ಆ್ಯಪ್ನಗರ

ಮಹದಾಯಿ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಅಸ್ತು

ಮಹದಾಯಿ ನದಿ ನೀರಿನ ಹಂಚಿಕೆ ವಿಷಯವಾಗಿ ಜಲ ಪ್ರಾಧಿಕಾರ ನೀಡಿದ್ದ ...

Vijaya Karnataka 8 Jan 2019, 5:00 am
ಬೆಳಗಾವಿ: ಮಹದಾಯಿ ನದಿ ನೀರಿನ ಹಂಚಿಕೆ ವಿಷಯವಾಗಿ ಜಲ ಪ್ರಾಧಿಕಾರ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಇದರಿಂದ ಎರಡೂ ರಾಜ್ಯಗಳು ಇನ್ನೂ ಹೆಚ್ಚಿನ ಪ್ರಮಾಣದ ನೀರು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವ ಅವಕಾಶ ಸಿಕ್ಕಿದೆ.
Vijaya Karnataka Web suprim


ಸೋಮವಾರ ಬೆಳಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾ. ಚಂದ್ರಚೂಡ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ, ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ಮಹಾರಾಷ್ಟ್ರ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಹಾಜರಾಗುವಂತೆಯೂ ಗೋವಾ ರಾಜ್ಯಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ. ಸದ್ಯ ವಿಚಾರಣೆಯನ್ನು ಮೂರು ವಾರಗಳ ವರೆಗೆ ಮುಂದೂಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹಿರಿಯ ನ್ಯಾಯವಾದಿ ಎಂ.ಬಿ.ಜಿರಲಿ ತಿಳಿಸಿದ್ದಾರೆ.

''ಜಲ ನ್ಯಾಯಾಧಿಕರಣ ಪೀಠ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. 148 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಹಾಗಾಗಿ ನಮಗೆ 24.15 ಟಿಎಂಸಿ ನೀರು ಕೊಡಬೇಕು. ಹೈಡ್ರೊ ಎಲೆಕ್ಟ್ರಿಸಿಟಿಗೆ ಕೇವಲ 8 ಟಿಎಂಸಿ ಕೊಡಲಾಗಿದೆ. ಅದನ್ನು 14.5 ಟಿಎಂಸಿಗೆ ಹೆಚ್ಚಿಸಬೇಕು. ಕಾಳಿ ಯೋಜನೆಗೆ 5.5 ಟಿಎಂಸಿ ನೀರು ಬೇಕಿದ್ದು, ನ್ಯಾಯಾಧಿಕರಣ ಪೀಠ ಯಾವುದೇ ಪ್ರಮಾಣದ ನೀರು ಹಂಚಿಕೆ ಮಾಡಿಲ್ಲ. ಕುಡಿಯುವ ಉದ್ದೇಶಕ್ಕೆ ಒಟ್ಟು 7 ಟಿಎಂಸಿ ನೀರು ಕೇಳಿದ್ದರೆ, ಪ್ರತಿಯಾಗಿ ಕೇವಲ 5 ಟಿಎಂಸಿ ನೀಡಲಾಗಿದೆ,'' ಎನ್ನುವುದು ಕರ್ನಾಟಕ ಪರ ನ್ಯಾಯವಾದಿಗಳ ತಂಡದ ವಾದ.

ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ, ಹಿರಿಯ ನ್ಯಾಯವಾದಿಗಳಾದ ಮೋಹನ ಕಾತರಕಿ, ನಿಶಾಂತ ಪಾಟೀಲ, ಶರತ್‌ ಜವಳಿ, ಎಂ.ಬಿ.ಜಿರಲಿ ಮೊದಲಾದವರು ವಿಚಾರಣೆ ಸಂದರ್ಭ ಹಾಜರಿದ್ದರು. 1.3 ಟಿಎಂಸಿ ನೀರು ಪಡೆದಿರುವ ಮಹಾರಾಷ್ಟ್ರ ಕೂಡ ತನಗೂ ಹೆಚ್ಚಿನ ಪ್ರಮಾಣದ ನೀರು ಹಂಚಿಕೆಯಾಗಬೇಕು ಎಂದು ಅರ್ಜಿ ಸಲ್ಲಿಸಿತ್ತು.

ಗಡಿ ವಿವಾದ: ನಾಳೆ ತಕರಾರು ಅರ್ಜಿ ವಿಚಾರಣೆ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಷಯವಾಗಿ ಕರ್ನಾಟಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‌ ಮುಂದೆ ಬರಲಿದೆ. ಮಹಾಜನ್‌ ಆಯೋಗ ರಚನೆಗೆ ಒಪ್ಪಿಗೆ ನೀಡಿ, ನಂತರ ಆಯೋಗದ ವರದಿಯನ್ನೇ ವಿರೋಧಿಸಿ ಮಹಾರಾಷ್ಟ್ರ ಸಲ್ಲಿಸಿರುವ ಮೇಲ್ಮನವಿ ಕುರಿತು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು. ಗಡಿ ವಿವಾದ ಪ್ರಧಾನ ಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ಸಾಂವಿಧಾನಿಕವಾಗಿ ಬಗೆಹರಿಸಬಹುದಾದ ವಿಷಯವಾದ್ದರಿಂದ ಮಹಾರಾಷ್ಟ್ರ ರಾಜ್ಯದ ಮೇಲ್ಮನವಿ ಸ್ವೀಕರಿಸುವ ಅಧಿಕಾರ ಸುಪ್ರೀಂ ಕೋರ್ಟಿಗೆ ಇಲ್ಲ ಎಂದು ಎಂದು ಕರ್ನಾಟಕದ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ವಿಷಯವಾಗಿ ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ