ಆ್ಯಪ್ನಗರ

ಪ್ರಭಾವಿಗಳ ಕಟ್ಟಡ ತೆರವು ವಾರದಲ್ಲಿ ಆರಂಭ: ಮೇಯರ್‌

ಪ್ರತಿಷ್ಠಿತ ಬಿಲ್ಡರ್‌ಗಳು ಮತ್ತು ಪ್ರಭಾವಿ ರಾಜಕಾರಣಿಗಳು ರಾಜಕಾಲುವೆಯನ್ನು ಕಬಳಸಿ ನಿರ್ಮಿಸಿರುವ ಬೃಹತ್‌ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಮುಂದಿನ ವಾರದಿಂದಲೇ ಆರಂಭವಾಗಲಿದೆ ಎಂದು ಬಿಬಿಎಂಪಿ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಹೇಳಿದರು.

ವಿಕ ಸುದ್ದಿಲೋಕ 21 Aug 2016, 4:00 am

ರಾಜಕಾಲುವೆ ಕಬಳಿಸಿರುವ ಬಿಲ್ಡರ್‌ಗಳು, ರಾಜಕಾರಣಿಗಳು ಸೇರಿದಂತೆ 20 ಮಂದಿಯ ಪಟ್ಟಿ ಸಿದ್ಧ

ಬೆಂಗಳೂರು: ಪ್ರತಿಷ್ಠಿತ ಬಿಲ್ಡರ್‌ಗಳು ಮತ್ತು ಪ್ರಭಾವಿ ರಾಜಕಾರಣಿಗಳು ರಾಜಕಾಲುವೆಯನ್ನು ಕಬಳಸಿ ನಿರ್ಮಿಸಿರುವ ಬೃಹತ್‌ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ಮುಂದಿನ ವಾರದಿಂದಲೇ ಆರಂಭವಾಗಲಿದೆ ಎಂದು ಬಿಬಿಎಂಪಿ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಹೇಳಿದರು.

'ವಿಜಯ ಕರ್ನಾಟಕ' ಕಚೇರಿಯಲ್ಲಿ ಶನಿವಾರ ನಡೆದ 'ಫೋನ್‌ ಇನ್‌' ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರವಾಣಿ ಕರೆಗಳಿಗೆ ಉತ್ತರ ನೀಡಿದ ಬಳಿಕ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಅವರು, ''ಬಡವರ ಮನೆಗಳನ್ನಷ್ಟೇ ಒಡೆಯುತ್ತಿಲ್ಲ. ಶ್ರೀಮಂತರ ಮನೆಗಳನ್ನೂ ಒಡೆಯುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ಈ ಬಗ್ಗೆ ಯಾವುದೇ ಸಂಶಯ ಬೇಡ,'' ಎಂದು ಹೇಳಿದರು.

''ಶಾಸಕ ಆರ್‌.ವಿ.ದೇವರಾಜ್‌ ಅವರಿಗೆ ಸೇರಿದ ಪೈ ವೈಭವ್‌ ಹೋಟೆಲ್‌ನ ಶೇಕಡಾ 30ರಷ್ಟು ಭಾಗವನ್ನು ತೆರವು ಮಾಡಲಾಗುತ್ತಿದೆ. ಹರಳೂರು ಕೆರೆ ಬಳಿ ಪುರವಂಕರ ನಿರ್ಮಾಣ ಸಂಸ್ಥೆಯು ಕಾಲುವೆ ಒತ್ತುವರಿ ಮಾಡಿ ನಿರ್ಮಿಸಿದ್ದ ಕಾಪೌಂಡ್‌, ರಾಜರಾಜೇಶ್ವರಿನಗರದಲ್ಲಿ ಕಾಲುವೆ ಮೇಲಿದ್ದ ಪದ್ಮಾವತಿ ಮತ್ತು ಮೀನಾಕ್ಷಿ ಕಲ್ಯಾಣ ಮಂಟಪದ ಒತ್ತುವರಿ ಭಾಗವನ್ನು ಒಡೆದು ಹಾಕಲಾಗಿದೆ. ಇವರೆಲ್ಲರೂ ದೊಡ್ಡವರಲ್ಲವೇ? ಕಾಲುವೆಯನ್ನು ಒತ್ತುವರಿ ಮಾಡಿದವರು ಸಚಿವರಾಗಲಿ, ಶಾಸಕರಾಗಿರಲಿ ಅಥವಾ ಪ್ರಭಾವಿ ವ್ಯಕ್ತಿಗಳೇ ಇರಲಿ, ತೆರವುಗೊಳಿಸದೆ ಬಿಡುವುದಿಲ್ಲ. ನನ್ನ ಮನೆ ಇದ್ದರೂ ಒಡೆಯುತ್ತೇವೆ,'' ಎಂದು ತಿಳಿಸಿದರು.

ರಾಜರಾಜೇಶ್ವರಿನಗರದಲ್ಲಿರುವ ನಟ ದರ್ಶನ್‌ ಮನೆಯನ್ನು ಏಕೆ ಮುಟ್ಟಿಲ್ಲ ಎಂಬ ಸಾರ್ವಜನಿಕರೊಬ್ಬರ ಪ್ರಶ್ನೆಗೆ, ''ದರ್ಶನ್‌ ಸೇರಿದಂತೆ ಎಲ್ಲರಿಗೂ ಒಂದೇ ಕಾನೂನು. ಬಡವರು, ಮಧ್ಯಮ ವರ್ಗದವರ ಮನೆಗಳನ್ನು ಮಾತ್ರ ಕೆಡವಿ, ಬಲಾಢ್ಯರ ಕಟ್ಟಡಗಳನ್ನು ರಕ್ಷಿಸುವ ಉದ್ದೇಶವಿಲ್ಲ. ಭೂ ದಾಖಲೆಗಳು ಮತ್ತು ಭೂ ಮಾಪನ ಇಲಾಖೆಯ ಅಧಿಕಾರಿಗಳು ಗ್ರಾಮ ನಕ್ಷೆಯಂತೆ ಕಾಲುವೆಯ ಸರ್ವೇ ನಡೆಸಿ, ಗುರುತು ಹಾಕಿದ (ಮಾರ್ಕ್‌) ಕಡೆ ಮುಲಾಜಿಲ್ಲದೆ ತೆರವು ಮಾಡಲಾಗುತ್ತಿದೆ. ಐಟಿ-ಬಿಟಿ ಕಂಪೆನಿಗಳು ಕೆರೆ, ರಾಜಕಾಲುವೆ ಕಬಳಿಕೆ ಮಾಡಿದ್ದರೆ ಅದನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ,'' ಎಂದು ಉತ್ತರಿಸಿದರು.

''ಬೆಂಗಳೂರಿನಲ್ಲಿ ಒಂದು ಕೋಟಿ ಜನಸಂಖ್ಯೆಯಿದ್ದು, ಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮನೆಗಳನ್ನು ಕೆಡಹುವುದರಿಂದ ಕೆಲವರಿಗೆ ನೋವಾಗಲಿದೆ. ಅದು ನಮಗೂ ಅರ್ಥವಾಗುತ್ತಿದೆ. ಆದರೆ, ತೆರವುಗೊಳಿಸುವುದರಿಂದ ಹಲವು ಪ್ರದೇಶಗಳು ಜಲಾವೃತಗೊಳ್ಳುವುದು ತಪ್ಪಲಿದೆ. ಯಾರನ್ನೂ ಬಲವಂತವಾಗಿ ಮನೆಯಿಂದ ಹೊರ ಹಾಕಿ ಕಾರ್ಯಾಚರಣೆ ನಡೆಸುತ್ತಿಲ್ಲ. ಸ್ವಯಂ ತೆರವಿಗೆ ಕಾಲಾವಕಾಶವನ್ನೂ ನೀಡಲಾಗುತ್ತಿದೆ,'' ಎಂದರು.

-----

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಪ್ರತಿಷ್ಠಿತ ಬಿಲ್ಡರ್‌ಗಳು, ಟೆಕ್‌ಪಾರ್ಕ್‌ಗಳು ಮತ್ತು ಪ್ರಭಾವಿಗಳನ್ನು ಒಳಗೊಂಡ 20 ಮಂದಿಯ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದ ಒಪ್ಪಿಗೆ ಸಿಕ್ಕ ತಕ್ಷಣವೇ ತೆರವು ಕಾರ್ಯಾಚರಣೆ ಶುರು ಮಾಡಲಾಗುವುದು. ಇದಲ್ಲದೆ ಭೂ ಕಂದಾಯ ಇಲಾಖೆಯ ಜಂಟಿ ನಿರ್ದೇಶಕರಿಗೂ ಒತ್ತುವರಿದಾರರ ಪಟ್ಟಿಯನ್ನು ಕಳುಹಿಸಿದ್ದು, ಮತ್ತೊಮ್ಮೆ ದೃಢೀಕರಿಸಿಕೊಡಲು ಕೋರಲಾಗಿದೆ. ಅವರು ದೃಢೀಕರಿಸಿ ಕೊಟ್ಟ ತಕ್ಷಣವೇ ತೆರವು ಕಾರ್ಯ ಶುರುವಾಗಲಿದೆ

- ಮಂಜುನಾಥರೆಡ್ಡಿ, ಬಿಬಿಎಂಪಿ ಮೇಯರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ