ಆ್ಯಪ್ನಗರ

ಬಂಡಾಯದ ಭೀತಿ; ಸಂಪುಟ ವಿಸ್ತರಣೆ ಮುಂದೂಡಿಕೆ

ಬಂಡಾಯದ ಭೀತಿ ಆವರಿಸಿದ್ದರಿಂದ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಿಕೆಯಾಗುವಂತಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮೇಲೆ ಇದರ ಪ್ರಭಾವವಾಗಬಹುದು ಎಂಬ ಆತಂಕದಿಂದ ಕಾಂಗ್ರೆಸ್‌ ನಾಯಕರು ದಿಲ್ಲಿ ಪ್ರವಾಸದಿಂದಲೂ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.

Vijaya Karnataka Web 25 May 2018, 10:55 pm
ಬೆಂಗಳೂರು: ಬಂಡಾಯದ ಭೀತಿ ಆವರಿಸಿದ್ದರಿಂದ ಸಮ್ಮಿಶ್ರ ಸರಕಾರದ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಿಕೆಯಾಗುವಂತಾಗಿದೆ. ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮೇಲೆ ಇದರ ಪ್ರಭಾವವಾಗಬಹುದು ಎಂಬ ಆತಂಕದಿಂದ ಕಾಂಗ್ರೆಸ್‌ ನಾಯಕರು ದಿಲ್ಲಿ ಪ್ರವಾಸದಿಂದಲೂ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.
Vijaya Karnataka Web kumar and param


ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ವಿಶ್ವಾಸಮತ ಗೆಲ್ಲುತ್ತಿದ್ದಂತೆ ಸಂಪುಟ ರಚನೆ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ ನಾಯಕರು ದಿಲ್ಲಿಗೆ ತೆರಳಲಿದ್ದಾರೆಂದು ಹೇಳಲಾಗಿತ್ತು. ಆದರೆ, ವಿಧಾನಸಭೆ ಕಲಾಪಕ್ಕೆ ತೆರೆ ಬೀಳುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಸಿದ ಕಾಂಗ್ರೆಸ್‌, ಜೆಡಿಎಸ್‌ ಪ್ರಮುಖರು ರಾಜರಾಜೇಶ್ವರಿನಗರ ಚುನಾವಣೆ ಬಳಿಕವೇ ಸಂಪುಟ ವಿಸ್ತರಣೆಗೆ ಕೈಹಾಕುವುದು ಒಳಿತು ಎಂಬ ನಿಲುವಿಗೆ ಬಂದರು ಎನ್ನಲಾಗಿದೆ.

ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಡಿಸಿಎಂ ಡಾ.ಜಿ. ಪರಮೇಶ್ವರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಭಾಗಿಯಾಗಿದ್ದ ಸಭೆಯಲ್ಲಿ ಸಂಪುಟ ರಚನೆ ಕುರಿತಂತೆ ಸಮಾಲೋಚಿಸಲಾಯಿತು. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಾಕಾಂಕ್ಷಿಗಳಿಂದ ತೀವ್ರ ಒತ್ತಡವಿದೆ.

ಜೆಡಿಎಸ್‌ನಲ್ಲೂ ಮಂತ್ರಿಮಂಡಲ ಸೇರಲು ಹಲವರು ಆಸಕ್ತರಾಗಿದ್ದಾರೆ. ಇಂತಹ ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಕಷ್ಟಸಾಧ್ಯ. ಸಂಪುಟಕ್ಕೆ ಸೇರುವವರ ಪಟ್ಟಿಯನ್ನು ತಕ್ಷಣಕ್ಕೆ ಅಂತಿಮಗೊಳಿಸಿದರೆ ಅಸಮಾಧಾನ ಭುಗಿಲೇಳಬಹುದು. ಇದರಿಂದ ರಾಜರಾಜೇಶ್ವರಿನಗರದಲ್ಲಿ ಹಿನ್ನಡೆಯಾಗಬಹುದು ಎಂಬ ಪ್ರಸ್ತಾಪವಾಯಿತು. ಹಾಗಾಗಿ ಮುಂದಿನ ವಾರದ ವರೆಗೂ ಕಾಯುವ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳಿಂದ ಖಚಿತ ಪಟ್ಟಿದೆ.

ಈಗಾಗಲೇ ಅಂತಿಮಗೊಂಡಿರುವಂತೆ 12:22 ರ ಸೂತ್ರದಡಿ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಸಚಿವ ಸ್ಥಾನಗಳ ಹಂಚಿಕೆಯಾಗಲಿದೆ. ಕಾಂಗ್ರೆಸ್‌ನಿಂದ ಸಚಿವರಾಗುವವರ ಪಟ್ಟಿಯನ್ನು ಖುದ್ದು ಹೈಕಮಾಂಡ್‌ ಸಿದ್ಧಪಡಿಸಲಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್‌ ಸೇರಿ ರಾಜ್ಯ ಕಾಂಗ್ರೆಸ್‌ ಪ್ರಮುಖರು ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಗ್ಗೆ ದಿಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಶನಿವಾರ ಇಲ್ಲವೇ ಭಾನುವಾರ ಕಾಂಗ್ರೆಸ್‌ ನಾಯಕರು ದಿಲ್ಲಿಗೆಗೆ ತೆರಳಿ ವರಿಷ್ಠರ ಜತೆ ಸಮಾಲೋಚನೆ ನಡೆಸಿದರೂ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯುವುದು ಆರ್‌.ಆರ್‌.ನಗರ ಚುನಾವಣೆ ನಂತರವೇ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಮೂಗಿಗೆ ತುಪ್ಪ ಸವರುವ ತಂತ್ರ: ಜೆಡಿಎಸ್‌ಗೆ ತನ್ನ ಕೋಟಾದಲ್ಲಿ ಸಂಪುಟ ಭರ್ತಿ ಮಾಡಿಕೊಳ್ಳಲು ಹೆಚ್ಚಿನ ಸವಾಲುಗಳಿಲ್ಲ. ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾಂಗ್ರೆಸ್‌ ಪರಿಸ್ಥಿತಿ ಭಿನ್ನವಾಗಿದೆ. ಹಾಗಾಗಿ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ವಿಶ್ವಾಸದಲ್ಲಿರಿಸಿಕೊಳ್ಳಲು ಮೊದಲ ಹಂತದಲ್ಲಿ 10 - 15 ಮಂದಿಗೆ ಮಾತ್ರ ಸಂಪುಟದ ಬಾಗಿಲು ತೆರೆಯಲು ಯೋಚಿಸಲಾಗುತ್ತಿದೆ. ಈ ವೇಳೆ ಜಾತಿವಾರು, ಪ್ರದೇಶವಾರು ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ಯಾವ ಯಾವ ಖಾತೆಗಳು ಎಂಬುದು ಸಹ ಇನ್ನು ನಿರ್ಧಾರವಾಗಿಲ್ಲ. ಈ ವಿಷಯವು ಸಹ ಹೈಕಮಾಂಡ್‌ ಹಂತದಲ್ಲೇ ತೀರ್ಮಾನವಾಗುತ್ತದೆ ಎಂದು ಹೇಳಲಾಗುತ್ತಿದೆ.

ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚು ಸ್ಥಾನ: ಈ ಮಧ್ಯೆ ಸಂಪುಟದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತಲಾ ನಾಲ್ವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಲು ಕಾಂಗ್ರೆಸ್‌ ತೀರ್ಮಾನಿಸಿದೆ. ಉಳಿದಂತೆ ಮುಸ್ಲಿಂ-2, ಕ್ರೈಸ್ತ-1, ಮಹಿಳೆ-1, ಕುರುಬ-2, ಎಸ್‌ಸಿ-3, ಎಸ್‌ಟಿ-1, ಒಬಿಸಿ-3 ಹಾಗೂ ಬ್ರಾಹ್ಮಣ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡುವ ನಿಲುವಿಗೆ ಬರಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ