌ ಸುದ್ದಿಗೋಷ್ಠಿಯಲ್ಲಿದ್ದ ಜರ್ನಲಿಸ್ಟ್‌ಗೆ ಕೊರೊನಾ, ಸ್ವಯಂ-ನಿರ್ಬಂಧದಲ್ಲಿ ಉಳಿದ ಪತ್ರಕರ್ತರು

ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಇಂದಿನ ಅಗತ್ಯ ಎಂಬುದು ಸರಿ. ಆದರೆ ಅದರಿಂದ ರೈತರ ಉತ್ಪನ್ನಗಳು ನಾಶವಾಗಬಾರದು. ಹಾಗೇನಾದರೂ ಆದರೆ ಯಾರಿಗೂ ಲಾಭವಾಗದೆ ರಾಷ್ಟ್ರೀಯ ನಷ್ಟ ಆಗುತ್ತದೆ. ರಾಜ್ಯದಲ್ಲಿ ರೇಷ್ಮೆ ಬೆಳೆಗಾರರೂ ಹೆಚ್ಚು ಇದ್ದಾರೆ.

ರೈತರ ಸಂಕಷ್ಟವೇನೆಂಬುದು ನನಗೆ ಚೆನ್ನಾಗಿ ಗೊತ್ತು. ರೇಷ್ಮೆ ಗೂಡು ಹಾಳಾಗಬಾರದು. ಹೀಗಾಗಿ ರೇಷ್ಮೆಗೂಡು ವಿಲೇವಾರಿಗೆ ರಾಜ್ಯ ಸರಕಾರ ಮಾರುಕಟ್ಟೆ ಒದಗಿಸಬೇಕು. ರೇಷ್ಮೆನೂಲು ಬಿಚ್ಚಾಣಿಕೆದಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ