ಆ್ಯಪ್ನಗರ

ಕೆ.ಆರ್‌.ಪೇಟೆ ಉಪಚುನಾವಣೆ ರೇಸ್‌ನಲ್ಲಿ ನಾನಿಲ್ಲ: ನಿಖಿಲ್‌

ಕೆಆರ್‌...

Vijaya Karnataka 6 Aug 2019, 5:00 am
ಬೆಂಗಳೂರು: ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಗೆ ಅಭ್ಯರ್ಥಿಯಾಗಲು ಬಯಸಿಲ್ಲ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web nikil


''ಲೋಕಸಭಾ ಚುನಾವಣೆ ಸೋಲಿನ ಆತ್ಮಾವಲೋಕನದಲ್ಲಿ ತೊಡಗಿದ್ದೇನೆ. ಜನರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದೇನೆ. ಕೆ.ಆರ್‌.ಪೇಟೆಯಲ್ಲಿ ಸ್ಪರ್ಧೆಗೆ ತಯಾರಿ ನಡೆಸಿದ್ದೇನೆ ಎಂಬುದು ಸುಳ್ಳು'' ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಮಾತನಾಡಿ,''ಮಂಡ್ಯದ ಸೋಲಿನಿಂದ ಬೇಸರವಾಗಿಲ್ಲ ಬದಲಿಗೆ, ಒಳ್ಳೆಯ ಅನುಭವವಾಗಿದೆ. ಪಕ್ಷದ ಯುವಘಟಕದ ಅಧ್ಯಕ್ಷನಾಗಿ ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧ್ದಪಡಿಸಿ ವರಿಷ್ಠರಿಗೆ ಸಲ್ಲಿಸಲು ಬಯಸಿದ್ದೇನೆ. ಅಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ'' ಎಂದು ಹೇಳಿದರು.

''ಕೆ.ಆರ್‌.ಪೇಟೆ ಪಕ್ಷದ ಭದ್ರಕೋಟೆಯಾಗಿದ್ದು, ದೇವೇಗೌಡರ ಕುಟುಂಬದವರೇ ಬಂದು ಸ್ಪರ್ಧೆ ಮಾಡಬೇಕು ಎಂಬುದು ಸರಿಯಲ್ಲ. ಪಕ್ಷದ ನಿಷ್ಠಾವಂತರೊಬ್ಬರಿಗೆ ಅಭ್ಯರ್ಥಿಯಾಗಲು ಅವಕಾಶ ಕೊಡಬೇಕು ಎಂಬುದು ವೈಯಕ್ತಿಕ ಅಭಿಪ್ರಾಯ'' ಎಂದರು.

''ಪಕ್ಷ ಸಂಘಟನೆ ಬಲಪಡಿಸುವುದು ಹಾಗೂ ಸದಸ್ಯತ್ವ ಅಭಿಯಾನ ಆರಂಭಿಸುವ ಕುರಿತು ಸಭೆ ನಡೆಸಲಾಗಿದ್ದು, ಈ ತಿಂಗಳ 7 ರಂದು ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್‌ ನಿಷ್ಠಾವಂತರ ಸಮಾವೇಶ ನಡೆಸಲಾಗುತ್ತಿದೆ. ಯುವಕನಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ,'' ಎಂದು ಹೇಳಿದರು.

ರಾಜಕಾರಣ, ಚಿತ್ರರಂಗದ ಗೊಂದಲ

ರಾಜಕೀಯ ಪ್ರವೇಶದ ಮೊದಲ ಪ್ರಯತ್ನದಲ್ಲೇ ಮಂಡ್ಯದಿಂದ ಲೋಕಸಭೆ ಪ್ರವೇಶ ಮಾಡುವ ಕನಸು ಭಗ್ನವಾದ ಬಳಿಕ ನಿಖಿಲ್‌ ಕುಮಾರಸ್ವಾಮಿ ರಾಜಕಾರಣವೋ ಅಥವಾ ಚಿತ್ರರಂಗದಲ್ಲಿ ಮುಂದುವರಿಯುವುದೋ ಎಂಬ ಆಯ್ಕೆ ಗೊಂದಲದಲ್ಲಿದ್ದಾರೆ. ಸಿನಿಮಾ ತಮ್ಮ ಕುಟುಂಬಕ್ಕೆ ಒಗ್ಗಿಬರುವುದಿಲ್ಲ, ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಗಂಭೀರ ಪ್ರಯತ್ನ ಮಾಡು ಎಂಬ ದೇವೇಗೌಡರ ಸಲಹೆಯಂತೆ ನಿಖಿಲ್‌ ಕ್ರಿಯಾಶೀಲರಾಗಿದ್ದಾರೆ. ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಪಕ್ಷದ ಕಚೇರಿಗೆ ಭೇಟಿ ನೀಡಿ ಪಕ್ಷದ ಯುವ ಕಾರ್ಯಕರ್ತರ ಸಭೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ