ಆ್ಯಪ್ನಗರ

ನಿಗದಿಯಂತೆ ಚುನಾವಣೆ ನಡೆಸಲು ಆಯೋಗಕ್ಕೆ ಅನುಮತಿ

ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿರುವ ಹೈಕೋರ್ಟ್‌,ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.

Vijaya Karnataka 13 Oct 2018, 9:42 am
ಬೆಂಗಳೂರು: ಬಳ್ಳಾರಿ, ಮಂಡ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿರುವ ಹೈಕೋರ್ಟ್‌,ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಅನುಮತಿ ನೀಡಿದೆ.
Vijaya Karnataka Web high court


ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ರಮೇಶ್‌ ನಾಯಕ್‌ ಮತ್ತು ಎ.ಡಿ.ಉತ್ತಯ್ಯ ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ.ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

''ಈ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಮಧ್ಯಾಂತರ ಆದೇಶ ನೀಡುವುದಿಲ್ಲ. ಪ್ರತಿವಾದಿ ಚುನಾವಣಾ ಆಯೋಗ ನಿಗದಿಯಂತೆ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸಬಹುದು,'' ಎಂದು ಆದೇಶಿಸಿದೆ.

ಕೆಲ ಕಾಲ ಅರ್ಜಿದಾರರ ಹಾಗೂ ಆಯೋಗದ ಪರ ವಾದ ಆಲಿಸಿದ ಬಳಿಕ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿತು.

''ಮೇಲ್ನೋಟಕ್ಕೆ ಸಂಸದರ ಹುದ್ದೆ ಖಾಲಿಯಾದ ದಿನದಿಂದ ಆರಂಭವಾಗುವಂತೆ ಒಂದು ವರ್ಷದ ಅವಧಿ ಇದ್ದರೆ ಚುನಾವಣೆ ನಡೆಸಬಹುದು ಎಂಬ ವಾದವನ್ನು ಒಪ್ಪಬಹುದು, ಆದರೂ ಸಹ ಸ್ವಲ್ಪ ಸಂದೇಹವಿದೆ. ಹಾಗಾಗಿ ಆಯೋಗ ಆಕ್ಷೇಪ ಸಲ್ಲಿಸಿದ ನಂತರ ಆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು ''ಎಂದು ನ್ಯಾಯಪೀಠ ಹೇಳಿತು.

ಇದೇ ವಿಷಯದ ಕುರಿತು 2013ರಲ್ಲಿ ಸಲ್ಲಿಕೆಯಾಗಿದ್ದ ಇನ್ನೆರಡೂ ಅರ್ಜಿಗಳನ್ನೂ ಸಹ ಈ ಅರ್ಜಿಗಳ ಜೊತೆಗೆ ಇತ್ಯರ್ಥಪಡಿಸುವುದಾಗಿ ನ್ಯಾಯಾಲಯ ಆದೇಶಿಸಿತು.

ಅರ್ಜಿದಾರರ ಪರ ವಕೀಲರು, ''ಹೊಸ ಸಂಸದರಿಗೆ ಕೇವಲ ಆರೂವರೆ ತಿಂಗಳ ಅವಧಿ ಸಿಗಲಿದೆ. ಚುನಾವಣೆಯಿಂದ ಹಣ ಪೋಲಾಗುತ್ತದೆ,'' ಎಂದರು. ಅದಕ್ಕೆ ಪೀಠ, ''ಅದರಲ್ಲೇನಿದೆ ತಪ್ಪು? ಚುನಾವಣೆಗಾಗಿ ಹಣ ಖರ್ಚಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯೋಗ ಉಪಚುನಾವಣೆ ನಡೆಸುತ್ತಿದೆ,''ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಾದಿಸಿದ ನ್ಯಾಯವಾದಿ ಡಿ.ಆರ್‌.ರವಿಶಂಕರ್‌ ''ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್‌ 149 ಹಾಗೂ 151ಎ ಪ್ರಕಾರ, ಸಂಸದರ ಅವಧಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವಿದ್ದರೆ ಉಪಚುನಾವಣೆ ನಡೆಸಬೇಕು. ಆದರೆ ಇದೀಗ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುತ್ತಿದ್ದು, ಮೂರರಲ್ಲೂ ಹೊಸದಾಗಿ ಆಯ್ಕೆಯಾಗುವ ಸಂಸದರಿಗೆ ಕೇವಲ ಆರೂವರೆ ತಿಂಗಳು ಮಾತ್ರ ಅಧಿಕಾರ ಸಿಗುತ್ತದೆ. ಎರಡೂ ಸೆಕ್ಷನ್‌ ಒಟ್ಟಿಗೆ ಓದಿಕೊಂಡಾಗ ಇದೇ ಅರ್ಥ ಬರುತ್ತದೆ, ಆದರೆ ಎರಡನ್ನೂ ಪ್ರತ್ಯೇಕವಾಗಿ ಓದಿದರೆ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾಗಿದೆ''ಎಂದರು.

ಆಯೋಗದ ಪರ ವಾದ ಮಂಡಿಸಿದ ವಕೀಲ ಶರತ್‌ ದೊಡ್ಡವಾಡ ''ಸೆಕ್ಷನ್‌ 151ಎ ಪ್ರಕಾರ ಸಂಸದರ ಹುದ್ದೆ ಖಾಲಿಯಾದ ದಿನದಂದ ಒಂದು ವರ್ಷದೊಳಗೆ ಅವಧಿ ಇದ್ದರೆ ಚುನಾವಣೆ ನಡೆಸಬೇಕಾಗಿಲ್ಲ. ಆದರೆ ಇದೀಗ ಹುದ್ದೆ ಖಾಲಿಯಾಗಿರುವುದು ಮೇ ತಿಂಗಳ 18ಕ್ಕೆ , ಹಾಗಾಗಿ ಆ ದಿನದಿಂದ ಲೆಕ್ಕ ಹಾಕಿದರೆ ಒಂದು ವರ್ಷದ ಅವಧಿ ಇದೆ. ಹಾಗಾಗಿ ಚುನಾವಣಾ ಆಯೋಗ ಉಪಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ವೇಳಾಪಟ್ಟಿ ಪ್ರಕಟಣೆ ನಂತರ ಆಯೋಗ ಅದಕ್ಕೆ ಕಾರಣವನ್ನೂ ಸಹ ವಿವರಿಸಿದೆ ''ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ