ಆ್ಯಪ್ನಗರ

ಜಾಮೀನಿಗಾಗಿ ಸುಪ್ರೀಂ ಮೆಟ್ಟಿಲೇರದ ನಲಪಾಡ್‌ ಕುಟುಂಬ

ಉದ್ಯಮಿ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಶಾಸಕ ಎನ್‌ಎ...

Vijaya Karnataka 5 Apr 2018, 5:00 am
ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು
Vijaya Karnataka Web NALAPAD


ಉದ್ಯಮಿ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿ ಬಹುತೇಕ ಇಪ್ಪತ್ತು ದಿನಗಳಾಗುತ್ತಾ ಬಂದರೂ ಸುಪ್ರೀಂಕೋರ್ಟ್‌ನಲ್ಲಿ ಆ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಅವರ ಕುಟುಂಬ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಆರೋಪಿಗಳು ಜಾಮೀನು ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರುವಂತಿದ್ದರೆ ಇಷ್ಟು ಹೊತ್ತಿಗೆ ಅರ್ಜಿ ಸಲ್ಲಿಸಬೇಕಿತ್ತು.ಆದರೆ ಈವರೆಗೆ ಆ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ ಎನ್ನಲಾಗಿದೆ. ಚುನಾವಣೆ ಸಮಯವಾಗಿರುವುದರಿಂದ ಈ ಸಮಯದಲ್ಲಿ 'ರಿಸ್ಕ್‌' ತೆಗೆದುಕೊಳ್ಳುವುದು ಬೇಡ ಎಂದು ಹ್ಯಾರಿಸ್‌ ಕುಟುಂಬ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಘಟನೆಯಿಂದಾಗಿ ಈಗಾಗಲೇ ವೈಯಕ್ತಿಕವಾಗಿ ವರ್ಚಸ್ಸು ಕುಂದಿದೆ. ಮತ್ತೆ ಸುಪ್ರೀಂಕೋರ್ಟ್‌ ಕೂಡ ಜಾಮೀನು ಅರ್ಜಿ ವಜಾ ಮಾಡಿದರೆ ಚುನಾವಣೆ ವೇಳೆಯಲ್ಲಿ ಅನಗತ್ಯವಾಗಿ ಮತ್ತಷ್ಟು ಮುಜುಗರಕ್ಕೆ ಒಳಗಾಗುವುದು ಬೇಡ ಎನ್ನುವ ಕಾರಣಕ್ಕೆ ನಲಪಾಡ್‌ ಕುಟುಂಬ ಈ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆಧಾರವಿಲ್ಲ:

ಮಾ.15ರಂದು ಹೈಕೋರ್ಟ್‌ ನಲಪಾಡ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲಿಂದೀಚೆಗೆ ಪ್ರಕರಣದ ಕುರಿತು ಯಾವುದೇ ಮಹತ್ವದ ಬದಲಾವಣೆಗಳಾಗಿಲ್ಲ ಹಾಗಾಗಿ ಸುಪ್ರೀಂಕೋರ್ಟ್‌ಗೆ ಹೋಗಿ ಜಾಮೀನು ನೀಡಿ ಎಂದು ಹಕ್ಕೊತ್ತಾಯ ಮಂಡಿಸಲಾಗದು. ಕಾರಣ, ಅದಕ್ಕೆ ಯಾವುದೇ ಆಧಾರವಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಅಲ್ಲದೆ, ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ತಮ್ಮ ಆದೇಶದಲ್ಲಿ ''ಈಗಾಗಲೇ ಅರ್ಜಿದಾರರು ತಮ್ಮ ಪ್ರಭಾವ ಬಳಿಸಿ,ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯಗಳನ್ನು ತಿರುಚುವ ಮತ್ತು ತಿದ್ದುವ ಕೆಲಸ ಮಾಡಿದ್ದಾರೆ. ಸಿಸಿಟಿಟಿ ದೃಶ್ಯಾವಳಿಗಳನ್ನು ನೋಡಿದರೆ ಘಟನೆ ನಡೆದಾಗ ಎಂತಹ ಭಯಾನಕ ವಾತಾವರಣ ಸೃಷ್ಟಿಯಾಗಿತ್ತೆಂಬುದು ತಿಳಿಯುತ್ತದೆ. ಆರೋಪಿ ಜೈಲಿನಿಂದ ಹೊರಗೆ ಬಂದರೆ ಆತ ಸಾಕ್ಷ್ಯಗಳನ್ನು ನಾಶಪಡಿಸಲು ಮತ್ತು ತಿರುಚದೆ ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಹಾಗಾಗಿ ಜಾಮೀನು ಅರ್ಜಿಯನ್ನು ವಜಾಗೊಳಿಸುವುದೇ ಸರಿ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ''ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ನ್ಯಾಯಪೀಠ ಹೈಕೋರ್ಟ್‌ ಆದೇಶವನ್ನು ಗಮನಿಸಿದರೆ ಸಾಕು, ಜಾಮೀನು ಅರ್ಜಿಯನ್ನು ತಳ್ಳಿಹಾಕುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತಾರೆ ವಕೀಲರು.

90 ದಿನ ಕಾಲಾವಕಾಶ:
ಅಲ್ಲದೆ, ನಿಯಮದ ಪ್ರಕಾರ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು 90 ದಿನ ಕಾಲಾವಕಾಶ (ಮೇ 17ರವರೆಗೆ ) ಇದೆ. ಆರೋಪಿಗಳ ಪರ ವಕೀಲರು, ಪೊಲೀಸರು ಆದಷ್ಟು ಬೇಗ ಆರೋಪಪಟ್ಟಿ ಸಲ್ಲಿಸಲಿ. ಆನಂತರ ಸುಪ್ರೀಂಕೋರ್ಟ್‌ ಮೊರೆ ಹೋಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ಆದರೆ ಪೊಲೀಸರು ಬೇಗ ಚಾರ್ಜ್‌ಶೀಟ್‌ ಸಲ್ಲಿಸಿದರೂ ಇಲ್ಲದ ಟೀಕೆ ಕೇಳಿಬರುವ ಸಾಧ್ಯತೆ ಇದೆ. ಜೊತೆಗೆ ಹೈಕೋರ್ಟ್‌ನಲ್ಲಿ ನಡೆದ ಬೆಳವಣಿಗೆಗಳು ತನಿಖಾಧಿಕಾರಿಗಳಿಗೆ ಪೂರಕವಾಗಿಲ್ಲ. ಹಾಗಾಗಿ ಆರೋಪಪಟ್ಟಿ ಸಲ್ಲಿಕೆ ವಿಳಂಬವಾಗಲಿದೆ. ಜೊತೆಗೆ ಚುನಾವಣಾ ಸಮಯದ ಕಾರ್ಯಒತ್ತಡವೂ ಪೊಲೀಸರಿಗೆ ಈ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಕೇವಿಯಟ್‌ ಸಲ್ಲಿಕೆ

ಈ ಮಧ್ಯೆ, ಮೊಹಮ್ಮದ್‌ ನಲಪಾಡ್‌ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ನ್ಯಾಯಾಲಯ ಏಕಪಕ್ಷೀಯ ಆದೇಶ ನೀಡಬಾರದು ಎಂದು ವಿದ್ವತ್‌ ಪರ ವಕೀಲರು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದ್ದಾರೆ. ಎಸ್‌ಪಿಪಿ ಶ್ಯಾಮ್‌ ಸುಂದರ್‌ ತಮ್ಮ ವಾದವನ್ನು ಆಲಿಸದೆ ಅರ್ಜಿಯ ವಿಚಾರಣೆ ನಡೆಸಬಾರದು ಎಂದು ಕೋರಿದ್ದಾರೆ.

''ಸದ್ಯಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸ್ವಲ್ಪ ದಿನ ಕಾದು ನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳುವ ಆಲೋಚನೆ ಇದೆ''

ಉಸ್ಮಾನ್‌, ಮೊಹಮ್ಮದ್‌ ನಲಪಾಡ್‌ ಪರ ವಕೀಲರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ