ಆ್ಯಪ್ನಗರ

ಹತ್ಯೆ ದೇವರ ಕೆಲಸ ಎಂದು ನಂಬಿಸಿದ್ದರು: ವಾಗ್ಮೋರೆ

''ಗೌರಿ ಲಂಕೇಶ್‌ ಹತ್ಯೆ ಮಾಡುವುದು ದೇವರೇ ವಹಿಸಿರುವ ಕೆಲಸ. ದೇವರ ಪ್ರೇರಣೆ ಆಗಿದ್ದರಿಂದಲೇ ಈ ಕಾರ್ಯ ನಿನಗೆ ಬಂದಿದೆ'' ಎಂದು ನನ್ನನ್ನು ನಂಬಿಸಲಾಗಿತ್ತು ಎಂದು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿಂದಗಿಯ ಆರೋಪಿ ಪರಶುರಾಮ್‌ ವಾಗ್ಮೋರೆ ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

Vijaya Karnataka 16 Jun 2018, 7:27 am
ಬೆಂಗಳೂರು: ''ಗೌರಿ ಲಂಕೇಶ್‌ ಹತ್ಯೆ ಮಾಡುವುದು ದೇವರೇ ವಹಿಸಿರುವ ಕೆಲಸ. ದೇವರ ಪ್ರೇರಣೆ ಆಗಿದ್ದರಿಂದಲೇ ಈ ಕಾರ್ಯ ನಿನಗೆ ಬಂದಿದೆ'' ಎಂದು ನನ್ನನ್ನು ನಂಬಿಸಲಾಗಿತ್ತು ಎಂದು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಸಿಂದಗಿಯ ಆರೋಪಿ ಪರಶುರಾಮ್‌ ವಾಗ್ಮೋರೆ ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
Vijaya Karnataka Web God Gauri


''ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರನೇ ಆರೋಪಿ ಪರಶುರಾಮ್‌ ವಿಚಾರಣೆಗೆ ಸಹಕರಿಸುತ್ತಿದ್ದಾನೆ. ಉಳಿದ ಆರೋಪಿಗಳಂತೆ ತನಿಖೆಯ ದಿಕ್ಕು ತಪ್ಪಿಸುವ, ನಾಟಕ ಆಡುವ, ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿಲ್ಲ. ನಾವು ಹತ್ತು ಪ್ರಶ್ನೆಗಳನ್ನು ಮುಂದಿಟ್ಟರೆ ಹತ್ತಕ್ಕೂ ಉತ್ತರಿಸುತ್ತಿದ್ದಾನೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಆರೋಪಿಗಳು ಹತ್ತರಲ್ಲಿ ಎರಡಕ್ಕೆ ಮಾತ್ರ ಉತ್ತರಿಸಿ ಉಳಿದ ಪ್ರಶ್ನೆಗಳಿಗೆ ಊರೆಲ್ಲಾ ಸುತ್ತಿಸಿ ಕೊನೆಗೆ ಉತ್ತರ ನೀಡುತ್ತಿದ್ದರು. ಆದರೆ ಪರಶುರಾಮ್‌ ವಿಚಾರಣೆಗೆ ಸಹಕರಿಸುತ್ತಿರುವುದರಿಂದ ಮಹಜರ್‌ ಕಾರ್ಯವೂ ತ್ವರಿತವಾಗಿ ನಡೆಯುತ್ತಿದೆ,'' ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

''ಈ ಕೆಲಸ ಮಾಡೋಕೆ ನೂರಾರು ಮಂದಿ ಸಿದ್ಧರಿದ್ದಾರೆ. ಆದರೆ ಪ್ರೇರಣೆ ಆಗಿರುವುದು ನಿನ್ನ ಹೆಸರಿಗೆ ಮಾತ್ರ. ಉಳಿದ ಯಾರ ಪಾಲಿಗೂ ಬರದ ಪ್ರೇರಣೆ ನಿನ್ನ ಪಾಲಿಗೆ ಮಾತ್ರ ಬಂದಿದೆ ಎಂದು ಅವರೆಲ್ಲಾ ಹುರಿದುಂಬಿಸಿದ್ದರು. ಅವರ ಮಾತಿನ ಚಮತ್ಕಾರಕ್ಕೆ ಒಳಗಾದೆ. ನಾನು ಬೆಂಗಳೂರಿನಲ್ಲಿ ಇದ್ದದ್ದು ಬರೀ ಹತ್ತು ದಿನ ಆದ್ದರಿಂದ ಏರಿಯಾಗಳ ಹೆಸರು ಗೊತ್ತಿಲ್ಲ. ಆದರೆ ನಾನು ಇದ್ದ ಸ್ಥಳಗಳು, ಆ ದಾರಿಗಳು ಗೊತ್ತು,,'' ಎನ್ನುತ್ತಿರುವ ಆರೋಪಿ, ತಾನು ಆಶ್ರಯ ಪಡೆದಿದ್ದ ಮನೆಯ ನಕ್ಷೆ, ಅಕ್ಕ ಪಕ್ಕದಲ್ಲಿರುವ ಅಂಗಡಿಗಳ ಗುರುತು, ರಾಜರಾಜೇಶ್ವರಿ ನಗರಕ್ಕೆ ತಾನು ಉಳಿದುಕೊಂಡಿದ್ದ ಮನೆಯಿಂದ ಇರುವ ಹಲವು ಮಾರ್ಗಗಳು, ನೈಸ್‌ ರಸ್ತೆಯ ಬಗ್ಗೆಯೆಲ್ಲಾ ಆರೋಪಿ ವಿವರಿಸಿದ್ದಾನೆ ಎನ್ನಲಾಗಿದೆ.

ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ಶುಕ್ರವಾರ ನಗರದ ನಾನಾ ಸ್ಥಳಗಳಿಗೆ ಕರೆದೊಯ್ದು ಮಹಜರ್‌ ನಡೆಸಿದ್ದಾರೆ. ಆತ ಆಶ್ರಯ ಪಡೆದಿದ್ದ ಸುಂಕದಕಟ್ಟೆಯ ಮನೆ, ನಾಗರಬಾವಿಯಲ್ಲಿ ಪ್ರವೀಣ್‌ನನ್ನು ಭೇಟಿಯಾಗಿದ್ದ ಸ್ಥಳಗಳು, ಅಮೋಲ್‌ ಕಾಳೆ ಜತೆಗೆ ಸುತ್ತಾಡಿದ್ದ ಸ್ಥಳಗಳು ಎಲ್ಲ ಸ್ಥಳಗಳಿಗೂ ಕರೆದೊಯ್ದು ಮಹಜರ್‌ಗೆ ಸಹಕರಿಸಿದ್ದಾನೆ ಎನ್ನಲಾಗಿದೆ. ಈ ಕಾರಣದಿಂದ ಸಾಕ್ಷ್ಯ ದಾಖಲಿಸುವ ಮತ್ತು ಸಂಗ್ರಹಿಸುವ ಕಾರ್ಯ ತ್ವರಿತವಾಗಿ ಸಾಗುತ್ತಿದೆ. ಆರೋಪಿ ಇದೇ ರೀತಿ ಆರೋಗ್ಯಕರವಾಗಿ ತನಿಖೆಗೆ ಸಹಕರಿಸಿ ಸತ್ಯವನ್ನು ಹಂಚಿಕೊಂಡರೆ ಈತನನ್ನು ಮತ್ತೆ ಎಸ್‌ಐಟಿ ವಶಕ್ಕೆ ಪಡೆಯುವ ಅಗತ್ಯವೇ ಬೀಳುವುದಿಲ್ಲ.ಅವಧಿಗಿಂತ ಮೊದಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಹುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ರಾಕೇಶ್‌ ಮಠನಿಗೆ ಕರೆ


ವಿಜಯಪುರ ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ರಾಕೇಶ್‌ ಮಠ ಅವರಿಗೂ ಎಸ್‌ಐಟಿ ಅಧಿಕಾರಿಗಳು ಕರೆ ಮಾಡಿದ್ದು ಹೇಳಿಕೆ ನೀಡಲು ಕರೆದಿದ್ದಾರೆ ಎನ್ನಲಾಗಿದೆ. ಪರಶುರಾಮ್‌ ವಾಗ್ಮೋರೆ ನೀಡಿರುವ ಹೇಳಿಕೆಯಲ್ಲಿ ರಾಕೇಶ್‌ ಮಠ ಜತೆಗಿನ ಒಡನಾಟವನ್ನು ವಿನಿಮಯಮಾಡಿಕೊಂಡಿದ್ದಾನೆ. ಅದರಲ್ಲಿ ಗೌರಿ ಹತ್ಯೆಗೆ ಪರೋಕ್ಷವಾಗಿ ಸಂಬಂಧಪಟ್ಟ ಕೆಲವು ಸಂಗತಿಗಳೂ ಇದ್ದು ಅವುಗಳ ಬಗ್ಗೆ ಅನುಮಾನ ನಿವಾರಿಸಿಕೊಳ್ಳಲು ರಾಕೇಶ್‌ಗೆ ಕರೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಪರಶುರಾಮ್‌ ತಂದೆಯ ಜತೆಗೇ ಈತ ಕೂಡ ವಿಜಯಪುರದಿಂದ ಹೊರಟು ಶನಿವಾರದ ವೇಳೆಗೆ ಎಸ್‌ಐಟಿ ಎದುರು ಬರಬಹುದು ಎನ್ನಲಾಗಿದೆ.

ಎಂ.ಎಂ.ಕಲಬುರ್ಗಿ ಕೇಸು ವಿಚಾರಣೆ

ಪರಶುರಾಮ್‌ಗೆ ಭಗವಾನ್‌ ಹತ್ಯೆಗೆ ನಡೆಯುತ್ತಿದ್ದ ಸಂಚುಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಂತಿಲ್ಲ.ಗೌರಿ ಹತ್ಯೆ ಬಗ್ಗೆ ಸಾಕಷ್ಟು ಗೊತ್ತಿರುವುದರ ಜತೆಗೆ ಪ್ರೊ.ಎಂಎಂ.ಕಲಬುರ್ಗಿ ಅವರ ಹತ್ಯೆ ಬಗ್ಗೆಯೂ ಆರೋಪಿಗೆ ಬಹಳಷ್ಟು ಸಂಗತಿಗಳು ಗೊತ್ತಿರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಸಿಐಡಿ ಅಧಿಕಾರಿಗಳ ಜತೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಅವರೇ ವಿಚಾರಣೆ ನಡೆಸುವ ಸಾಧ್ಯತೆಗಳೂ ಇವೆ ಎನ್ನುತ್ತವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ