Please enable javascript.ಬೆಂಗಳೂರು ಕಾಂಗ್ರೆಸ್‌ಗೆ ‘ನಲಪಾಡ್‌’ ಇಮೇಜ್‌: ಸಚಿವ ಮಹದೇವಪ್ಪ 'ಯೂಟರ್ನ್‌' - Nalpad effect to mahadevappa - Vijay Karnataka

ಬೆಂಗಳೂರು ಕಾಂಗ್ರೆಸ್‌ಗೆ ‘ನಲಪಾಡ್‌’ ಇಮೇಜ್‌: ಸಚಿವ ಮಹದೇವಪ್ಪ 'ಯೂಟರ್ನ್‌'

Vijaya Karnataka 26 Feb 2018, 5:00 am
Subscribe

ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮ್ಮದ್‌ ನಲಪಾಡ್‌ ಪುಂಡಾಟಿಕೆ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ ಎಬ್ಬಿಸುತ್ತಿದ್ದು, ಸಿ.ವಿ.ರಾಮನ್‌ ನಗರದಿಂದ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನೂ ಕಂಗೆಡಿಸಿದೆ. ಅವರೀಗ ನಂಜನಗೂಡು ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

nalpad effect to mahadevappa
ಬೆಂಗಳೂರು ಕಾಂಗ್ರೆಸ್‌ಗೆ ‘ನಲಪಾಡ್‌’ ಇಮೇಜ್‌: ಸಚಿವ ಮಹದೇವಪ್ಪ 'ಯೂಟರ್ನ್‌'

ಬೆಂಗಳೂರು: ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮ್ಮದ್‌ ನಲಪಾಡ್‌ ಪುಂಡಾಟಿಕೆ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ ಎಬ್ಬಿಸುತ್ತಿದ್ದು, ಸಿ.ವಿ.ರಾಮನ್‌ ನಗರದಿಂದ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರನ್ನೂ ಕಂಗೆಡಿಸಿದೆ. ಅವರೀಗ ನಂಜನಗೂಡು ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ನಲಪಾಡ್‌ ಪ್ರಕರಣ ಶಾಸಕ ಹ್ಯಾರಿಸ್‌ ಅವರನ್ನು ಮಾತ್ರವಲ್ಲ ಇಡೀ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಇಮೇಜ್‌ ಕೆಡಿಸಿದೆ. ಶಾಂತಿನಗರ ಹಾಗೂ ಅದರ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಇದರ ಬಿಸಿ ಅನುಭವವಾಗುತ್ತಿದೆ. ಇದು ಕಾಂಗ್ರೆಸ್‌ ಶಾಸಕರನ್ನು ಕಂಗೆಡಿಸಿರುವುದರ ಜತೆಗೆ ಬೆಂಗಳೂರಿಗೆ ವಲಸೆ ಬಂದು ರಾಜಕೀಯ ಭವಿಷ್ಯ ಅರಸಲು ಮುಂದಾಗಿದ್ದ ಮಹದೇವಪ್ಪ 'ಯೂಟರ್ನ್‌' ತೆಗೆದುಕೊಳ್ಳುವಂತ ಸನ್ನಿವೇಶ ಸೃಷ್ಟಿಸಿದೆ.

ಹೀಗಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ. ಮಾಜಿ ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ರಾಜೀನಾಮೆ ಬಳಿಕ ನಡೆದ ಉಪಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದ ಮಹದೇವಪ್ಪ ಅವರಿಗೆ ಈ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತವಿರುವುದರಿಂದ ಸಿ.ವಿ.ರಾಮನ್‌ ನಗರದ ಉಸಾಬರಿಗೆ ಹೋಗದೇ ಇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಜತೆಯೂ ಅವರೂ ಮಾತುಕತೆ ನಡೆಸಿದ್ದು, ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪುತ್ರನಿಗೆ ತಿ.ನರಸೀಪುರ

ತಾವು ಈಗ ಪ್ರತಿನಿಧಿಸುತ್ತಿರುವ ತಿ. ನರಸೀಪುರ ಕ್ಷೇತ್ರದ ಮೂಲಕ ಪುತ್ರ ಸುನೀಲ್‌ ಬೋಸ್‌ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸುವಲ್ಲಿ ಮಹದೇವಪ್ಪ ಮುಂದಾಗಿದ್ದು, ಹೈಕಮಾಂಡ್‌ ಹೆಚ್ಚು ಕಡಿಮೆ ಒಪ್ಪಿಗೆ ನೀಡಿದೆ ಎಂದು ಕಾಂಗ್ರೆಸ್‌ ಮೂಲಗಳು ಖಚಿತ ಪಡಿಸಿವೆ. ಅಕ್ಕಪಕ್ಕದ ಕ್ಷೇತ್ರದಲ್ಲಿ ಅಪ್ಪ-ಮಕ್ಕಳು ಹಿಡಿತ ಸಾಧಿಸಲು ಪ್ರಯತ್ನ ಆರಂಭಿಸಿದ್ದಾರೆ.

ಈ ಹಿಂದೆ ಮಹದೇವಪ್ಪ ಅವರು ಸಿ.ವಿ.ರಾಮನ್‌ ನಗರದಿಂದ ಸ್ಪರ್ಧಿಸಲು ನಿರ್ಧರಿಸಿದಾಗ ಕಾಂಗ್ರೆಸ್‌ನ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಪ್ರಭಾವಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ರೋಷನ್‌ ಬೇಗ್‌ ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಪಸ್ವರ ಎತ್ತಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವುದರ ಜತೆಗೆ ಪರಿಶಿಷ್ಟ ಜಾತಿಗೆ ಸೇರಿದ ಮಹದೇವಪ್ಪ ಬೆಂಗಳೂರಿನಲ್ಲಿ ಗೆಲುವು ಸಾಧಿಸಿದರೆ ಎಲ್ಲ ದೃಷ್ಟಿಯಿಂದಲೂ ಅವರಿಗೆ ಹೆಚ್ಚಿನ ಮಣೆ ಹಾಕಬೇಕಾಗುತ್ತದೆ. ಇದರಿಂದ ತಮ್ಮ ರಾಜಕೀಯ ಭವಿಷ್ಯ ಮಸುಕಾಗಬಹುದೆಂಬ ಆತಂಕ ಬೆಂಗಳೂರಿನ ಕಾಂಗ್ರೆಸ್‌ ಮುಖಂಡರನ್ನು ಕಾಡಿತ್ತು.

ಈ ಮಧ್ಯೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪಿ.ರಮೇಶ್‌ ಕೂಡಾ ಮಹದೇವಪ್ಪ ಸಿ.ವಿ.ರಾಮನ್‌ ನಗರದಿಂದ ಸ್ಪರ್ಧಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಇದು ಬೇರೆ ಬೇರೆ ಚರ್ಚೆಗೂ ಕಾರಣವಾಗಿದ್ದು, ಇದೀಗ ಹ್ಯಾರಿಸ್‌ ಪುತ್ರನ ಪುಂಡಾಟಿಕೆ ಪ್ರಕರಣ ಎಲ್ಲರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಬಾದಾಮಿಯಿಂದ ಸಿಎಂ ಸ್ಪರ್ಧೆ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂಬ ಹಿತೈಷಿಗಳ ಸಲಹೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆಯೇ ?

ಇಂಥದೊಂದು ಸುದ್ದಿ ಈಗ ಕಾಂಗ್ರೆಸ್‌ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕುರುಬ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗೆಲುವಿಗೆ ಕಷ್ಟಪಡಬೇಕಾದ ಅಗತ್ಯವಿಲ್ಲ ಎಂಬ ಸಲಹೆ ಹಿಂದೊಮ್ಮೆ ಬಂದಿತ್ತು. ಆದರೆ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ತಿರುಗಿ ಬಿದ್ದಿದ್ದರಿಂದ ಪ್ರಸ್ತಾಪ ಕೈ ಬಿಡಲಾಗಿತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕಾಗಿರುವುದರಿಂದ ಬಾದಾಮಿಯಿಂದ ಅದೃಷ್ಟ ಪರೀಕ್ಷೆ ನಡೆಸುವುದಕ್ಕೆ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸ್ಪರ್ಧೆ ಖಚಿತವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ನೀಡಲಿದೆ ? ಎಂಬ ಕುತೂಹಲ ಸೃಷ್ಟಿಯಾಗಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ