ಆ್ಯಪ್ನಗರ

ಕೊರೊನಾಗೆ ಮಾಸ್ಕ್ ರಾಮಬಾಣ

ಕೋವಿಡ್ ಹಗುರವಾಗಿ ತೆಗೆದುಕೊಳ್ಳುವ ಕಾಯಿಲೆ ಅಲ್ಲ. ಅದು ಖಂಡಿತಾ ಮಾರಕ ವೈರಸ್. ಸ್ವತಃ ನಾನೇ ಸೋಂಕಿತನಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹೊರಗೆ ಬಂದಿದ್ದೇನೆ. ಸೋಂಕು ತಗುಲುವ ಮುನ್ನ, ಗುಣಮುಖನಾದ ನಂತರ ಹೇಗೆ ಆರೋಗ್ಯ ಇರುತ್ತದೆ ಎಂಬ ಅನುಭವ ಸ್ವತಃ ನನಗೇ ಆಗಿದೆ.

Vijaya Karnataka Web 1 Oct 2020, 10:30 pm
ಬೆಂಗಳೂರು: ಕೋವಿಡ್‌ ತಡೆಗಟ್ಟಲು ಮಾಸ್ಕ್ ರಾಮಬಾಣ. ಮಾರಕ ವೈರಸ್ʼಗೆ ಮಾಸ್ಕ್ ಅತ್ಯುತ್ತಮ ಅಸ್ತ್ರವಾಗಿದೆ. ವೈಜ್ಞಾನಿಕವಾಗಿಯೂ ಈ ಅಂಶ ಸಾಬೀತಾಗಿದ್ದು, ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಮಾಸ್ಕ್ ಅನ್ನು ತಪ್ಪದೇ ಹಾಗೂ ಶುಚಿ ಮಾಡಿಕೊಂಡು ಬಳಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ‌ಅಶ್ವತ್ಥ ನಾರಾಯಣ ಹೇಳಿದರು.
Vijaya Karnataka Web ಡಿಸಿಎಂ ಅಶ್ವತ್ಥನಾರಾಯಣ
ಡಿಸಿಎಂ ಅಶ್ವತ್ಥನಾರಾಯಣ


ಕೋವಿಡ್‌ ಸೋಂಕಿಗೆ ತುತ್ತಾಗಿ ಹಲವಾರು ದಿನ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆದಿದ್ದ ಅವರು ಗುರುವಾರ ಸಂಪುಟ ಸಭೆಗೆ ಹಾಜರಾಗಿದ್ದರಲ್ಲದೆ, ಈ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದರು.

ವೈರಸ್‌ ಮತ್ತಷ್ಟು ಹರಡಲು ಬಿಡಬಾರದು. ಇದರಲ್ಲಿ ಪ್ರತಿಯೊಬ್ಬರ ಕರ್ತವ್ಯವೂ ಇದೆ. ಮಾಸ್ಕ್ ತೆಗೆದು ಮಾತನಾಡುವಂಥ ಕೆಲಸವನ್ನು ಯಾರು ಮಾಡಬಾರದು. ದಂಡ ವಿಧಿಸಲು ಸರಕಾರಕ್ಕೆ ಇಷ್ಟವಿಲ್ಲ. ಆದರೆ, ಜನರು ಈ ಬಗ್ಗೆ ಮೂಡಿಸಲಾಗಿರುವ ಜಾಗೃತಿಯ ಬಗ್ಗೆ ಗಮನ ಹರಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು..

ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸಲು ಸರಕಾರ ನಿರ್ಧರಿಸಿದೆ. ಆದರೆ, ಆ ದಂಡದ ಪ್ರಮಾಣ ಹೆಚ್ಚಾಗಿದೆ ಎಂದು ಜನರ ದೂರುತ್ತಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು.

ಇಲ್ಲಿ ದಂಡ ಜಾಸ್ತಿ, ಕಡಿಮೆ ಎನ್ನುವುದಕ್ಕಿಂತ ಜನರ ಆರೋಗ್ಯವೇ ಮುಖ್ಯ. ಕೋವಿಡ್ ಪೀಡೆ ಕೆಲದಿನ ಇದ್ದು ಹೋಗಿಬಿಡುತ್ತೆ ಎನ್ನುವ ನಂಬಿಕೆ ಇತ್ತು. ಅದು ಬಹಳ ಕಾಲ ಮುಂದುವರಿದಿದೆ. ಹೀಗಾಗಿ ಜನರ ಆರೋಗ್ಯವನ್ನು ರಕ್ಷಣೆ ಮಾಡುವುದು ಸರಕಾರದ ಕರ್ತವ್ಯ ಹಾಗೂ ಜನರು ಮಾಸ್ಕ್‌ ಅನ್ನು ತಪ್ಪದೇ ಧರಿಸಬೇಕು ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಜನರು ವೈರಸ್ ಜತೆಯೇ ಜೀವನ ನಡೆಸಬೇಕು. ಹೀಗಾಗಿ ಹೊರಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯ, ಜತೆಗೆ ವೈರಸ್ ಇನ್ನು ವ್ಯಾಪಕವಾಗಿ ಹರಡುತ್ತದೆ. ಆದರೂ ಜನರು ಮಾಸ್ಕ್ ಧರಿಸದೇ ಮುಕ್ತವಾಗಿ ಓಡಾಟ ನಡೆಸುತ್ತಿರುವುದು ಸರಿಯಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಇತರರ ಆರೋಗ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಂಡವನ್ನು ವಿಧಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನಾನು ಸೋಂಕಿತನಾಗಿದ್ದೆ...


ಕೋವಿಡ್ ಹಗುರವಾಗಿ ತೆಗೆದುಕೊಳ್ಳುವ ಕಾಯಿಲೆ ಅಲ್ಲ. ಅದು ಖಂಡಿತಾ ಮಾರಕ ವೈರಸ್. ಸ್ವತಃ ನಾನೇ ಸೋಂಕಿತನಾಗಿ ಚಿಕಿತ್ಸೆ ಪಡೆದು ಗುಣಮುಖನಾಗಿ ಹೊರಗೆ ಬಂದಿದ್ದೇನೆ. ಸೋಂಕು ತಗುಲುವ ಮುನ್ನ, ಗುಣಮುಖನಾದ ನಂತರ ಹೇಗೆ ಆರೋಗ್ಯ ಇರುತ್ತದೆ ಎಂಬ ಅನುಭವ ಸ್ವತಃ ನನಗೇ ಆಗಿದೆ. ಕ್ವಾರಂಟೈನ್ ಆಗಿ ನಾನು ಎದುರಿಸಿದ ಕಷ್ಟದ ಪರಿಸ್ಥಿತಿಯನ್ನು ಬೇರಾರೂ ಎದುರಿಸುವುದು ಬೇಡ. ಎಲ್ಲರೂ ಸುರಕ್ಷಿತವಾಗಿರಬೇಕು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ