ಆ್ಯಪ್ನಗರ

ಅತಂತ್ರ ಫಲಿತಾಂಶ ಬಂದಲ್ಲಿ ಕಾಂಗ್ರೆಸ್ ನಿರ್ಧಾರದ ಮೇಲೆ ನಮ್ಮ ನಿರ್ಧಾರ: ಗೌಡರ ಹೊಸ ದಾಳ

"ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ರಾಮಮಂದಿರ ನಿರ್ಮಿಸುವುದು ಹಿಂದೂ ಸಮುದಾಯದ ಬಹುದಿನಗಳ ಬೇಡಿಕೆ ಮತ್ತು ನಂಬಿಕೆಯಾಗಿತ್ತು," - ಎಚ್‌.ಡಿ. ದೇವೇಗೌಡ.

Vijaya Karnataka Web 9 Nov 2019, 4:54 pm

ಮಂಗಳೂರು: ರಾಜೀನಾಮೆ ನೀಡಿದ 17 ಮಂದಿ ಶಾಸಕರ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆದು ರಾಜ್ಯದಲ್ಲಿ ಮತ್ತೆ ಅತಂತ್ರ ರಾಜಕೀಯ ಪರಿಸ್ಥಿತಿ ಬಂದಲ್ಲಿ, ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರದ ಮೇಲೆ ನಮ್ಮ ನಿರ್ಧಾರ ಇರುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಅವರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.
Vijaya Karnataka Web HD Deve Gowda


ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಜೆಪಿ ಜತೆ ಮೃದು ಧೋರಣೆ ತಾಳಿದ್ದಾರೆ ಎಂಬೆಲ್ಲ ವರದಿಗಳು ಬರುತ್ತಿವೆ. ಆದರೆ ನಾವು ಜಾತ್ಯತೀತ ತತ್ವದ ಮೇಲೆ ರಾಜಕಾರಣ ಮಾಡುವವರು. ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಮೃದು ಧೋರಣೆ ತಾಳುವ, ಅಥವಾ ಅವರ ಜತೆ ಸಖ್ಯ ಬೆಳೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸರಕಾರವನ್ನು ಉಳಿಸಬೇಕು ಎಂಬ ಮನಸ್ಥಿತಿಯಲ್ಲಿ ನಾವಿಲ್ಲ. ಬಿಜೆಪಿ ಸರಕಾರದ ಅಳಿವು, ಉಳಿವು ಅವರ ಒಳಗಿನವರ ಕೈಯಲ್ಲೇ ಇದೆ. 2020ರಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಂಡಿತ ಎಂದು ದೇವೇಗೌಡರು ಭವಿಷ್ಯ ನುಡಿದರು.

ಬಿಜೆಪಿ ಸರಕಾರ ಉಳಿಸಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹಾ ಹತ್ತಾರು ಹೇಳಿಕೆಗಳು ರಾಜಕೀಯದಲ್ಲಿ ಬರುತ್ತಿರುತ್ತವೆ. ಆದರೆ ಈ ಬಗ್ಗೆ ಜನ ನಿರ್ಧರಿಸುತ್ತಾರೆ ಎಂದು ಹೇಳಿದರು.

ಅಯೋಧ್ಯೆ ತೀರ್ಪು ಸ್ವಾಗತಾರ್ಹ

ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ರಾಮಮಂದಿರ ನಿರ್ಮಿಸುವುದು ಹಿಂದೂ ಸಮುದಾಯದ ಬಹುದಿನಗಳ ಬೇಡಿಕೆ ಮತ್ತು ನಂಬಿಕೆಯಾಗಿತ್ತು. ಅದು ಈಗ ಈಡೇರಲಿದೆ. ಆದರೆ ಬಾಬರಿ ಮಸೀದಿ ಒಡೆದದ್ದು ತಪ್ಪು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮಸೀದಿ ಒಡೆದ ತಪ್ಪಿಗಾಗಿ ಪರಿಹಾರವನ್ನು ನೀಡಬೇಕಿತ್ತು ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ 'ಮಾಸ್ಟರ್‌ ಪೀಸ್‌' ತೀರ್ಪು! 'ಧಾರ್ಮಿಕ ಭಾವನೆ ಭಾರ'ಕ್ಕೆ ಏರುಪೇರಾಗಲಿಲ್ಲ 'ನ್ಯಾಯದ ತಕ್ಕಡಿ'..!

ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಮಾಡಲು ಸೂಚಿಸಿದೆ. ಆದರೆ ಈ ಟ್ರಸ್ಟ್ ಯಾರ ಕೈಯಲ್ಲಿ ಇರುತ್ತದೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಈ ಬಗ್ಗೆಯೂ ನ್ಯಾಯಾಲಯ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ