ಆ್ಯಪ್ನಗರ

ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರೂ ಘೋಷಣೆ ಕೂಗಿಲ್ಲ, ಅದು ತಿರುಚಿದ ವಿಡಿಯೋ: ನಾಸೀರ್ ಹುಸೇನ್

ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆ ಬಳಿಕ ಪಾಕಿಸ್ತಾನ್ ಜಿಂದಾಬಾಂದ್ ಎಂದು ಯಾರೂ ಘೋಷಣೆ ಕೂಗಿಲ್ಲ, ತನ್ನ ತೇಜೋವಧೆ ಮಾಡುವ ಸಲುವಾಗಿಯೇ ಎದುರಾಳಿಗಳು ತಿರುಚಿದ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಇದನ್ನು ಆಡಿಟೋರಿ ಇಲ್ಯೂಷನ್ ಎಂಬ ಸಾಫ್ಟ್ ವೇರ್ ಬಳಸಿ ತಿರುಚಲಾಗಿದೆ. ಇದನ್ನು ನಾನು ತಂತ್ರಜ್ಞರಿಗೆ ಕಳಿಸಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲಾಗದ್ದಕ್ಕೆ, ಅಡ್ಡಮತದಾನದ ಮುಜುಗರ ತಪ್ಪಿಸಲು ನಡೆಸಿರುವ ಪಿತೂರಿಯಿದು. ಜೊತೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಚೇತಕನಾಗಿ ಹೆಚ್ಚು ಕ್ರಿಯಾಶೀಲನಾಗಿರುವುದೂ ಕಾರಣ ಎಂದಿದ್ದಾರೆ. ವಿಕ ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು.

Edited byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka 1 Mar 2024, 9:42 am
  • ಕೆಂಚೇಗೌಡ ಬೆಂಗಳೂರು
''ಪಾಕಿಸ್ತಾನ್‌ ಜಿಂದಾಬಾದ್‌... ಘೋಷಣೆ 'ಆಡಿಟೊರಿ ಇಲ್ಯೂಷನ್‌' ಎಂಬ ಸಾಫ್ಟ್‌ವೇರ್‌ ಬಳಸಿ ತಿರುಚಿದ ವಿಡಿಯೋ ಅಷ್ಟೇ. ವಿಧಾನಸಭೆ ಚುನಾವಣೆ ಸೋಲು, ವಿಧಾನ ಪರಿಷತ್‌ ಉಪಚುನಾವಣೆ ಫಲಿತಾಂಶದಲ್ಲೂ ನಿರಾಶೆ, ರಾಜ್ಯಸಭೆ ಚುನಾವಣೆಯಲ್ಲಿ 5ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಾಗದ ಹತಾಶೆಯಿಂದ ಅಡ್ಡಮತದಾನದ ಮುಜುಗರ ತಪ್ಪಿಸಿಕೊಳ್ಳಲು ರಾಜಕೀಯ ವಿರೋಧಿಗಳು ನಡೆಸಿರುವ ಪಿತೂರಿ ಇದು. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಿವಾದ ಸೃಷ್ಟಿಸಿ, ಜನರಿಗೆ ತಪ್ಪು ಸಂದೇಶ ನೀಡಲು ನನ್ನ ಹೆಸರಿಗೆ ಹೊಂದುವ ಶತ್ರುರಾಷ್ಟ್ರದ ವಿಷಯವನ್ನು ಹೊಂದಿಸುವ ಷಡ್ಯಂತ್ರ ಮಾಡಿದ್ದಾರೆ. ಬಳ್ಳಾರಿಯಲ್ಲಿ ಹುಟ್ಟಿ, ಮೈಸೂರಿನಲ್ಲಿ ಓದಿ ಈ ನೆಲದ ಅನ್ನ ತಿಂದಿರುವ ನನಗೂ ಪಾಕಿಸ್ತಾನಕ್ಕೂ ಯಾವ ಸಂಬಂಧ? ಮುಸ್ಲಿಂ ಎಂಬುದನ್ನು ಬಳಸಿಕೊಂಡು ಪಾಕಿಸ್ತಾನದೊಂದಿಗೆ ತಳಕು ಹಾಕಿ ದೇಶಪ್ರೇಮಿ ಕುಟುಂಬದ ಹಿನ್ನೆಲೆಯ ನನ್ನ ತೇಜೋವಧೆ ಮಾಡಲಾಗಿದೆ.''
Vijaya Karnataka Web Syed Naseer Hussain1
ನಾಸೀರ್ ಹುಸೇನ್(ಸಂಗ್ರಹ ಚಿತ್ರ)


ಇದು ವಿಧಾನಸೌಧದಲ್ಲಿ ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಸಂಭ್ರಮಾಚರಣೆ ವೇಳೆ ತಮ್ಮ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ರಾಜ್ಯಸಭಾ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌ ಸಮರ್ಥನೆ. ಪ್ರಕರಣದ ಕುರಿತಂತೆ ಗುರುವಾರ 'ವಿಕ' ಜತೆ ಮಾತನಾಡಿದ ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.

ಪಾಕಿಸ್ತಾನ್‌ ಜಿಂದಾಬಾದ್‌... ಘೋಷಣೆ ಮಾಧ್ಯಮಗಳ ವಿಡಿಯೋದಲ್ಲಿ ದಾಖಲಾಗಿದೆಯಲ್ಲಾ?
ಸಂಭ್ರಮಾಚರಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡುವಾಗ ಈ ಘಟನೆ ನಡೆದಿದೆ. ಅಲ್ಲಿ 50 ರಿಂದ 60 ಮಾಧ್ಯಮಗಳ ಕ್ಯಾಮೆರಾಗಳಿದ್ದವು. ಬೇರೆ ಪಕ್ಷಗಳ ಬೆಂಬಲಿಗರೂ ಸೇರಿ ನೂರಾರು ಮಂದಿ ಇದ್ದರು. ದೊಡ್ಡ ಸಂಖ್ಯೆಯಲ್ಲಿ ಪೊಲೀಸರೂ ಇದ್ದರು. ಯಾರೊಬ್ಬರಿಗೂ ಕೇಳಿಸದ ಈ ಘೋಷಣೆ 2 ಕ್ಯಾಮೆರಾಗಳಲ್ಲಿ ದಾಖಲಾಗಿದ್ದು ಹೇಗೆ? ಒಂದು ವೇಳೆ ಯಾರಾದರೂ ಈ ಘೋಷಣೆ ಕೂಗಿದ್ದರೆ ಅಲ್ಲಿದ್ದವರು ಸುಮ್ಮನಿರುತ್ತಿದ್ದರೇ? ಪೊಲೀಸರು ಕೈಕಟ್ಟಿ ನಿಲ್ಲುತ್ತಿದ್ದರೇ? ಸಂಭ್ರಮದಲ್ಲಿದ್ದ ನನಗೆ ಕೇಳಿಸದಿರಬಹುದು. ಬೇರೆಯವರಿಗೆ ಕೇಳಿಸಿಲ್ಲ ಯಾಕೆ?

ಆಡಿಯೊ ತಿರುಚಲಾಗಿದೆ ಅಂಥ ಹೇಗೆ ಹೇಳುತ್ತೀರಿ?
ತಂತ್ರಜ್ಞರಿಗೆ ವಿಡಿಯೋ ಕಳಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ನಾಸಿರ್‌ ಹುಸೇನ್‌ ಸಾಬ್‌ ಜಿಂದಾಬಾದ್‌, ಎಂಬ ಘೋಷಣೆಯನ್ನು ತಂತ್ರಜ್ಞಾನ ಬಳಸಿ 'ನಾಸಿರ್‌ ಸಾಬ್‌' ಜಾಗದಲ್ಲಿ ಪಾಕಿಸ್ತಾನ್‌ ಎಂದು ಸೇರಿಸಿ ವಿಡಿಯೋ ತಿರುಚಲಾಗಿದೆ. ಮುಖ್ಯವಾಗಿ, ವಿಧಾನಸೌಧ ಪ್ರವೇಶಿಸಲು ನಾನು ಖುದ್ದು ಪಾಸ್‌ ಕೊಡಿಸಿದ್ದ 25 ಬೆಂಬಲಿಗರನ್ನೂ ವಿಚಾರಿಸಿದ್ದೇನೆ. ಯಾರೊಬ್ಬರೂ ಅಂತಹ ಘೋಷಣೆ ಕೂಗಿಲ್ಲ. ಅಂತಹ ದೇಶದ್ರೋಹಿಗಳನ್ನು ನಾನು ಬೆಂಬಲಿಗರಾಗಿ ಇಟ್ಟುಕೊಳ್ಳುತ್ತೇನೆಯೇ? ಮೇಲಾಗಿ, ವಿಧಾನಸೌಧದಲ್ಲಿ ನಡೆದ ಚುನಾವಣೆಗೂ ಪಾಕಿಸ್ತಾನಕ್ಕೂ ಎಲ್ಲಿಯ ಸಂಬಂಧ? ನನಗಾಗಲೀ, ನನ್ನ ಬೆಂಬಲಿಗರಿಗಾಗಲೀ ಶತ್ರುರಾಷ್ಟ್ರದ ಮೇಲೆ ಪ್ರೀತಿ ಬರಲು ಹೇಗೆ ಸಾಧ್ಯ?

ಬಿಜೆಪಿ ಬಗ್ಗೆ ಆರೋಪ ಮಾಡಲು ಹೇಗೆ ಸಾಧ್ಯ?
ಸಿಂಧಗಿ, ಬೆಳಗಾವಿ ಸೇರಿ ರಾಜ್ಯದ ನಾನಾ ಕಡೆಗಳಲ್ಲಿ ಹಾಗೂ ದೇಶದ ಒಟ್ಟು 27 ಕಡೆಗಳಲ್ಲಿ ಬಿಜೆಪಿ ಪ್ರಾಯೋಜಿತ ಇಂತಹ ತಿರುಚಿದ ಪ್ರಸಂಗಗಳು ಬಯಲಾಗಿವೆ. ವಿಶೇಷವಾಗಿ, ರಾಜ್ಯದಲ್ಲಿ ಬಿಜೆಪಿಗೆ ಯಾವ ಚುನಾವಣಾ ವಿಷಯಗಳೂ ಇಲ್ಲ. ಅಭಿವೃದ್ಧಿ ವಿಚಾರ ಪ್ರಸ್ತಾಪಿಸುವ ನೈತಿಕತೆ ಕಳೆದುಕೊಂಡಿದೆ. ಹಾಗಾಗಿ, ಜನರ ಭಾವನೆ ಕೆರಳಿಸುವ ವಸ್ತುವಿಷಯಗಳಿಗಾಗಿ ಹುಡುಕಾಟ ನಡೆಸುತ್ತಿದ್ದವರು ಈ ಕಪೋಲಕಲ್ಪಿತ ವಿಷಯ ಹೆಣೆದಿದ್ದಾರೆ.

ನಿಮ್ಮನ್ನೇ ಏಕೆ ಟಾರ್ಗೆಟ್‌ ಮಾಡಿದರು?
ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಮುಖ್ಯ ಸಚೇತಕನಾಗಿ ಹೆಚ್ಚು ಕ್ರಿಯಾಶೀಲನಾಗಿದ್ದೆ. ರಾಜ್ಯ, ದೇಶದ ಹಲವು ಜ್ವಲಂತ ವಿಚಾರಗಳನ್ನು ಪ್ರಸ್ತಾಪಿಸಿದ್ದೆ. ರೈತ, ಕಾರ್ಮಿಕ ವಿರೋಧಿ ಕಾನೂನುಗಳು, ಮಣಿಪುರ ಪ್ರಕರಣಗಳಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟದ ನೇತೃತ್ವ ವಹಿಸಿದ್ದೆ. ಅದಕ್ಕಾಗಿ 2 ಬಾರಿ ಸದನದಿಂದ ಅಮಾನತುಗೊಂಡಿದ್ದೆ. ಎಐಸಿಸಿ ವಕ್ತಾರನಾಗಿ ಅಧ್ಯಕ್ಷರಿಗೆ ಸಮೀಪವರ್ತಿಯಾಗಿದ್ದೆ. ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವುದನ್ನು ಬಿಜೆಪಿ ಬಯಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಅಡ್ಡಮತದಾನದಿಂದ ಆದ ಅಪಮಾನವನ್ನು ಮರೆಮಾಚಬೇಕಿತ್ತು.
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ