ಆ್ಯಪ್ನಗರ

2,464 ಕೋಟಿ ರೂ. ಮೊತ್ತದ 34 ಏರೋ ಸ್ಪೇಸ್ ಉದ್ಯಮ ಒಪ್ಪಂದಗಳಿಗೆ ಸಹಿ

ನೀತಿ ಆಯೋಗ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕರ್ನಾಟಕ, 2020ರ ಪಟ್ಟಿಯಲ್ಲೂ ಅಗ್ರ ಸ್ಥಾನ ಉಳಿಸಿಕೊಂಡಿದೆ.

Vijaya Karnataka Web 5 Feb 2021, 4:54 pm
ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಏರೋಸ್ಪೇಸ್‌ ಹಬ್‌ ಆಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಸಜ್ಜಾಗಿರುವ ಕರ್ನಾಟಕ, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಿದೆ.
Vijaya Karnataka Web ಏರೋ ಇಂಡಿಯಾ
ಏರೋ ಇಂಡಿಯಾ


ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ನಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್‌, "ಏರೋಸ್ಪೇಸ್‌ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ" ಎಂದರು.

"ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳಿಗೆ ರಾಜ್ಯದಲ್ಲಿ ಈಗಾಗಲೇ ಪೂರಕ ಪರಿಸರ ವ್ಯವಸ್ಥೆ ಇದ್ದು, ಈ ಕೈಗಾರಿಕಾ ವಲಯಗಳಲ್ಲಿ ಅಗತ್ಯ ಭೂಮಿಯೂ ಲಭ್ಯವಿದೆ. ನೂತನ ಕೈಗಾರಿಕಾ ನೀತಿ 2020-25 ಅಡಿ ಹೂಡಿಕೆದಾರರಿಗೆ ಅನುಕೂಲಕರ ಅರ್ಥ ವ್ಯವಸ್ಥೆ ರೂಪಿಸಲು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅಗತ್ಯ ಕೌಶಲ ಹೊಂದಿರುವ ಕಾರ್ಮಿಕ ಕಾರ್ಯಪಡೆಯ ಲಭ್ಯತೆ ಜತೆಗೆ, ಕಾರ್ಮಿಕ ಕಾನೂನಿಲ್ಲೂ ಸುಧಾರಣೆ ತರಲಾಗಿದೆ. ಉತ್ತಮ ಸಂಪರ್ಕ ಹಾಗೂ ಲಾಜಿಸ್ಟಿಕ್‌ ವ್ಯವಸ್ಥೆ ಇದ್ದು, ಸುಲಲಿತ ವ್ಯವಹಾರಕ್ಕೆ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ' ಎಂದು ಹೇಳಿದರು.

"ನಿರ್ದಿಷ್ಟ ಏರೋಸ್ಪೇಸ್ ನೀತಿಯನ್ನು ರೂಪಿಸಿದ ದೇಶದ ಮೊದಲ ರಾಜ್ಯ ನಮ್ಮದು. ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಏರೋಸ್ಪೇಸ್‌ಗೆ ಸಂಬಂಧಿಸಿದ ದೇಶದ ಒಟ್ಟು ರಫ್ತಿನಲ್ಲಿ ನಮ್ಮ ಪಾಲು ಶೇ. 65 ರಷ್ಟು. ಏರ್‌ಕ್ರಾಫ್ಟ್‌, ಬಾಹ್ಯಾಕೇಶಕ್ಕೆ ಸಂಬಂಧಿಸಿದ ಶೇ.25ರಷ್ಟು ಉದ್ಯಮಗಳು ನಮ್ಮಲ್ಲಿವೆ. ರಕ್ಷಣಾ ಸೇವೆಗೆ ಬಳಕೆಯಾಗುವ ಶೇ.67ರಷ್ಟು ಏರ್‌ಕ್ರಾಫ್ಟ್‌ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತದೆ.ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪೂರಕ ಪರಿಸರ ವ್ಯವಸ್ಥೆ ನಮ್ಮಲ್ಲಿದ್ದು, ಈ ನೂತನ ಒಪ್ಪಂದಗಳ ಮುಂದಿನ ಗುರಿ ಸಾಧನೆಗೆ ನೆರವಾಗಲಿವೆ" ಎಂದು ಜಗದೀಶ್‌ ಶೆಟ್ಟರ್ ತಿಳಿಸಿದರು.

ಪ್ರಮುಖ ಒಪ್ಪಂದಗಳು


ಅಭ್ಯುದಯ ಭಾರತ್ ಮೆಗಾ ಡಿಫೆನ್ಸ್‌ ಕ್ಲಸ್ಟರ್‌ 1000 ಕೋಟಿ ರೂ . ಹೂಡಿಕೆ ಒಪ್ಪಂದಕ್ಕೆ ಸಹಿಹಾಕಿದ್ದು, ಗೋಪಾಲನ್‌ ಏರೋಸ್ಪೇಸ್‌ ಇಂಡಿಯಾ ಪ್ರೈ ಲಿ. 438, ಆಲ್ಫಾ ಡಿಸೈನ್‌ ಟೆಕ್ನಾಲಜಿಸ್‌ ಹಾಗೂ ಟೆಸ್‌ಬೆಲ್‌ ತಲಾ 250 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ರಕ್ಷಣಾ ಉದ್ಯಮದ ನೆಲೆ

ಏರೋಸ್ಪೇಸ್‌ಮತ್ತು ಡಿಫೆನ್ಸ್‌ ಕ್ಷೇತ್ರದ ಸಾರ್ವಜನಿಕ ಉದ್ದಿಮೆಗಳಾದ ಎಚ್‌ಎಎಲ್‌, ಬಿಎಚ್‌ಇಎಲ್‌, ಭಾರತ್‌ಎಲೆಕ್ಟ್ರಾನಿಕ್ಸ್‌ ನಮ್ಮ ಹೆಮ್ಮೆಯಾಗಿದೆ.
ಇದರ ಜತೆಗೆ ದೇಶದ ಉನ್ನತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಡಿಆರ್‌ಡಿಒ, ಇಸ್ರೋ ಇತ್ಯಾದಿಗಳನ್ನು ಹೊಂದಿರುವ ಏಕೈಕ ರಾಜ್ಯ ಕರ್ನಾಟಕ. ದೇಶದ ಏರೋಸ್ಪೇಸ್‌ಮತ್ತು ರಕ್ಷಣಾ ಉದ್ಯಮದ ಶೇ.70ರಷ್ಟು ಪೂರೈಕೆದಾರರಿಗೆ ಕರ್ನಾಟಕ ನೆಲೆಯಾಗಿದೆ.

ನೀತಿ ಆಯೋಗ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕರ್ನಾಟಕ, 2020ರ ಪಟ್ಟಿಯಲ್ಲೂ ಅಗ್ರ ಸ್ಥಾನ ಉಳಿಸಿಕೊಂಡಿದೆ.

ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ.

ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಪಾಲ್ಗೊಂಡಿದ್ದರು.

memorandum, aero india, MOU, Jagadish Shettar, ಏರೋ ಇಂಡಿಯಾ, ಒಪ್ಪಂದ, ಏರೋ ಸ್ಪೇಸ್‌, ಜಗದೀಶ್‌ ಶೆಟ್ಟರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ