ಆ್ಯಪ್ನಗರ

ಸಂಪುಟ ಪುನಾರಚನೆಯಿಲ್ಲ, ವಿಸ್ತರಣೆಯಷ್ಟೇ: ಸಂಪುಟದ ಸದಸ್ಯರಿಗೆ ಸಿಎಂ ಸಂದೇಶ ರವಾನೆ

ಯಾವುದೇ ರೀತಿಯ ಗೊಂದಲ ಸೃಷ್ಟಿಸುವ ಚಟುವಟಿಕೆ ನಡೆಸಬಾರದು ಎಂಬ ಬಿಜೆಪಿ ವರಿಷ್ಠರ ಸೂಚನೆ ಬಳಿಕವೂ ಸಚಿವ ಸ್ಥಾನಾಕಾಂಕ್ಷಿ ಶಾಸಕರು ಭವನದಲ್ಲಿ ಮಂಗಳವಾರ ಸಭೆ ನಡೆಸಿದರು.

Vijaya Karnataka Web 4 Feb 2020, 10:28 pm
ಬೆಂಗಳೂರು: ಈ ಬಾರಿ ಸಂಪುಟ ಪುನಾರಚನೆಯಿಲ್ಲ. ಸಂಪುಟ ವಿಸ್ತರಣೆಯಷ್ಟೇ ನಡೆಯಲಿದೆ. ಆದರೆ, 6 ತಿಂಗಳ ಬಳಿಕ ಪುನಾರಚನೆಯಾಗಲಿದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಸಂಪುಟದ ಸದಸ್ಯರಿಗೆ ಸಂದೇಶ ರವಾನಿಸಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಮಂಗಳವಾರನಡೆದ ಸಂಪುಟ ಸಭೆಯಲ್ಲಿಈ ವಿಚಾರ ಪ್ರಸ್ತಾಪಿಸಿರುವ ಅವರು, ಹೈಕಮಾಂಡ್‌ ನಿರ್ದೇಶನದಂತೆ ಸಂಪುಟ ವಿಸ್ತರಣೆಯಾಗಲಿದೆ. ಹಾಗಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮಂತ್ರಿಮಂಡಲದ ಸದಸ್ಯರಿಗೆ ಅಭಯ ನೀಡಿದ್ದಾರೆಂದು ಗೊತ್ತಾಗಿದೆ.

6 ತಿಂಗಳ ಗಡುವು

ಈ ಮಧ್ಯೆ 6 ತಿಂಗಳ ಬಳಿಕ ಸಂಪುಟ ಪುನಾರಚನೆಯಾಗಲಿದೆ. ಈ ನಿಟ್ಟಿನಲ್ಲೂ ಹೈಕಮಾಂಡ್‌ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವರು ದಕ್ಷತೆಯ ಆಡಳಿತದ ಮೂಲಕ ಸರಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಆ ಭಾಗದ ಶಾಸಕರು ಒತ್ತಡ ತರುತ್ತಿದ್ದಾರೆ. ಶಾಸಕರಾದ ರಾಜೂಗೌಡ, ದತ್ತಾತ್ರೇಯ ಪಾಟೀಲ್‌, ಬಸವರಾಜ ದಡೆಸುಗೂರ್‌, ಹಾಲಪ್ಪ ಆಚಾರ್‌, ವೆಂಕಟರೆಡ್ಡಿ ಮುದ್ನಾಳ್‌ ಮತ್ತಿತರರಿದ್ದರು. ಸಚಿವ ಸ್ಥಾನಕ್ಕೆ ಒತ್ತಡ ತಂತ್ರ ಮುಂದುವರಿಸುವ ಬಗ್ಗೆ ಚರ್ಚಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಪ್ರತ್ಯೇಕ ಸಭೆ ನಡೆಸುವ ಅಗತ್ಯವಿಲ್ಲ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಅಭಿಪ್ರಾಯ ಹಂಚಿಕೊಳ್ಳಬೇಕು ಎಂಬ ನಿರ್ದೇಶನ ಕೊಟ್ಟಿದ್ದರು ಎನ್ನಲಾಗಿದೆ.

ಮುಂಬಯಿ ಕರ್ನಾಟಕ ಸಭೆ

ಇನ್ನು ಶಾಸಕರಾದ ಉಮೇಶ ಕತ್ತಿ, ಮುರುಗೇಶ ನಿರಾಣಿ, ಪಿ.ರಾಜೀವ್‌ ಪ್ರತ್ಯೇಕ ಸಭೆ ನಡೆಸಿದರು. ಈ ಪೈಕಿ ಕತ್ತಿ ಮತ್ತು ನಿರಾಣಿ ಸಚಿವ ಸ್ಥಾನದ ಆಕಾಂಕ್ಷಿಗಳಾದರೆ ರಾಜೀವ್‌ ತಮಗೆ ಮಂತ್ರಿ ಹುದ್ದೆಯ ಅಪೇಕ್ಷಿಯಲ್ಲ ಎಂದು ಹೇಳಿದ್ದಾರೆ.

ಯೋಗೀಶ್ವರ್‌ ಪರ ಬ್ಯಾಟಿಂಗ್‌

ಸರಕಾರ ರಚನೆಯಲ್ಲಿಯೋಗೀಶ್ವರ್‌ ಪಾತ್ರ ಇರುವುದರಿಂದ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲವೆಂದು ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಗೂಳಿಹಟ್ಟಿ ಶೇಖರ್‌ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುತ್ತಿರುವ ಯೋಗೀಶ್ವರ್‌ 2008ರಲ್ಲೂ ಬಿಜೆಪಿ ಪರ ನಿಂತಿದ್ದರು ಎಂದು ಡಿಸಿಎಂ ತಿಳಿಸಿದ್ದಾರೆ.

''ಇನ್ನು ಹಾಲಿ ಸಚಿವರಲ್ಲಿ ಹೆಚ್ಚಿನವರು ಉತ್ತಮ ಕೆಲಸ ಮಾಡುತ್ತಿಲ್ಲ. ಹಾಗಾಗಿ ಸಿಎಂ ಅವರು ವಿಸ್ತರಣೆ ಬದಲು ಸಂಪುಟ ಪುನಾರಚಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಬೇಕು,'' ಎಂದು ಗೂಳಿಹಟ್ಟಿ ಶೇಖರ್‌ ಒತ್ತಾಯಿಸಿದ್ದಾರೆ.

ತಿರುಪತಿಗೆ ಮೂವರು

ಈ ನಡುವೆ ರಮೇಶ್‌ ಜಾರಕಿಹೊಳಿ, ಸಿ.ಪಿ. ಯೋಗೀಶ್ವರ್‌ ಹಾಗೂ ಮಹೇಶ್‌ ಕುಮಠಳ್ಳಿ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ