Please enable javascript.ಬಸವರಾಜ ಬೊಮ್ಮಾಯಿ,ವಿಕ ಪಂಚ ಪ್ರಶ್ನೆ: ಚುನಾವಣೆ ವಿಷಯದಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪ ಇಲ್ಲ - ಬಸವರಾಜ ಬೊಮ್ಮಾಯಿ - panchaprashne, basavaraj bommai - Vijay Karnataka

ವಿಕ ಪಂಚ ಪ್ರಶ್ನೆ: ಚುನಾವಣೆ ವಿಷಯದಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪ ಇಲ್ಲ - ಬಸವರಾಜ ಬೊಮ್ಮಾಯಿ

Vijaya Karnataka 27 Apr 2018, 10:18 am
Subscribe

ಜನತಾ ಪರಿವಾರ ಮೂಲದ ಬಸವರಾಜ ಬೊಮ್ಮಾಯಿ ಅವರು ಈಗ ಬಿಜೆಪಿ ಮುಖಂಡ. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಪುತ್ರ. ಬಿ. ಎಸ್‌. ಯಡಿಯೂರಪ್ಪ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಪರಿಣಾಮಕಾರಿಯಗಿ ಕೆಲಸ ಮಾಡಿದವರು.

ಬಸವರಾಜ ಬೊಮ್ಮಾಯಿ
ಜನತಾ ಪರಿವಾರ ಮೂಲದ ಬಸವರಾಜ ಬೊಮ್ಮಾಯಿ ಅವರು ಈಗ ಬಿಜೆಪಿ ಮುಖಂಡ. ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಪುತ್ರ. ಬಿ. ಎಸ್‌. ಯಡಿಯೂರಪ್ಪ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಪರಿಣಾಮಕಾರಿಯಗಿ ಕೆಲಸ ಮಾಡಿದವರು. ಪ್ರಥಮ ಬಾರಿಗೆ 2008ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು. ಬಿಜೆಪಿ-ಕೆಜೆಪಿ ಇಬ್ಭಾಗವಾದಾಗಲೂ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡು ಪುನಃ ಶಾಸಕರಾಗಿ ಆಯ್ಕೆಯಾದವರು. ಮೂರನೆ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

1. ಜನ ಬಿಜೆಪಿಗೆ ಏಕೆ ಮತ ಹಾಕಬೇಕು?

ಭಾರತೀಯ ಜನತಾ ಪಕ್ಷ ಹಿಂದೆಂದಿಗಿಂತಲೂ ಇಂದು ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಬದಲಿಸುವ ಗುಣಾತ್ಮಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಬರೀ ಘೋಷಣೆಗೆ ಸೀಮಿತವಾಗದೇ ಅನುಷ್ಠಾನಗೊಳಿಸಿದೆ. ಆದರೆ ಕಾಂಗ್ರೆಸ್‌ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಘೋಷಿಸಿದೆಯೇ ಹೊರತು ಜಾರಿಗೆ ತಂದಿಲ್ಲ. ಕೆಲ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ದುರುಪಯೋಗಕ್ಕೂ ಕಾರಣವಾಗಿದೆ ಎನ್ನುವ ಅಸಹನೆ, ಅತೃಪ್ತಿ ಜನರಲ್ಲಿದೆ. ಹಾಗಾಗಿ, ಜನರ ಆಯ್ಕೆ ಬಿಜೆಪಿಯೇ ಆಗಬೇಕು.

2. ಸೆಕ್ಯೂಲರ್‌ ವಿಚಾರಧಾರೆ ಹೊಂದಿದ್ದ ಎಸ್‌. ಆರ್‌. ಬೊಮ್ಮಾಯಿ ಅವರ ಪುತ್ರ ಬಿಜೆಪಿ ಆಯ್ಕೆ ಮಾಡಿಕೊಂಡದ್ದು ಏಕೆ?

ನಮ್ಮ ತಂದೆಯವರು ಪ್ರತಿನಿಧಿಸುತ್ತಿದ್ದ ಜನತಾ ಪರಿವಾರ ಕ್ರಮೇಣ ತನ್ನ ಅಸ್ತಿತ್ವ ವನ್ನೇ ಕಳೆದುಕೊಳ್ಳಲಾರಂಭಿಸಿತು. ಹಾಗಾಗಿ, ಅವರ ನಿಧನಾನಂತರ ಮೌಲ್ಯಾಧಾರಿತ ಪಕ್ಷವೊಂದರ ಶೋಧದಲ್ಲಿದ್ದೆ. ಬಿಜೆಪಿ ತತ್ವ ಸಿದ್ಧಾಂತಗಳು ನನಗೆ ಹಿಡಿಸಿದವು, ತಕ್ಷಣ ಆ ಪಕ್ಷ ಸೇರಿದೆ. ಬಿಜೆಪಿ ಸಹ ಸೆಕ್ಯೂಲರ್‌ ಪಕ್ಷವೇ. ಅದರ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಸೆಕ್ಯೂಲರ್‌ ಆಗಿಯೇ ಇವೆ.

3. ಈ ಚುನಾವಣೆಯಲ್ಲಿ ಬಿಜೆಪಿ ಮೇಲೆ ಸಂಘ ಪರಿವಾರ ಪ್ರಭುತ್ವ ಸಾಧಿಸುತ್ತಿದೆ ಎಂದು ಅನಿಸುತ್ತಿಲ್ಲವೇ?

ಇಲ್ಲ ಆ ರೀತಿ ಏನಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮೂಲತಃ ನಿರ್ದಿಷ್ಟ ವಿಚಾರಧಾರೆಯನ್ನು, ವೈಚಾರಿಕತೆ ಹೊಂದಿರುವ ಸಂಘಟನೆ. ಅದು ರಾಜಕೀಯ ವ್ಯವಸ್ಥೆಯಲ್ಲ. ತನ್ನ ವೈಚಾರಿಕೆಯಿಂದಲೇ ಸಮಾಜ-ಸಮುದಾಯದ ಮೇಲೆ ಪ್ರಭಾವ ಬೀರಿರುವ ಸಂಘಟನೆ. ಬಿಜೆಪಿಗೆ ಕಾಲ ಕಾಲಕ್ಕೆ, ಅವಶ್ಯಕತೆ ಬಿದ್ದಾಗ ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದೆ. ಈ ಬಗ್ಗೆ ನನಗೂ ಅಭಿಮಾನ ಇದೆ. ಹಾಗಾಗಿ, ಸಂಘ ಪರಿವಾರದ ಹಸ್ತಕ್ಷೇಪದ ಮಾತೇ ಇಲ್ಲ ಬರುವುದಿಲ್ಲ.

4. ಇತರೆ ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ಹೇಗೆ ಭಿನ್ನವಾಗಿದೆ ?

ಫೇಸ್‌ಬುಕ್‌, ವಾಟ್ಸಾಪ್‌, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳು ಈ ಚುನಾವಣೆ ಮೇಲೆ ಆಗಾಧ ಪರಿಣಾಮವನ್ನು ಉಂಟು ಮಾಡಿವೆ. ಸರಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮತದಾರರು ನಿರ್ಭೀತಿಯಿಂದ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾರೆ. ನಮ್ಮ ನಡೆ-ನುಡಿಗಳನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಒಂದರ್ಥದಲ್ಲಿ, ಮತದಾರರು ಹಿಂದಿಗಿಂತ ಹೆಚ್ಚು ಪ್ರಾಜ್ಞರಾಗಿದ್ದಾರೆ. ಇದು ಎಲ್ಲ ಪಕ್ಷಗಳಿಗೂ, ಅಭ್ಯರ್ಥಿಗಳಿಗೂ ಒಂದು ರೀತಿಯಲ್ಲಿ ಸವಾಲಿನ ವಿಷಯವೇ ಸರಿ.

5. ಉತ್ತರ ಕರ್ನಾಟಕದ ಪ್ರಭಾವಿ ನಾಯಕನಾಗುವ ಮೂಲಕ ಮುಖ್ಯಮಂತ್ರಿಯಾಗಬೇಕೆನ್ನುವ ಕನಸು ಕಾಣುತ್ತಿರುವಿರಾ ?

ನನಗೆ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ಅದಕ್ಕಾಗಿ ಅಧಿಕಾರ ಸಿಕ್ಕಾಗಲೆಲ್ಲಾ ಕೆಲಸ ಮಾಡಿದ್ದೇನೆ. ನಾಳೆಯೂ ಅದನ್ನೇ ಮಾಡುತ್ತೇನೆ. ಇದನ್ನು ಬಿಟ್ಟು ಇನ್ಯಾವ ಆಸೆಯೂ ಇಲ್ಲ. ಮುಖ್ಯಮಂತ್ರಿಯಾಗಬೇಕೆನ್ನುವ ಚಿಂತನೆ ಇರಲಿ, ಕನಸು ಸಹ ಬಿದ್ದಿಲ್ಲ. ಉತ್ತರ ಕರ್ನಾಟಕ ಭಾಗದ ನಾಯಕ ಯಾರಾಗಬೇಕೆಂದು ಜನತೆ ತೀರ್ಮಾನಿಸುತ್ತಾರೆ.

ಸಂದರ್ಶನ: ರಾಜು ನದಾಫ ಹಾವೇರಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ