ಆ್ಯಪ್ನಗರ

94 ಸಿ, 94 ಸಿಸಿಯಡಿ ಅರ್ಹ ಮನೆಗಳಿಗೂ ಪರಿಹಾರ: ದೇಶಪಾಂಡೆ

ಕೊಡಗು ಜಿಲ್ಲೆಯಲ್ಲಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಸಕ್ರಮಕ್ಕೆ ಅರ್ಹತೆ ಪಡೆದಿದ್ದ ಮನೆಗಳು ಪ್ರಕೃತಿ ವಿಕೋಪದಲ್ಲಿ ...

Vijaya Karnataka 29 Jun 2019, 5:00 am
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಸಕ್ರಮಕ್ಕೆ ಅರ್ಹತೆ ಪಡೆದಿದ್ದ ಮನೆಗಳು ಪ್ರಕೃತಿ ವಿಕೋಪದಲ್ಲಿ ಹಾನಿಗೊಳಗಾಗಿದ್ದರೆ ಅಂತಹ ಮನೆಗಳಿಗೂ ಸಹ ನಿಯಮಾನುಸಾರ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ.
Vijaya Karnataka Web R_V_Deshpande  Cong


''ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಸಂತ್ರಸ್ತರು ಹಾಗೂ ಅಧಿಕಾರಿಗಳು ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರು. ಜಿಲ್ಲೆಯ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಹಲವು ಸಂತಸ್ತರು ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಇವರು ಅರ್ಹತೆ ಪಡೆದಿದ್ದರೂ ಪ್ರವಾಹದಲ್ಲಿ ಮನೆ ಕೊಚ್ಚಿ ಹೋದ ಪ್ರಯುಕ್ತ ಸೂಕ್ತ ಪರಿಹಾರ ದೊರಕದೆ ತೊಂದರೆಗೀಡಾಗಿದ್ದರು. ಈ ಆದೇಶದಿಂದಾಗಿ ಇಂತಹ ಸಂತ್ರಸ್ತರಿಗೆ ಅನುಕೂಲವಾಗಲಿದೆ,'' ಎಂದು ಸಚಿವರು ವಿವರಿಸಿದ್ದಾರೆ.

''ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94ಸಿ ಮತ್ತು 94ಸಿಸಿ ಯಡಿ ಅರ್ಹರಿದ್ದರೆ 'ಸಿ ಮತ್ತು ಡಿ' ವರ್ಗೀಕೃತ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಮತ್ತು ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ 'ಸಿ' ಮತ್ತು 'ಡಿ' ವರ್ಗೀಕೃತ ಜಮೀನುಗಳಲ್ಲಿ ಬಗರ್‌ ಹುಕುಂ ಅಡಿ ಸಕ್ರಮ ಕೋರಿ ಬಾಕಿ ಇರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಲು ಆದೇಶಿಸಲಾಗಿದೆ,'' ಎಂದು ಸಚಿವರು ಹೇಳಿದ್ದಾರೆ.

'ಸಿ ಮತ್ತು ಡಿ' ವರ್ಗೀಕೃತ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗ್ಗೆ ಕೊಡಗು ಜಿಲ್ಲೆಯ ಜನ ಪ್ರತಿನಿಧಿಗಳು ಇದೇ ಸಭೆಯಲ್ಲಿ ಸಚಿವರ ಗಮನಕ್ಕೆ ತಂದಿದ್ದರು. ಕಂದಾಯ ಸಚಿವ ದೇಶಪಾಂಡೆ ಅವರು ಶುಕ್ರವಾರ ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಭೂ ಸರ್ವೇಕ್ಷ ಣಾ ಇಲಾಖೆ ಸೇರಿದಂತೆ ಇತರೆ ಸಂಸ್ಥೆಗಳ ನುರಿತ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿನ ಭೂ ಪರಿವರ್ತನೆ ವಿಷಯ ಕುರಿತಂತೆ ಸಮಾಲೋಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ