ಆ್ಯಪ್ನಗರ

ವಿಷಯಾಂತರ ಬೇಡ, ಲೆಕ್ಕ ಕೊಡಿ - ಸಿದ್ದರಾಮಯ್ಯರಿಂದ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆ

ಕೊರೊನಾ ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸಂಬಂಧ ರಾಜ್ಯ ಸರಕಾರದ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Vijaya Karnataka 14 Jul 2020, 7:26 pm

ಬೆಂಗಳೂರು: ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರ ಅರೆಬರೆ ಮಾಹಿತಿ ನೀಡಿ ತಪ್ಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
Vijaya Karnataka Web siddaramaiah


ಸರಕಾರಕ್ಕೆ ಸುದೀರ್ಘ ಪತ್ರ ಬರೆದಿರುವ ಅವರು, ಕೊರೊನಾ ಸಂಬಂಧಿಸಿದ ಆರೋಪ ಬಂದಾಗೆಲ್ಲ ‘ದಾಖಲೆ ನೀಡಿ’ ‘ವಿಧಾನಸೌಧಕ್ಕೆ ಬನ್ನಿ’ ಎಂದೆಲ್ಲ ಸವಾಲು ಹಾಕಿ ಕೆಲವು ಸಚಿವರು ವಿಷಯಾಂತರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಪತ್ರ ತಲುಪಿದ 3 ದಿನಗಳ ಒಳಗಾಗಿ ಕೊರೊನಾ ಸಂಬಂಧ ಸರಕಾರ ಖರ್ಚು ಮಾಡಿರುವ ಪ್ರತಿ ಪೈಸೆಯ ಲೆಕ್ಕ ಹಾಗೂ ಸಾಮಾಗ್ರಿಯ ವಿವರ ನೀಡುವಂತೆ ಆಗ್ರಹಿಸಿರುವ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

“ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು? ಹೆಚ್ಚು ದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು?," ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ #ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್



ಟ್ಟಿಟ್ಟರ್‌ನಲ್ಲಿ 'ಲೆಕ್ಕ ಕೊಡಿ' ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಹಲವು ಟ್ಟೀಟ್‌ಗಳನ್ನು ಮಾಡಿರುವ ಅವರು, “ಕೊರೊನಾ ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಪಾವತಿ ಮಾಡಲಾದ ಹಣ ಎಷ್ಟು? ಕೇಂದ್ರ ಸರಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು? ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು?” ಎಂದು ಸರಕಾರವನ್ನು ಕೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು? ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು? ಎಂಬ ಬಗ್ಗೆ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ಅವರು, ಈ ಸಂಬಂಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೊರೊನಾ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು ಗುಣಮಟ್ಟ ಸರಿ ಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು? ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು? ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು? ಎಂಬ ಮಾಹಿತಿ ಕೇಳಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಪಾರದರ್ಶಕತೆ ಕಾಪಾಡಲಿ, ಈಶ್ವರ್‌ ಖಂಡ್ರೆ

ಕೊರೊನಾ ನಿಯಂತ್ರಣಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅನುದಾನದಲ್ಲಿ ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಹಣ ಎಷ್ಟು? ಆ ಅನುದಾನದಲ್ಲಿ ಜಿಲ್ಲಾಡಳಿತಗಳು ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಿದೆ. ಆಹಾರ, ಆಹಾರ ಧಾನ್ಯಗಳ ಕಿಟ್ ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ. ಪ್ರತಿ ಆಹಾರ ಪ್ಯಾಕೇಟ್/ ಆಹಾರ ಧಾನ್ಯಗಳ ಪ್ಯಾಕೇಟ್ ಕಿಟ್‌ಗೆ ನೀಡಿದ ಕನಿಷ್ಠ/ಗರಿಷ್ಠ ದರ ಎಷ್ಟು? ಆಹಾರ ತಯಾರಿಸಿದ ಸಂಸ್ಥೆಗಳು ಯಾವುವು? ಯಾವ ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ? ಎಂಬ ವಿವರಗಳಿಗೆ ಮಾಜಿ ಮುಖ್ಯಮಂತ್ರಿಗಳು ಬೇಡಿಕೆ ಇಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ? ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇಲ್ಲಿಯವರೆಗೆ ಖರ್ಚು ಮಾಡಿದ ದುಡ್ಡೆಷ್ಟು? ಯಾವ ಬಾಬತ್ತಿಗೆ ಖರ್ಚು ಮಾಡಲಾಗಿದೆ? ಕ್ವಾರಂಟೈನ್ ಗೊಳಗಾದ ಪ್ರತಿ ವ್ಯಕ್ತಿಗೆ ತಗಲಿರುವ ಖರ್ಚೆಷ್ಟು? ಎಂಬ ವಿವರಗಳನ್ನೂ ನೀಡುವಂತೆ ವಿಪಕ್ಷ ನಾಯಕರು ಕೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ