ಆ್ಯಪ್ನಗರ

ಪಾರ್ಲಿಮೆಂಟ್‌ ಎಲೆಕ್ಷನ್‌: ಕಾಂಗ್ರೆಸ್‌ ಕ್ಷೇತ್ರಗಳ ಮೇಲೆ ಜೆಡಿಎಸ್‌ ಕಣ್ಣು-ಕೈ ಪಡೆ ಕಂಗಾಲು

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ 18:10 ರ ಸೂತ್ರದಡಿ ಸೀಟು ಹೊಂದಾಣಿಕೆಯಾಗುವ ಸಾಧ್ಯತೆಯಿದೆ...

Vijaya Karnataka 19 Jul 2018, 5:00 am
ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ 18:10 ರ ಸೂತ್ರದಡಿ ಸೀಟು ಹೊಂದಾಣಿಕೆಯಾಗುವ ಸಾಧ್ಯತೆಯಿದೆ. ಈ ಪೈಕಿ ಹಳೆ ಮೈಸೂರು ಪ್ರಾಂತ್ಯದ ಬಹುತೇಕ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್‌ ಈಗಾಗಲೇ ಒತ್ತಡ ತಂದಿದೆ.
Vijaya Karnataka Web congress-flag


ಮೈತ್ರಿ ಸರಕಾರ ರಚನೆ ವೇಳೆ ಮಾಡಿಕೊಂಡ ಒಪ್ಪಂದದಂತೆ ಮಿತ್ರಪಕ್ಷಗಳು ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುವ ತೀರ್ಮಾನವಾಗಿದೆ. ಸೀಟು ಹೊಂದಾಣಿಕೆಯಷ್ಟೆ ಬಾಕಿಯಿದ್ದು ಈ ಕುರಿತ ಲೆಕ್ಕಾಚಾರವಾಗಿದೆ. ಈ ಸಂಬಂಧ ಜೆಡಿಎಸ್‌ ಹಾಕುತ್ತಿರುವ ಪಟ್ಟಿನಿಂದ ಕಾಂಗ್ರೆಸ್‌ನಲ್ಲಿ ತಳಮಳ ಆರಂಭವಾಗಿದೆ.

ಜನತಾದಳ ವಿಭಜನೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಜೆಡಿಎಸ್‌ ಅನಂತರ ನಡೆದ ಯಾವುದೇ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಭಾಗ ಹೊರತು ಪಡಿಸಿ ಗಂಭೀರ ಸ್ಪರ್ಧೆ ಮಾಡಿಲ್ಲ. ಕಳೆದ 3 ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಯಾವ ಕ್ಷೇತ್ರದಲ್ಲೂ ಜೆಡಿಎಸ್‌ ಆಯ್ಕೆಯಾಗಿಲ್ಲ. ಈ ಬಾರಿಯೂ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿ ಗಮನ ಕೇಂದ್ರೀಕರಿಸುವುದು ಜೆಡಿಎಸ್‌ನ ಆಲೋಚನೆ. ಉತ್ತರ ಕರ್ನಾಟಕದ ಒಂದೆರಡು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಚಿಂತನೆಯೂ ಇದೆ. ಹಾಗಾಗಿ ಪಾರ್ಲಿಮೆಂಟ್‌ ಚುನಾವಣೆ ವಿಚಾರದಲ್ಲಿ ಜೆಡಿಎಸ್‌ನಲ್ಲಿ ಸ್ಪಷ್ಟತೆಯಿದ್ದಂತೆ ತೋರುತ್ತದೆ.

ಕಾಂಗ್ರೆಸ್‌ ಪಾಳಯದ ಪರಿಸ್ಥಿತಿ ಭಿನ್ನವಾಗಿದೆ. ದೋಸ್ತಿ ಅನಿವಾರ್ಯವಾದದ್ದರಿಂದ ಕಾಂಗ್ರೆಸ್‌ಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ. ಕಳೆದ ಚುನಾವಣೆಯಲ್ಲಿ ಹಾಸನ, ಮಂಡ್ಯ ಲೋಕಸಭಾ ಕ್ಷೇತ್ರಗಳಿಂದ ಜೆಡಿಎಸ್‌ ಸಂಸದರು ಆಯ್ಕೆಯಾಗಿದ್ದರು. ಈ ಬಾರಿ ಹಾಸನ, ಮಂಡ್ಯ ಸೇರಿದಂತೆ ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ 1 ಕ್ಷೇತ್ರದಲ್ಲಿ ಕಣಕ್ಕಿಳಿಯಲು ಜೆಡಿಎಸ್‌ ಬಯಸಿದೆ. ಆದರೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಸಂಸದರಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿ ಮಿತ್ರಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡುವುದು ಕಾಂಗ್ರೆಸ್‌ಗೆ ಸವಾಲಾಗಲಿದೆ. ಇದು ಮೈತ್ರಿಯ ದಾರಿ ಕ್ಲಿಷ್ಟವಾಗಬಹುದು ಎಂದು ಹೇಳಲಾಗುತ್ತಿದೆ.

ಮೈತ್ರಿಗೆ ಸೋತವರ ವಿರೋಧ

ಮುಂಬಯಿ ಕರ್ನಾಟಕದ 7 ಲೋಕಸಭೆ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಹೈದರಾಬಾದ್‌ ಕರ್ನಾಟಕದ 6 ಕ್ಷೇತ್ರಗಳ ಪೈಕಿ 3 ರಲ್ಲಿ ಕಳೆದ ಬಾರಿ ಬಿಜೆಪಿ ಜಯ ಗಳಿಸಿತ್ತು. ಹಾಗಾಗಿ ಮೈಸೂರು ಭಾಗದಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎನ್ನುವುದು ಕಾಂಗ್ರೆಸ್‌ನ ಯೋಚನೆ. ಇಲ್ಲಿನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಎರಡೂ ಕಡೆ ತೊಂದರೆಯಾಗಬಹುದು ಎಂಬ ಅಳುಕು ಕಾಂಗ್ರೆಸ್‌ ನಾಯಕರದ್ದಾಗಿದೆ. ಇದೇ ಕಾರಣದಿಂದ ಸೋತ ಅಭ್ಯರ್ಥಿಗಳೊಂದಿಗೆ ಮಾಜಿ ಸಿಎಂ ನಡೆಸಿದ್ದ ಸಭೆಯಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಡುವೆಯೂ ಹೈಕಮಾಂಡ್‌ ಆದೇಶದಂತೆ ಸೀಟು ಹೊಂದಾಣಿಕೆಯಾಗಲಿದೆ ಎಂಬ ಸಂದೇಶವನ್ನು ಪಕ್ಷದ ಪ್ರಮುಖರು ರವಾನಿಸಿದ್ದರು.

ಅಧಿಕಾರಸ್ಥರಿಗೆ ದೋಸ್ತಿ ಅನಿವಾರ್ಯ

ಸಮ್ಮಿಶ್ರ ಸರಕಾರದ ಸಂಪುಟದಲ್ಲಿರುವ ಕಾಂಗ್ರೆಸ್‌ನ ಸಚಿವರು, ಲೋಕಸಭೆ ಚುನಾವಣೆ ಸೀಟು ಹೊಂದಾಣಿಕೆಯ ಪರ ನಿಂತಿದ್ದಾರೆ. ಆದರೆ, ಸ್ಥಾನಮಾನ ವಂಚಿತರು ಇದಕ್ಕೆ ವಿರುದ್ಧವಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಡೆಸುತ್ತಿರುವ ಸಭೆಯಲ್ಲಿ ಭಾಗಿಯಾಗುತ್ತಿರುವ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳೂ ಈ ಮೈತ್ರಿ ಬಗ್ಗೆ ಪುನರ್‌ ಪರಿಶೀಲನೆ ಮಾಡುವಂತೆ ಒತ್ತಡ ತಂದಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆಯೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವೆ ನಡೆಯುವ ಮಾತುಕತೆಯೇ ನಿರ್ಣಾಯಕವಾಗಲಿದೆ. ಚುನಾವಣೆಗೆ ಕೆಲ ತಿಂಗಳ ಮೊದಲು ಈ ಸಮಾಲೋಚನೆಯಾಗುತ್ತದೆ ಎನ್ನಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ