ಆ್ಯಪ್ನಗರ

ಪೋಸ್ಟ್‌ಕಾರ್ಡ್‌ನ ಮಹೇಶ ಹೆಗಡೆ ಪೊಲೀಸ್‌ ಕಸ್ಟಡಿ ಕೋರಿಕೆ ತಿರಸ್ಕರಿಸಿದ ಕೋರ್ಟ್‌

ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದಲ್ಲಿ ಬಂಧಿತನಾಗಿರುವ ಪೋಸ್ಟ್‌ಕಾರ್ಡ್‌ ಡಾಟ್‌ ಕಾಮ್‌ನ ಮಹೇಶ ವಿಕ್ರಂ ಹೆಗಡೆಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಕೋರಿದ್ದ ಸೈಬರ್‌ ಕ್ರೈಂ ಪೊಲೀಸರ ಮನವಿಯನ್ನು ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿದೆ.

Vijaya Karnataka Web 1 Apr 2018, 9:25 am
ಬೆಂಗಳೂರು: ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದಲ್ಲಿ ಬಂಧಿತನಾಗಿರುವ ಪೋಸ್ಟ್‌ಕಾರ್ಡ್‌ ಡಾಟ್‌ ಕಾಮ್‌ನ ಮಹೇಶ ವಿಕ್ರಂ ಹೆಗಡೆಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಕೋರಿದ್ದ ಸೈಬರ್‌ ಕ್ರೈಂ ಪೊಲೀಸರ ಮನವಿಯನ್ನು ಎಸಿಎಂಎಂ ನ್ಯಾಯಾಲಯ ತಿರಸ್ಕರಿಸಿದೆ.
Vijaya Karnataka Web post card mahesh police custody rejected
ಪೋಸ್ಟ್‌ಕಾರ್ಡ್‌ನ ಮಹೇಶ ಹೆಗಡೆ ಪೊಲೀಸ್‌ ಕಸ್ಟಡಿ ಕೋರಿಕೆ ತಿರಸ್ಕರಿಸಿದ ಕೋರ್ಟ್‌


ಮಾ.29ರಂದು ಬಂಧಿತರಾಗಿದ್ದ ವಿಕ್ರಂ ಹೆಗಡೆಯನ್ನು ಅದೇ ದಿನ ರಾತ್ರಿ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.

ವೆಬ್‌ ಬಗ್ಗೆ ಪರಿಶೀಲನೆ

ಮಹೇಶ ಹೆಗಡೆ ನಡೆಸುತ್ತಿರುವ ಪೋಸ್ಟ್‌ಕಾರ್ಡ್‌ ಡಾಟ್‌ ಕಾಮ್‌ನ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸುದ್ದಿ ಪ್ರಕಟ ಮಾಡುವ ವೆಬ್‌ಸೈಟ್‌ ನಡೆಸಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪರವಾನಗಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಪರವಾನಗಿ ಪಡೆದಿದ್ದರೆ, ಸುಳ್ಳು ಸುದ್ದಿ ಪ್ರಕಟ ಮಾಡಿರುವ ಕುರಿತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುತ್ತದೆ. ಕಚೇರಿಯು ತ್ರಿವೆಂಡ್ರಂನಲ್ಲಿರುವ ಮಾಹಿತಿ ಇದೆ. ಹೀಗಾಗಿ, ಪ್ರಕರಣದ ಕುರಿತು ಕಾನೂನು ಪ್ರಕ್ರಿಯೆ ನಡೆಸಲು ಆರೋಪಿ ಮಹೇಶ ಹೆಗಡೆಯನ್ನು ಸ್ಥಳಕ್ಕೆ ಕರೆದೊಯ್ಯಲು ಕಸ್ಟಡಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದರು.

ಶ್ರವಣಬೆಳಗೊಳದಲ್ಲಿ ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೈಸೂರು ಮಾರ್ಗವಾಗಿ ಕನಕಗಿರಿಗೆ ಹೋಗುವ ಮಾರ್ಗ ಮಧ್ಯೆ ಮಾ.11ರಂದು ಅನಾರೋಗ್ಯ ಉಂಟಾಗಿದ್ದ ಜೈನ ಮುನಿಯನ್ನು ತಳ್ಳು ಗಾಡಿಯಲ್ಲಿ ಇಬ್ಬರು ಸೇವಕರು ಕರೆದೊಯ್ಯುತ್ತಿದ್ದರು. ಅವರ ತಳ್ಳು ಗಾಡಿಗೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದಿದ್ದ. ಪರಿಣಾಮ ಸೇವಕರು, ಜೈನ ಮುನಿ ಹಾಗೂ ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿದ್ದವು. ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಆಯುರ್ವೇದಿಕ್‌ ವೈದ್ಯರು ಚಿಕಿತ್ಸೆ ನೀಡಿದ್ದರು. ಈ ವೇಳೆ ಮುನಿಗಳ ಮೈ ಮೇಲೆ ಆಗಿದ್ದ ತರಚು ಗಾಯಗಳ ಫೋಟೋಗಳನ್ನು ಕ್ಲಿಕ್ಕಿಸಲಾಗಿತ್ತು. ಅವುಗಳು ಒಬ್ಬರಿಂದ ಒಬ್ಬರಿಗೆ ಶೇರ್‌ ಆಗಿದ್ದವು.

ತಿಂಗಳ ಆದಾಯ 8 ಲಕ್ಷ ರೂ.

ಆರೋಪಿ ನಡೆಸುತ್ತಿರುವ ವೆಬ್‌ನಿಂದ ತಿಂಗಳಿಗೆ ಸುಮಾರು 8 ಲಕ್ಷ ರೂ. ಆದಾಯ ಬರುತ್ತಿದೆ ಎಂಬ ಮಾಹಿತಿ ಇದೆ ಎಂದು ಅಧಿಕಾರಿ ತಿಳಿಸಿದರು.

ಅದಾದ ನಂತರ ರಾಯಭಾಗದ ಕುಡಚಿ ಬಳಿ ಮಾ.18ರಂದು ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ತೂರಿದ್ದ ಕಲ್ಲೊಂದು ರಸ್ತೆಯಲ್ಲಿ ತೆರಳುತ್ತಿದ್ದ ಜೈನ ಮುನಿಗಳ ಬಳಿ ಬಿದ್ದಿತ್ತು. ಈ ಸಂಬಂಧ ಸ್ಥಳೀಯ ಪೊಲೀಸರು ಕಲ್ಲು ತೂರಿದ ವ್ಯಕ್ತಿಯ ಮೇಲೆ ಕೇಸ್‌ ದಾಖಲಿಸಿದ್ದರು. ಈ ಸುದ್ದಿ ಹರಿದಾಡಿದ್ದನ್ನು ಸರಿಯಾಗಿ ಪರಿಶೀಲನೆ ನಡೆಸದೆ, ತಮ್ಮ ಪೋಸ್ಟ್‌ ಕಾರ್ಡ್‌ ವೆಬ್‌ನಲ್ಲಿ, ಸಿದ್ದರಾಮಯ್ಯ ಸರಕಾರದಲ್ಲಿ ಯಾರೂ ಸುರಕ್ಷಿತರಲ್ಲ. ಮುಸ್ಲಿಂ ಯುವಕನಿಂದ ಜೈನ ಮುನಿ ಮೇಲೆ ಹಲ್ಲೆ ಎಂದು ಮಹೇಶ ಹೆಗಡೆ ಸುದ್ದಿ ಪ್ರಕಟಿಸಿದ್ದರು. ಈ ಮೂಲಕ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಗಫಾರ್‌ ಬೇಗ್‌ ಎಂಬುವರು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹೇಶ ಹೆಗಡೆಯನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ