ಆ್ಯಪ್ನಗರ

ಟ್ವಿಟರ್‌ ವಾರ್‌ ತೀವ್ರ: ಮೋದಿಗೆ ಸಿಎಂ ಚಾಲೆಂಜ್‌

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಟ್ವಿಟರ್‌ನಲ್ಲಿ ಸವಾಲು ಹಾಕಿದ್ದಾರೆ. ಜತೆಗೆ 4 ಖಡಕ್‌ ಪ್ರಶ್ನೆಗಳನ್ನು ಕೇಳಿದ್ದಾರೆ.

Vijaya Karnataka 7 Feb 2018, 8:32 am

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಟ್ವಿಟರ್‌ನಲ್ಲಿ ಸವಾಲು ಹಾಕಿದ್ದಾರೆ. ಜತೆಗೆ 4 ಖಡಕ್‌ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರಾಜ್ಯದ ಕಾಂಗ್ರೆಸ್‌ ಸರಕಾರವನ್ನು 'ಹತ್ತು ಪರ್ಸೆಂಟ್‌ ಕಮಿಷನ್‌ ಸರಕಾರ'ವೆಂದು ಆರೋಪಿಸಿದ್ದರು. ಈ ಆಪಾದನೆಗೆ ದಾಖಲೆ ಒದಗಿಸುವಂತೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು. ಯಾವುದೇ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದ್ದರೂ ಆಧಾರ ನೀಡಬೇಕು. ಪ್ರಧಾನಿಯಾಗಿ ಬೇಜವಾಬ್ದಾರಿ ಹೇಳಿಕೆ ಕೊಡುವುದು ಸಲ್ಲವೆಂದು ಆಕ್ಷೇಪಿಸಿದ್ದರು.

Vijaya Karnataka Web modi and cm tweet
ಟ್ವಿಟರ್‌ ವಾರ್‌ ತೀವ್ರ: ಮೋದಿಗೆ ಸಿಎಂ ಚಾಲೆಂಜ್‌


ಈ ವಿಷಯದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ, ಮಂಗಳವಾರ ಬೆಳಗ್ಗೆ ಟ್ವೀಟ್‌ ಮಾಡುವ ಮೂಲಕ ಭ್ರಷ್ಟಾಚಾರ ಸಂಬಂಧ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾರೆ. ತಕ್ಷಣವೇ ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಲೋಕಾಯುಕ್ತದ ಎಲ್ಲ ಅಧಿಕಾರವನ್ನು ಮೊಟಕುಗೊಳಿಸಿದ ಬಗ್ಗೆ ಉತ್ತರ ನೀಡಿ ಎಂಬ ಒತ್ತಾಯ ಸೇರಿದಂತೆ 5 ಪ್ರಶ್ನೆ ಕೇಳಿದ್ದಾರೆ.

ಈ ಮಧ್ಯೆ ರಾಷ್ಟ್ರೀಯ ವಾರಪತ್ರಿಕೆಯೊಂದರ ಈ ಹಿಂದಿನ ಮುಖಪುಟದ ಪ್ರತಿ ಅಪ್‌ಲೋಡ್‌ ಮಾಡಿರುವ ಕೃಷಿ ಸಚಿವ ಕೃಷ್ಣ ಬೈರೇಗೌಡ, 2011ರಲ್ಲಿ ನಿಮ್ಮ ಪಕ್ಷದ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕರ್ನಾಟಕವು ಅತಿ ಹೆಚ್ಚು ಭ್ರಷ್ಟಾಚಾರ ನಡೆಸಿದ ರಾಜ್ಯವೆನಿಸಿಕೊಂಡಿತ್ತು ಎಂದು ಟಾಂಗ್‌ ಕೊಟ್ಟಿದ್ದಾರೆ.

ಕೇಂದ್ರ ಸಚಿವ ಡಿ. ವಿ. ಸದಾನಂದಗೌಡರೂ ಈ ಟ್ವೀಟ್‌ ಸಮರದಲ್ಲಿ ಭಾಗಿಯಾಗಿ ಕಾಂಗ್ರೆಸ್‌ಗೆ ಕುಟುಕುವ ಕೆಲಸ ಮಾಡಿದ್ದಾರೆ. ಚರ್ಚೆಗೆ ತಾವು ಸಿದ್ಧವಿರುವುದಾಗಿ ಬಿಜೆಪಿಯ ಸಿ. ಟಿ. ರವಿ ಸವಾಲು ಹಾಕಿದ್ದಾರೆ. ಈ ಎಲ್ಲ ಟ್ವೀಟ್‌ಗಳೂ ವೈರಲ್‌ ಆಗಿದ್ದು, ರಾಜಕೀಯ ವಲಯದ ಚರ್ಚೆ ರಂಗೇರುವಂತೆ ಮಾಡಿವೆ.

.............................

'ಮೋದಿಜಿ ನೆನಪು ಮಾಡಿಕೊಳ್ಳಿ. ನಿಮ್ಮ ಪಕ್ಷದ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ 2011ರಲ್ಲಿ ಕರ್ನಾಟಕ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿದ ರಾಜ್ಯ ಎನ್ನಿಸಿಕೊಂಡಿತ್ತು.'
- ಕೃಷ್ಣ ಬೈರೇಗೌಡ, ಕೃಷಿ ಸಚಿವ

'ಮೋದಿಯವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ಟ್ರೆಂಡ್‌ ಹೇಗಿದೆ ಅಂದ್ರೆ ಪ್ರತಿಯೊಬ್ಬರ ಬಾಯಲ್ಲೂ ಮೋದಿ ಮೋದಿ. ಕಾಂಗ್ರೆಸ್‌ ನಾಯಕರಂತೂ ಯಾವುದಾದರೂ ಹುಳುಕು ಸಿಗುತ್ತದೇನೋ ಎನ್ನುವ ಭ್ರಮೆಯಲ್ಲಿ ಮೋದಿಯವರ ಜಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಇನ್ನೊಂದು ಕಡೆ ನೊಣ ಹುಡುಕುವ ಪ್ರಯತ್ನ!'

- ಸದಾನಂದಗೌಡ, ಕೇಂದ್ರ ಸಚಿವ

----------------------

'ಆತ್ಮೀಯ 'ಕರಪ್ಷನ್‌ ಕಿಂಗ್‌' ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ನ್ಯೂ ಇಂಡಿಯಾ ಕಟ್ಟುವುದರಲ್ಲಿ ಬ್ಯೂಸಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತನಾಗಿ ನಿಮ್ಮ ಆಹ್ವಾನವನ್ನು ನಾನು ಸ್ವೀಕರಿಸುತ್ತೇನೆ. ಸ್ಥಳ ಮತ್ತು ಸಮಯವನ್ನು ತಿಳಿಸಿ.'

- ಸಿ. ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

.........................

ರವಿ, ಗಣಪತಿ ಆತ್ಮಹತ್ಯೆ ವೈಯಕ್ತಿಕ

ಈ ನಡುವೆ ಸಿಎಂ ಟ್ವೀಟ್‌ಗೆ ಪ್ರತಿಕ್ರಿಯಿಸಿದವರಲ್ಲಿ ಸ್ಟೀಲ್‌ ಬ್ರಿಜ್‌, ಐಎಎಸ್‌ ಅಧಿಕಾರಿ ಡಿ.ಕೆ. ರವಿ, ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ, ದುಬಾರಿ ಹ್ಯೂಬ್ಲೋಟ್‌ ವಾಚ್‌ನ ವಿಚಾರ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ''ಸ್ಟೀಲ್‌ ಬ್ರಿಜ್‌ ಯೋಜನೆ ಕೈಬಿಡಲಾಗಿದೆ. ಡಿ.ಕೆ. ರವಿ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಿಬಿಐ ಹೇಳಿದೆ. ಗಣಪತಿ ಅವರೂ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ಸಿಐಡಿ ತಿಳಿಸಿದೆ. ಈ ಬಗ್ಗೆ ಸಿಬಿಐ ತನಿಖೆ ಮುಂದುವರಿದಿದೆ. ಕೊಡುಗೆಯಾಗಿ ಬಂದ ವಾಚನ್ನು ಸರಕಾರಕ್ಕೆ ನೀಡಲಾಗಿದೆ. ಇನ್ನು ಡಿಐಜಿ ರೂಪಾ ಮಾಡಿದ್ದ ಆರೋಪ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರಿಂದ ತನಿಖೆ ಮಾಡಿಸಲಾಗಿದೆ. ಅವರ ಶಿಫಾರಸಿನ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ,'' ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ