ಆ್ಯಪ್ನಗರ

ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರ ಆರಂಭ

ಲಂಡನ್‌ನ ಬಿಗ್‌ಬಸ್‌ ಮಾಡೆಲ್‌ ರಾಜ್ಯದಲ್ಲಿ ಪರಿಚಯಗೊಳ್ಳಲಿದ್ದು, ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳು ಸಂಚಾರ ಆರಂಭಿಸಲಿವೆ. ಮೈಸೂರು ಮತ್ತು ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಮೈಸೂರಿನಲ್ಲಿ ಮೊದಲ ಬಾರಿಗೆ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಗೊಳ್ಳಲಿದೆ.

Vijaya Karnataka Web 24 Feb 2020, 2:44 pm
ಲಂಡನ್‌ನ ಬಿಗ್‌ಬಸ್‌ ಮಾಡೆಲ್‌ ರಾಜ್ಯದಲ್ಲಿ ಪರಿಚಯಗೊಳ್ಳಲಿದ್ದು, ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳು ಸಂಚಾರ ಆರಂಭಿಸಲಿವೆ. ಮೈಸೂರು ಮತ್ತು ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಇದೀಗ ಮೈಸೂರಿನಲ್ಲಿ ಮೊದಲ ಬಾರಿಗೆ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಗೊಳ್ಳಲಿದೆ.
Vijaya Karnataka Web london big bus model double decker bus service in mysuru by march end
ಮಾರ್ಚ್‌ ಅಂತ್ಯಕ್ಕೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರ ಆರಂಭ


ಮೈಸೂರು ಮತ್ತು ಹಂಪಿಯ ಸ್ಥಳಗಳನ್ನು ವೀಕ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ 6 ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಸಂಚಾರಕ್ಕೆ ಬಿಡಲಿದೆ. ಸಧ್ಯಕ್ಕೆ ಬೆಂಗಳೂರಿನಲ್ಲಿ ಈ ಬಸ್‌ಗಳ ಸಂಚಾರದ ಬಗ್ಗೆ ಮಾಹಿತಿ ಇಲ್ಲ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮೈಸೂರು ಮತ್ತು ಹಂಪಿಯಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಆರಂಭಿಸಲು ಕೆಎಸ್‌ಟಿಡಿಸಿಗೆ 5 ಕೋಟಿ ರೂ. ಅನುದಾನ ನೀಡಿದ್ದರು. ಈಚರ್‌ ಚೆಸಿಸ್‌ ಕಂಪನಿಯ ಜೊತೆ ಜುಲೈ 2019ಕ್ಕೆ 6 ಬಸ್‌ಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.

​ಮೈಸೂರಿಗೆ ನಾಲ್ಕು, ಹಂಪಿಗೆ ಎರಡು ಬಸ್‌

ಪ್ರತಿ ಬಸ್‌ಗಳು 40 ಸೀಟುಗಳ ಸಾಮರ್ಥ್ಯ ಹೊಂದಿವೆ. ಕೆಳಗೆ 20 ಹಾಗೂ ಮೇಲೆ 20 ಸೀಟುಗಳನ್ನು ಅಳವಡಿಸಲಾಗಿದೆ. ಆರು ಬಸ್‌ಗಳ ಪೈಕಿ ನಾಲ್ಕು ಮೈಸೂರಿಗೆ ಹಾಗೂ ಎರಡು ಬಸ್‌ಗಳು ಹಂಪಿಯಲ್ಲಿ ಸಂಚರಿಸಲಿವೆ. ಈಗಾಗಲೇ ಒಂದು ಬಸ್‌ ಸಂಚಾರಕ್ಕೆ ಸಿದ್ಧವಾಗಿದೆ. ಇನ್ನುಳಿದ ಐದು ಬಸ್‌ಗಳು ಮಾರ್ಚ್‌ ತಿಂಗಳಾಂತ್ಯಕ್ಕೆ ಲಭ್ಯವಾಗಲಿವೆ.


''ಫೆಬ್ರವರಿ ಮೊದಲ ವಾರದಲ್ಲಿ ಅಟೋಮೊಟಿವ್‌ ಟೆಕ್ನಾಲಜಿಯ ಅಂತರಾಷ್ಟ್ರೀಯ ಕೇಂದ್ರದ ತಂಡ ಡಬಲ್‌ ಡೆಕ್ಕರ್‌ ಬಸ್‌ಗಳ ಪರಿಶೀಲನೆ ನಡೆಸಿ, ಸರ್ಟಿಫಿಕೇಟ್‌ ನೀಡಲಿದೆ. ನೋಂದಣಿಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಎಲ್ಲ ಕಾರ್ಯಗಳು ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ'' ಎಂದು ಕೆಎಸ್‌ಟಿಡಿಸಿಯ ಎಂಡಿ ಕುಮಾರ್‌ ಪುಷ್ಕರ್‌ ತಿಳಿಸಿದರು.


''ಬೇಸಿಗೆಯಲ್ಲಿ ಎಲ್ಲ ಆರು ಬಸ್‌ಗಳನ್ನು ಮೈಸೂರಿನಲ್ಲಿ ಸಂಚಾರಕ್ಕೆ ಬಿಡಲಾಗುವುದು. ಹಂಪಿಯಲ್ಲಿ ಅತ್ಯಂತ ಹೆಚ್ಚು ಉಷ್ಣತೆಯಿರುವ ಕಾರಣ ಸಧ್ಯದ ಮಟ್ಟಿಗೆ ಅಲ್ಲಿ ಸಂಚಾರಕ್ಕೆ ಲಭ್ಯವಿರುವುದಿಲ್ಲ. ಕೆಳಗಿನ ಡೆಕ್ಕರ್‌ನಲ್ಲಿ ಎಸಿ ಅಳವಡಿಸಲಾಗಿದೆ. ಮೇಲಿನ ಡೆಕ್ಕರ್‌ನಲ್ಲಿ ಚಾವಣಿ ಇರುವುದಿಲ್ಲ'' ಎಂದು ಪುಷ್ಕರ್‌ ಮಾಹಿತಿ ನೀಡಿದರು.

​ಮಾರ್ಚ್‌ ಅಂತ್ಯಕ್ಕೆ 'ಅಂಬಾರಿ' ರೆಡಿ

ನೂತನ ಬಸ್‌ಗಳ ಹೊರಭಾಗದಲ್ಲಿ ನೇರಳೆ ಬಣ್ಣದ 'ಅಂಬಾರಿ' ಎಂಬ ಹೆಸರಿನೊಂದಿಗೆ ಕರ್ನಾಟಕದ ಪ್ರಸಿದ್ಧ ಸ್ಥಳಗಳ ಚಿತ್ರಗಳನ್ನುಅಳವಡಿಸಲು ಕೆಎಸ್‌ಟಿಡಿಸಿ ಚಿಂತಿಸಿದೆ. ''ನೋಂದಣಿ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಮೈಸೂರಿನಲ್ಲಿ ಡಬರ್‌ ಡೆಕ್ಕರ್ ಬಸ್‌ ಸಂಚಾರದ ಸಿದ್ಧತೆ ನಡೆಸಲಿದ್ದೇವೆ. ಮಾರ್ಚ್‌ 10ಕ್ಕೆ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಬಸ್‌ ಸಂಚರಿಸುವ ಮಾರ್ಗವನ್ನು ಅಂತಿಮಗೊಳಿಸಲಾಗುವುದು. ಆಡಿಯೋ ಮತ್ತು ವಿಡಿಯೋ ಮೂಲಕ ಸಂಚಾರದ ಮಾರ್ಗ ಹಾಗೂ ಸ್ಥಳಗಳ ಪರಿಚಯವನ್ನು ಪ್ರವಾಸಿಗರಿಗೆ ಒದಗಿಸುವ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಮಾರ್ಚ್‌ ಅಂತ್ಯಕ್ಕೆ ಎಲ್ಲ ಆರು ಬಸ್‌ಗಳು ಸಂಚಾರಕ್ಕೆ ಲಭ್ಯವಿರುತ್ತವೆ ಎಂಬ ಭರವಸೆ ಹೊಂದಿದ್ದೇವೆ'' ಎಂದು ಪುಷ್ಕರ್‌ ವಿವರಣೆ ನೀಡಿದರು.

​ಬೆಂಗಳೂರಿಂದ ಐದು ಮಾರ್ಗಗಳಿಗೆ ಸೇವೆ

ಕೆಎಸ್‌ಟಿಡಿಸಿ ಸೇವೆಗೆ ಸಿಗುವ ಸ್ಪಂದನೆಯನ್ನು ಆಧರಿಸಿ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ನಗರದೊಳಗಿನ ಸಂಚಾರಕ್ಕೆ ಬಳಕೆ ಮಾಡುವ ಕುರಿತು ಚಿಂತನೆ ನಡೆಸಲು ನಿರ್ಧರಿಸಲಾಗಿದೆ. ಡಬಲ್‌ ಡೆಕ್ಕರ್‌ ಬಸ್‌ಗಳ ಸಂಚಾರದಿಂದ ಸಿಬ್ಬಂದಿ ಹಾಗೂ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬಹುದು. ಈಗಾಗಲೇ ಡಬಲ್‌ ಡೆಕ್ಕರ್‌ ಬಸ್‌ ಸೇವೆ ಒದಗಿಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೆಲವು ಮಾರ್ಗಗಳನ್ನು ಆಯ್ಕೆ ಮಾಡಿದೆ. ಬೆಂಗಳೂರುನಿಂದ ಮಂಗಳೂರು, ಚೆನ್ನೈ, ಹುಬ್ಬಳ್ಳಿ, ಮೈಸೂರು ಮತ್ತು ಹೈದರಾಬಾದ್‌ ನಡುವೆ ಡಬರ್‌ ಡೆಕ್ಕರ್‌ ಬಸ್‌ಗಳ ಸೇವೆ ನೀಡಲು ಚಿಂತನೆ ನಡೆಸಲಾಗಿದೆ.

​​1997ರ ನಂತರ ಕಣ್ಮರೆಯಾಗಿದ್ದ ಬಸ್‌ಗಳು

2017ರಲ್ಲಿ, ಬಿಎಂಟಿಸಿ 5 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆ ಆರಂಭಿಸಲು ಚಿಂತನೆ ನಡೆಸಿದ್ದು, ಖಾಸಗಿ ಕಂಪನಿಗಳಿಗೆ ಲೀಸ್‌ಗೆ ಕೊಟ್ಟು 'ಬೆಂಗಳೂರು ದರ್ಶನ' ಸೇವೆ ನೀಡಲು ಚಿಂತಿಸಿದೆ. ಆದರೆ ಸುಸಜ್ಜಿತ ರಸ್ತೆಯ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಇನ್ನೂ ಎಲ್ಲಿಯೂ ಡಬಲ್‌ ಡೆಕ್ಕರ್‌ ಬಸ್‌ಗಳ ಸೇವೆ ರಾಜ್ಯದಲ್ಲಿ ಆರಂಭವಾಗಿಲ್ಲ. 1970 ಮತ್ತು 80ರ ನಡುವೆ ಬೆಂಗಳೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ಗಳು ಸಾಮಾನ್ಯ ಎಂಬಂತಿತ್ತು. ಆದರೆ 1997ರ ನಂತರ ಈ ಬಸ್‌ಗಳು ಹಂತ ಹಂತವಾಗಿ ಕಣ್ಮರೆಯಾದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ