ಆ್ಯಪ್ನಗರ

ಬಂಡೆದ್ದವರಿಗೆ ಕಾನೂನು ಕುಣಿಕೆಗೆ ‘ಕೈ’ ತಂತ್ರ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಪಕ್ಷದ ಅತೃಪ್ತ ಶಾಸಕರಿಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಶನಿವಾರ ನೊಟೀಸ್‌ ನೀಡಿದ್ದು, ಈ ಪ್ರಯತ್ನವು ಬಂಡಾಯ ಶಾಸಕರನ್ನು ಕಾನೂನು ಕುಣಿಕೆಗೆ ಸಿಲುಕಿಸುವ ತಯಾರಿ ಎಂದು ಅಭಿಪ್ರಾಯಪಡಲಾಗಿದೆ.

Vijaya Karnataka 20 Jan 2019, 5:00 am
ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಪಕ್ಷದ ಅತೃಪ್ತ ಶಾಸಕರಿಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಶನಿವಾರ ನೊಟೀಸ್‌ ನೀಡಿದ್ದು, ಈ ಪ್ರಯತ್ನವು ಬಂಡಾಯ ಶಾಸಕರನ್ನು ಕಾನೂನು ಕುಣಿಕೆಗೆ ಸಿಲುಕಿಸುವ ತಯಾರಿ ಎಂದು ಅಭಿಪ್ರಾಯಪಡಲಾಗಿದೆ.
Vijaya Karnataka Web leagle action congress plan
ಬಂಡೆದ್ದವರಿಗೆ ಕಾನೂನು ಕುಣಿಕೆಗೆ ‘ಕೈ’ ತಂತ್ರ


ರಮೇಶ್‌ ಜಾರಕಿಹೊಳಿ ಹಾಗೂ ಇತರರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯ ನಾಯಕರು ನೀಡಿರುವ ನೊಟೀಸ್‌ನಲ್ಲಿ ಮತ್ತೊಮ್ಮೆ ಸಂವಿಧಾನದ ಷೆಡ್ಯೂಲ್‌ 10ನ್ನು ಪ್ರಸ್ತಾಪಿಸಿ ನಿಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಲಾಗಿದೆ ಮತ್ತು ನೊಟೀಸ್‌ಗೆ ತಕ್ಷಣ ಉತ್ತರ ಬಯಸಲಾಗಿದೆ. ಕಾನೂನು ಪರಿಣಿತರ ಸಲಹೆಯಂತೆ ಸ್ಪೀಕರ್‌ಗೆ ದೂರು ಸಲ್ಲಿಸುವ ಮುನ್ನ ಈ ಎಲ್ಲ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸಂವಿಧಾನದ ಷೆಡ್ಯೂಲ್‌ 10ರಲ್ಲಿ ಸದನದಲ್ಲಿ ವಿಪ್‌ ಉಲ್ಲಂಘನೆ ಮಾಡಿದರೆ, ಪಕ್ಷ ವಿಪ್‌ ಜಾರಿ ಮಾಡಿದರೂ ಸದನಕ್ಕೆ ಗೈರು ಹಾಜರಾದರೆ ಹಾಗೂ ಆಯ್ಕೆಯಾಗಿರುವ ಪಕ್ಷ ತೊರೆದು ಬೇರೊಂದು ರಾಜಕೀಯ ಪಕ್ಷ ಸೇರಲು ಬಯಸಿದರೆ ಅಥವಾ ಯಾವ ಪಕ್ಷದ ಚಿನ್ಹೆ ಮೇಲೆ ಚುನಾಯಿತರಾಗಿದ್ದಾರೋ ಆ ಪಕ್ಷ ತೊರೆದು ಸದನದಲ್ಲಿ ಪಕ್ಷೇತರರಾಗಿ ಗುರುತಿಸಿಕೊಳ್ಳಲು ಬಯಸಿದರೆ ಸದಸ್ಯತ್ವದಿಂದ ಅನರ್ಹಗೊಳಿಸಲು ಅವಕಾಶವಿದೆ.

ಪಕ್ಷ ತೊರೆಯಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಭಿನ್ನಮತೀಯರಿಗೆ ನೀಡಿರುವ ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸೂಚನೆ ನೀಡಿದರೂ ಗೈರುಹಾಜರಾಗಿರುವುದು ಮತ್ತು ಬೇರೊಂದು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿರುವ ವರದಿಗಳನ್ನು ಕಾಂಗ್ರೆಸ್‌ ತನ್ನ ನೊಟೀಸ್‌ನಲ್ಲಿ ಪ್ರಸ್ತಾಪಿಸಿದೆ. ಈ ನೊಟೀಸ್‌ಗೆ ಭಿನ್ನಮತೀಯರು ಉತ್ತರ ನೀಡದಿದ್ದರೆ ಸಂವಿಧಾನದ ಷೆಡ್ಯೂಲ್‌ 10 ಪ್ರಕಾರ ಕ್ರಮಕ್ಕೆ ಸ್ಪೀಕರ್‌ಗೆ ದೂರು ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಕಾಂಗ್ರೆಸ್‌ ದೂರು ಆಧರಿಸಿ ವಿಧಾನಸಭಾಧ್ಯಕ್ಷರಿಗೆ ಭಿನ್ನಮತೀಯ ಶಾಸಕರ ಅನರ್ಹತೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಅಂತಿಮ ಅಧಿಕಾರವಿದೆ. ಸ್ಪೀಕರ್‌ ವಿವೇಚನಾಧಿಕಾರ ಕೋರ್ಟ್‌ನಲ್ಲಿ ಪ್ರಶ್ನಿಸಲ್ಪಟ್ಟರೆ, ಸಮರ್ಥನೆಗಾಗಿ ನೊಟೀಸ್‌ ನೀಡುವ ಹಾಗೂ ವಿವರಣೆ ಪಡೆಯುವ ಪ್ರಕ್ರಿಯೆಯನ್ನು ಕಾನೂನು ಪರಿಣಿತರ ಸಲಹೆಯಂತೆ ನಿರ್ವಹಿಸಲಾಗುತ್ತಿದೆ. ತಜ್ಞರ ಸಲಹೆ ಆಧರಿಸಿಯೇ ಸುದೀರ್ಘವಾದ ನೊಟೀಸ್‌ ಅನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ