ಆ್ಯಪ್ನಗರ

ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ KFC ಸಿಬ್ಬಂದಿಯ ಉದ್ಧಟತನ; ಕನ್ನಡಿಗರ ಆಕ್ರೋಶ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್!

ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂದು ಕೆಎಫ್‌ಸಿ ಸಿಬ್ಬಂದಿ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಕೆಎಫ್​​ಸಿ ಸಿಬ್ಬಂದಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ‘ನಮಗೆ ರಾಷ್ಟ್ರ ಭಾಷೆ ಯಾವುದು ಎಂಬುವುದು ಬೇಕಾಗಿಲ್ಲ. ನಮಗೆ ನಮ್ಮ ಭಾಷೆ ಮುಖ್ಯ. ನಮಗೆ ಕನ್ನಡ ಬರುತ್ತದೆ. ಕನ್ನಡ ಹಾಡು ಹಾಕಿ. ಕನ್ನಡ ಭಾಷೆಯನ್ನು ಉಳಿಸಿ’ ಎಂದು ಹೇಳಿದಾಗ ‘ಒಬ್ಬೊಬ್ಬರು ಒಂದೊಂದು ಬಾಷೆಯ ಹಾಡು ಕೇಳಿದರೆ ನಾವು ಯಾವುದು ಹಾಕುವುದು’ ಎಂದು ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

Vijaya Karnataka Web 25 Oct 2021, 3:34 pm
ಬೆಂಗಳೂರು: ಕನ್ನಡ ಹಾಡು ಬಳಸುವಂತೆ ಕೇಳಿಕೊಂಡ ಮಹಿಳೆಯ ಜೊತೆ ಉದ್ಧಟತನ ಮೆರೆದ ಕೆಎಫ್ಸಿ ಸಿಬ್ಬಂದಿಗೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.
Vijaya Karnataka Web kfc1


ಕರ್ನಾಟಕ ಅಂದ್ಮೇಲೆ ಕನ್ನಡಕ್ಕೆ ಪ್ರಥಮ ಆದ್ಯತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಕನ್ನಡದ ನೆಲದಲ್ಲೇ ಇಲ್ಲಿನ ಭಾಷೆಯನ್ನು ಕಡೆಗಣನೆ ಮಾಡುವವರ ವಿರುದ್ಧ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಹಿಳೆಯೊಬ್ಬರು ಪ್ರಸಿದ್ಧ ಫಾಸ್ಟ್ಫುಡ್ ರೆಸ್ಟೋರೆಂಟ್ ಕೆಎಫ್ಸಿಗೆ ಹೋಗಿದ್ದರು. ಅಲ್ಲಿ ಜನರನ್ನು ಮನರಂಜಿಸಲು ಬೇರೆ ಬೇರೆ ಭಾಷೆಯ ಹಾಡುಗಳನ್ನು ಹಾಕಿದ್ದರು. ಅರ್ಧಗಂಟೆ ಕಳೆದರೂ ಕೂಡ ಕನ್ನಡ ಹಾಡನ್ನು ಹಾಕದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ ಕೆಎಫ್ಸಿ ಸಿಬ್ಬಂದಿಯಲ್ಲಿ ಕನ್ನಡ ಹಾಡು ಹಾಕುವಂತೆ ವಿನಂತಿ ಮಾಡಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಮಹಿಳೆಯ ಜೊತೆ ಉದ್ಧಟತನದಿಂದ ವರ್ತಿಸಿರೋದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಹಾಡು ಹಾಕುವಂತೆ ಕೇಳಿಕೊಂಡ ಮಹಿಳೆಯ ಜೊತೆ ವಾಗ್ವಾದಕ್ಕಿಳಿದ ಕೆಎಫ್ಸಿ ಸಿಬ್ಬಂದಿ, ‘ನಾವಿರೋದು ಭಾರತದಲ್ಲಿ. ಎಲ್ಲಿ ಬೇಕಾದರೂ ನಾವು ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ? ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂದು ಕೆಎಫ್‌ಸಿ ಸಿಬ್ಬಂದಿ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಕೆಎಫ್ಸಿ ಸಿಬ್ಬಂದಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ‘ನಮಗೆ ರಾಷ್ಟ್ರ ಭಾಷೆ ಯಾವುದು ಎಂಬುವುದು ಬೇಕಾಗಿಲ್ಲ. ನಮಗೆ ನಮ್ಮ ಭಾಷೆ ಮುಖ್ಯ. ನಮಗೆ ಕನ್ನಡ ಬರುತ್ತದೆ. ಕನ್ನಡ ಹಾಡು ಹಾಕಿ. ಕನ್ನಡ ಭಾಷೆಯನ್ನು ಉಳಿಸಿ’ ಎಂದು ಹೇಳಿದಾಗ ‘ಒಬ್ಬೊಬ್ಬರು ಒಂದೊಂದು ಬಾಷೆಯ ಹಾಡು ಕೇಳಿದರೆ ನಾವು ಯಾವುದು ಹಾಕುವುದು’ ಎಂದು ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಾವು ಈಗ ಹಾಡನ್ನೇ ಆಫ್‌ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಕೆಎಫ್ಸಿ ಸಿಬ್ಬಂದಿ ಮತ್ತು ಮಹಿಳೆ ಮಧ್ಯೆ ನಡೆದ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಹಾಡು ಹಾಕದ ಕೆಎಫ್ಸಿ ವಿರುದ್ಧ ಕನ್ನಡ ಪರ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಕ್ಯಾಂಪೇನ್ ನಡೆಸಿ ‘ರಿಜೆಕ್ಟ್ ಕೆಎಫ್ಸಿ’ ಎಂದು ಟ್ರೆಂಡ್ ಮಾಡಿದ್ದಾರೆ. ಕೆಎಫ್ಸಿ ನಡೆ ವಿರೋಧಿಸಿ ಭಾನುವಾರ ಸಂಜೆ ಕನ್ನಡಿಗರು ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದರು, ನಿರ್ದಿಷ್ವವಾಗಿ ಇಂತಹದ್ದೇ ಸಂಘಟನೆಯ ಹೆಸರಿನಲ್ಲಿ ಈ ಅಭಿಯಾನ ನಡೆಯದೆ ಎಲ್ಲರ ಸಹಕಾರದಿಂದ ಟ್ವೀಟ್ ಕ್ಯಾಂಪೇನ್ ನಡೆದು ಕೇವಲ ಎರಡ ಗಂಟೆಯಲ್ಲಿ ಭಾರತದ ನಂ 3 ನೇ ಟ್ರೆಂಡಿಂಗ್ ಸ್ಥಾನಕ್ಕೆ‌ ಏರಿ ಕೆಎಫ್ಸಿ ಸಿಬ್ಬಂದಿ ಮಾಡಿದ ಅವಾಂತರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಮೂರು ಗಂಟೆಯಲ್ಲಿ 30 ಸಾವಿರಕ್ಕೂ ಮೀರಿ ಟ್ವೀಟ್ಗಳು ದಾಖಲಾಗಿದ್ದವು.

#RejectKFC #kfcಕನ್ನಡಬೇಕು #ಕಾಣಲಿಕನ್ನಡ_ಕೇಳಲಿಕನ್ನಡ ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ ನೆಟ್ಟಿಗರು, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಸಂಸ್ಥೆ, ಅದು ಎಷ್ಟು ದೊಡ್ಡದೇ ಆದರೂ ನಮಗೆ ಬೇಡ. ಹಣ ಮಾಡಲು ಕರ್ನಾಟಕಕ್ಕೆ ಬರುವ ಸಂಸ್ಥೆಗಳು ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು, ಕನ್ನಡಿಗರ ಅಸ್ಮಿತೆಯನ್ನು ಗುರುತಿಸಬೇಕು. ಇತರ ಭಾಷೆಗಳನ್ನು, ಭಾಷಿಕರನ್ನು ಕನ್ನಡಿಗರ ಮೇಲೆ ಹೇರುವ ಹುಚ್ಚಾಟ ಸಹಿಸುವುದಿಲ್ಲ. ಕನ್ನಡ ಬಳಕೆ ಮಾಡದ ಕೆಎಫ್ಸಿ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು. ಕನ್ನಡದಲ್ಲೇ ವ್ಯವಹರಿಸಬೇಕು, ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ