ಆ್ಯಪ್ನಗರ

ಲಕ್ಷ್ಮೀ ಹೆಬ್ಬಾಳ್ಕರ್ ಬದಲಾವಣೆಗೆ ಪಟ್ಟು: ಕೆಪಿಸಿಸಿ ಮಹಿಳಾ ಘಟಕದಲ್ಲಿ ಶೀತಲ ಸಮರ

ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಬದಲಿಸುವಂತೆ ಪಕ್ಷದೊಳಗೆ ಒತ್ತಡ ಶುರವಾಗಿದೆ...

Vijaya Karnataka 2 Oct 2018, 9:10 am
ಬೆಂಗಳೂರು: ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಬದಲಿಸುವಂತೆ ಪಕ್ಷದೊಳಗೆ ಒತ್ತಡ ಶುರವಾಗಿದೆ.
Vijaya Karnataka Web laxmi hebbalakar- congress


ಈ ಹುದ್ದೆಯ ಆಕಾಂಕ್ಷಿ ನಾಗಲಕ್ಷ್ಮೀ ಚೌದರಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದಾರೆ. ಜತೆಗೆ ಇನ್ನೂ ಕೆಲವರು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಲಕ್ಷ್ಮೀ ಅವರನ್ನು ಬದಲಿಸುವಂತೆ ಕೆಲವರು ಒತ್ತಡ ತಂದಿದ್ದರು. ಚುನಾವಣೆ ಇದ್ದದ್ದರಿಂದ ಈ ಒತ್ತಾಯಕ್ಕೆ ಕಾಂಗ್ರೆಸ್‌ ವರಿಷ್ಠರು ಮಾನ್ಯತೆ ನೀಡಿರಲಿಲ್ಲ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್‌ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆಯೆಂಬ ಸೂತ್ರದಂತೆ ಮಹಿಳಾ ಕಾಂಗ್ರೆಸ್‌ನ ಹೊಣೆಗಾರಿಕೆಯನ್ನು ಬೇರೆಯವರಿಗೆ ವಹಿಸಬೇಕು ಎಂದು ಲಕ್ಷ್ಮೀ ವಿರೋಧಿಗಳು ಆಗ್ರಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆ ರಾಜಕಾರಣದ ವಿಚಾರದಲ್ಲಿ ಜಾರಕಿಹೊಳಿ ಸಹೋದರರ ವಿರೋಧವನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಕಟ್ಟಿಕೊಂಡಿದ್ದರು. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಂಘರ್ಷದಿಂದ ದೋಸ್ತಿ ಸರಕಾರಕ್ಕೆ ಕಂಟಕವಾಗುವ ಆತಂಕ ಎದುರಾಗಿತ್ತು. ಲಕ್ಷ್ಮೀ ಪ್ರತಿಷ್ಠೆಗೆ ಬಿದ್ದಿದ್ದರಿಂದಲೇ ಇಂತಹ ಬಿಕ್ಕಟ್ಟು ಸೃಷ್ಟಿಯಾಗುವಂತಾಯಿತು. ಹಾಗಾಗಿ ಅವರನ್ನು ನಿಯಂತ್ರಿಸುವ ಕಾರ್ಯವಾಗಬೇಕು ಎಂಬ ಒತ್ತಡವೂ ಪಕ್ಷದ ವಲಯದಲ್ಲಿದೆ. ಈ ಕಾರಣದಿಂದಲೂ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುರುಕಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ನಾಗಲಕ್ಷ್ಮೀ ಚೌದರಿ ಅವರಿಗೆ ಸಿದ್ದರಾಮಯ್ಯ ಬೆಂಬಲವಿದೆ. ಹಾಗೆಯೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕಮಲಾಕ್ಷಿ ರಾಜಣ್ಣ, ಡಾ. ಪುಷ್ಪ ಅಮರನಾಥ್‌ ಅವರೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಲಕ್ಷ್ಮೀ ಪ್ರತಿತಂತ್ರ

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಅವರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಹುದ್ದೆಯಲ್ಲಿ ಮುಂದುವರಿಯಲು ಎಲ್ಲ ರೀತಿಯ ಪಟ್ಟು ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆ ಸನಿಹ ಇರುವುದರಿಂದ ತಮ್ಮನ್ನು ಪದಚ್ಯುತಗೊಳಿಸುವುದಿಲ್ಲ ಎಂಬ ವಿಶ್ವಾಸವೂ ಅವರದ್ದಾಗಿದೆ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ತಮ್ಮ ಬೆಂಬಲಿಗರಾದ ಸುಷ್ಮಾ ರಾಜಗೋಪಾಲರೆಡ್ಡಿ ಅಥವಾ ಭಾರತಿ ಶಂಕರ್‌ ಅವರಿಗೆ ಈ ಹುದ್ದೆ ಕೊಡಿಸುವುದು ಹೆಬ್ಬಾಳ್ಕರ್‌ ಲೆಕ್ಕಾಚಾರವಾಗಿದೆ. ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಪ್ರತಿತಂತ್ರ ಹೂಡಲು ಮುಂದಾಗಿದ್ದಾರೆ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ