ಆ್ಯಪ್ನಗರ

ಸಿವಿಲ್ ಪೊಲೀಸ್ ನೇಮಕ ಪರೀಕ್ಷೆ: 9 ಕೋಟಿ ಹಣ, ಅಂಕಪಟ್ಟಿ ಸಮೇತ ಬಸವರಾಜ್ ಪರಾರಿ

ಸಿವಿಲ್‌ ಪೊಲೀಸ್‌ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಸವರಾಜ್‌ ಪರೀಕ್ಷಾರ್ಥಿಗಳಿಂದ ...

Vijaya Karnataka 28 Nov 2018, 8:59 am
ಬೆಂಗಳೂರು: ಸಿವಿಲ್‌ ಪೊಲೀಸ್‌ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಸವರಾಜ್‌ ಪರೀಕ್ಷಾರ್ಥಿಗಳಿಂದ ಸಂಗ್ರಹಿಸಿದ್ದ 9 ಕೋಟಿ ರೂ ನಗದು ಮತ್ತು ಪಿಯುಸಿ ಅಂಕಪಟ್ಟಿಗಳ ಸಮೇತ ಪರಾರಿ ಆಗಿದ್ದಾನೆ.
Vijaya Karnataka Web ccb


ಸಿಸಿಬಿ ಎಸಿಪಿ ವೇಣುಗೋಪಾಲ್‌ ತಂಡ ಶ್ರವಣಬೆಳಗೊಳ ಸಮೀಪದ ಕಲ್ಮಠದ ಶಾಲೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ 119 ಮಂದಿಯನ್ನು ಬಂಧಿಸಿತ್ತು. ಈ ವೇಳೆ ಬಸವರಾಜ್‌ ಪರಾರಿ ಆಗಿದ್ದಾನೆ. ಪರೀಕ್ಷಾರ್ಥಿಗಳಿಂದ ತಲಾ 8 ಲಕ್ಷ ರೂ ನಂತೆ ಸಂಗ್ರಹಿಸಿದ್ದ ಸುಮಾರು 9 ಕೋಟಿ ರೂಪಾಯಿ ನಗದು ಆತನ ಬಳಿಯೇ ಉಳಿದಿದೆ. ಅಭ್ಯರ್ಥಿಗಳ ಪಿಯುಸಿ ಅಂಕಪಟ್ಟಿ ಮತ್ತಿತರ ದಾಖಲೆ ಕೂಡ ಆತನ ಬಳಿಯೇ ಉಳಿದು ಬಿಟ್ಟಿವೆ.

ಪರಾರಿ ಆದ ದಿನದಿಂದ ಆರೋಪಿಯ ಮೊಬೈಲ್‌ ಸ್ವಿಚ್‌ ಆಫ್‌ ಇದೆ. ಚೆನ್ನೈ, ಮುಂಬೈ, ಅಹಮದಾಬಾದ್‌, ಹೈದರಾಬಾದ್‌ ಸೇರಿದಂತೆ ನಾನಾ ನಗರಗಳಲ್ಲಿ ತನ್ನ ಏಜೆಂಟರನ್ನು ಇಟ್ಟುಕೊಂಡಿರುವ ಈತ ಯಾವ ದಿಕ್ಕಿಗೆ ಪರಾರಿ ಆಗಿದ್ದಾನೆ ಎನ್ನುವ ಬಗ್ಗೆ ಇದುವರೆಗೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಬಸವರಾಜ್‌ ಜತೆಗೆ ನೇರ ಸಂಪರ್ಕದಲ್ಲಿರುವ ಏಜೆಂಟ್‌ ಒಬ್ಬಾತ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ ಎನ್ನುವ ಸುಳಿವು ಸಿಸಿಬಿಗೆ ಸಿಕ್ಕಿದೆ. ಜತೆಗೆ ಬೆಂಗಳೂರಿನಲ್ಲಿರುವ ಏಜೆಂಟ್‌ಗಳನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು ಆ ದಿಕ್ಕಿನಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ತಮ್ಮಂದಿರು

ಸಿಸಿಬಿ ಬಂಧನಕ್ಕೆ ಒಳಪಟ್ಟು ಜೈಲು ಸೇರಿರುವ 110 ಮಂದಿ ಪರೀಕ್ಷಾರ್ಥಿಗಳಲ್ಲಿ ಹಲವರ ಅಣ್ಣಂದಿರು ಈಗಾಗಲೇ ಪೊಲೀಸ್‌ ಇಲಾಖೆಯಲ್ಲಿ ಪೇದೆ, ಮುಖ್ಯಪೇದೆಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದೂ ಸಿಸಿಬಿ ಗಮನಕ್ಕೆ ಬಂದಿದೆ. ಇವರುಗಳೇ ಏಕೆ ತಮ್ಮ ತಮ್ಮಂದಿರನ್ನು ಶಿವಕುಮಾರ್‌ ಸಂಪರ್ಕಕ್ಕೆ ಕಳುಹಿಸಿರಬಾರದು ? ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಣ್ಣನಿಗೆ ಹೇಳದೆ ತಮ್ಮ ನೇರವಾಗಿ ಈ ಜಾಲದ ಜತೆ ನಂಟು ಇಟ್ಟುಕೊಳ್ಳಲು ಸಾಧ್ಯವೇ ? ಆ ಅಣ್ಣಂದಿರೂ ಇದೇ ಶಿವಕುಮಾರ್‌ ಕೃಪೆಯಿಂದಲೇ ಇಲಾಖೆಗೆ ಸೇರಿಕೊಂಡಿದ್ದಾರೆಯೇ ? ಎನ್ನುವ ಪ್ರಶ್ನೆಗಳಿಗೂ ಸಿಸಿಬಿ ಅಧಿಕಾರಿಗಳು ತನಿಖೆ ಮೂಲಕ ಉತ್ತರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಸೋರಿಕೆ ಹಿಂದೆ ಇನ್ಸ್‌ಪೆಕ್ಟರ್‌ ?

ಸಿವಿಲ್‌ ಪೊಲೀಸ್‌ ಪರೀಖ್ಷೆಯ ಪ್ರಶ್ನೆ ಪತ್ರಿಕೆ ಹಿಂದೆ ಹಾಲಿ ಕರ್ತವ್ಯದಲ್ಲಿರುವ ಮೀಸಲು ಪಡೆಯ ಇನ್ಸ್‌ಪೆಕ್ಟರ್‌ ಒಬ್ಬರ ಕೈವಾಡವೂ ಇರಬಹುದು ಎನ್ನುವ ಗುಮಾನಿ ಕೆಲವರಿಗಿದೆ. ಶಿವಕುಮಾರ್‌ ಮತ್ತು ಬಸವರಾಜ್‌ ಇಬ್ಬರೂ ದೊಡ್ಡ ಜಾಲವನ್ನು ರಾಜ್ಯದಲ್ಲಿ ಬೆಳೆಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಕೆ ಮುಂದುವರಿಯಬೇಕಾಗಿದೆ ಎಂದು ಈ ಹಿಂದೆ ಶಿವಕುಮಾರ್‌ನನ್ನು ಬಂಧಿಸಿದ್ದ ಅಧಿಕಾರಿಗಳ ತಂಡದಲ್ಲಿದ್ದವರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ