ಆ್ಯಪ್ನಗರ

ದುಡ್ಡು ಮಾಡುವುದನ್ನು ಬಿಟ್ಟು ಕಲಾತ್ಮಕ ಸಿನಿಮಾ ಮಾಡಿ

ದುಡ್ಡು ಮಾಡುವ ಉದ್ದೇಶದಿಂದ ಚಿತ್ರಗಳನ್ನು ನಿರ್ಮಿಸುವುದನ್ನು ಬಿಟ್ಟು, ಜನರಲ್ಲಿ ಸೆನ್ಸಿಟಿವಿಟಿಯನ್ನು ಮೂಡಿಸುವಂತಹ ಉತ್ತಮ ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿ ಎಂದು ಹಿರಿಯ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಚಲನಚಿತ್ರ ನಿರ್ಮಾಪಕರಿಗೆ ಕಿವಿಮಾತು ಹೇಳಿದರು.

Vijaya Karnataka 29 Apr 2019, 5:00 am
ಬೆಂಗಳೂರು : ದುಡ್ಡು ಮಾಡುವ ಉದ್ದೇಶದಿಂದ ಚಿತ್ರಗಳನ್ನು ನಿರ್ಮಿಸುವುದನ್ನು ಬಿಟ್ಟು, ಜನರಲ್ಲಿ ಸೆನ್ಸಿಟಿವಿಟಿಯನ್ನು ಮೂಡಿಸುವಂತಹ ಉತ್ತಮ ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿ ಎಂದು ಹಿರಿಯ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಚಲನಚಿತ್ರ ನಿರ್ಮಾಪಕರಿಗೆ ಕಿವಿಮಾತು ಹೇಳಿದರು.
Vijaya Karnataka Web 2804-2-2-KSG_42


ಪ್ರೀತಿ ಪುಸ್ತಕ ಪ್ರಕಾಶನವು ಡಾ. ರಾಜ್‌ ಕಲಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಕೆ. ಶಿವರಾಮ ಕಾರಂತರ ಕಾದಂಬರಿ ಆಧಾರಿತ 'ಮೂಕಜ್ಜಿಯ ಕನಸುಗಳು' ಚಲನಚಿತ್ರ ಪ್ರದರ್ಶನದ ವೇಳೆ ಚಿತ್ರ ನಿರ್ದೇಶಕ ಪಿ. ಶೇಷಾದ್ರಿಯವರನ್ನು ಅಭಿನಂದಿಸಿ ಭಾನುವಾರ ಅವರು ಮಾತನಾಡಿದರು.

''ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಹೀಗಾಗಿ ಗಂಭೀರವಾದ ಮತ್ತು ಉತ್ತಮ ಕಲಾತ್ಮಕ ಚಿತ್ರಗಳನ್ನು ಮಾಡುವುದು ನಿರ್ಮಾಪಕರ ಜವಾಬ್ದಾರಿ. ಹೀಗೆ ಮಾಡುವುದರಿಂದ ಮಕ್ಕಳನ್ನೂ ಒಳಗೊಂಡಂತೆ ಇಡೀ ಸಮಾಜ ಉತ್ತಮ ಹಾದಿಯತ್ತ ಸಾಗಲು ಸಾಧ್ಯವಾಗುತ್ತದೆ. ಆದರೆ ನಿರ್ಮಾಪಕರು ಕೇವಲ ಹಣ ಮಾಡುವ ಸಲುವಾಗಿಯೇ ಸಿನಿಮಾ ಮಾಧ್ಯಮವನ್ನು ಒಂದು ಬಿಸಿನೆಸ್‌ ಆಗಿ ಪರಿವರ್ತಿಸಿಕೊಂಡಿದ್ದಾರೆ. ಇದು ಬಹಳ ಬೇಸರದ ಸಂಗತಿ. ಈ ಬಗ್ಗೆ ನಾನು ಹಿಂದೆಯೂ ಹೇಳಿದ್ದೆ. ಆದರೆ ಪರಿಸ್ಥಿತಿ ಬದಲಾಗಲಿಲ್ಲ'' ಎಂದು ಕಳವಳ ವ್ಯಕ್ತಪಡಿಸಿದರು.

''ಹಲವು ಬಾರಿ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬಂದರೂ ಥಿಯೇಟರ್‌ ಸಮಸ್ಯೆ ಎದುರಾಗುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಿನಿಮಾ ಕ್ಷೇತ್ರ ಕಾರ್ಯಪ್ರವೃತ್ತವಾಗಬೇಕು. ಸಿನಿಮಾ ಪ್ರದರ್ಶನಗಳ ಮಧ್ಯೆ ಕನಿಷ್ಠ 30 ಸೆಕೆಂಡ್‌ಗಳಾದರೂ ಮುಂಬರುವ ಸದಭಿರುಚಿಯ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇಕ್ಷಕರಿಗೆ ಸಂದೇಶ ನೀಡಬೇಕು'' ಎಂದು ಬೈರಪ್ಪ ಸಲಹೆ ಮಾಡಿದರು.

ಚಲನಚಿತ್ರ ನಿರ್ದೇಶಕ ಡಾ. ಗಿರೀಶ್‌ ಕಾಸರವಳ್ಳಿ ಮಾತನಾಡಿ, ''ಶಿವರಾಮ ಕಾರಂತರು ಹಲವು ಅದ್ಭುತ ಕಾದಂಬರಿಗಳನ್ನು ಬರೆದಿದ್ದಾರೆ. ಸಿನಿಮಾಗಳಾಗುವಂತಹ ಒಳ್ಳೆಯ ಕಥೆಯಿದ್ದರೂ ಹೆಚ್ಚಿನವು ಸಿನಿಮಾಗಳಾಗದಿರುವುದು ಬೇಸರದ ಸಂಗತಿ.'ಮೂಕಜ್ಜಿಯ ಕನಸುಗಳು' ಭಿನ್ನ ಕಾದಂಬರಿಯಾಗಿದ್ದು, ಇದೀಗ ಶೇಷಾದ್ರಿಯವರು ಇದನ್ನು ಮಿಶ್ರ ಮಾಧ್ಯಮದೊಂದಿಗೆ ತೆರೆಯ ಮೇಲೆ ಅತ್ಯುತ್ತಮವಾಗಿ ತೋರಿಸಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ''ಚಲನಚಿತ್ರ ಕ್ಷೇತ್ರ ನನ್ನ ಆಯ್ಕೆಯಲ್ಲ. ಆದರೆ ಹೊಟ್ಟೆಪಾಡಿಗಾಗಿ ಈ ಕ್ಷೇತ್ರಕ್ಕೆ ಬಂದೆ. ನನಗೆ ಒಳ್ಳೆಯ ಹೆಸರು ನೀಡಿತು. 'ಮೂಕಜ್ಜಿಯ ಕನಸುಗಳು' ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಕಲಾತ್ಮಕವಾಗಿದೆ. ಮುಂದಿನ ದಿನಗಳಲ್ಲಿ ಸನ್ಮಾನಗಳನ್ನು ಬಿಟ್ಟು, ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ಮಾಡಲು ತೊಡಗಿಸಿಕೊಳ್ಳುತ್ತೇನೆ'' ಎಂದರು.

ಪಿ. ಶೇಷಾದ್ರಿ ದಂಪತಿಯನ್ನು ಅಭಿನಂದಿಸಲಾಯಿತು. ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ, ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು, ಕಾರ್ಯಕ್ರಮದ ಸಂಯೋಜಕ ದೊಡ್ಡಹುಲ್ಲೂರು ರುಕ್ಕೋಜಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ