ಆ್ಯಪ್ನಗರ

ಲೇವಾದೇವಿಗಾರರ ಉಪಟಳ ತಡೆಗೆ ಕಠಿಣ ಕ್ರಮ

ಸಾಲ ಪಡೆದವರ ರಕ್ಷಣಾ ಕ್ರಮಕ್ಕೆ ಸುತ್ತೋಲೆ ಹೊರಡಿಸಿದ ಡಿಜಿಪಿ

Vijaya Karnataka 6 Sep 2018, 8:20 pm
ಬೆಂಗಳೂರು: ರಾಜ್ಯದ ಋುಣಭಾರ ಪೀಡಿತ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ಅಶಕ್ತ ವರ್ಗದ ಜನರಿಗೆ ಋುಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ಕರ್ನಾಟಕ ಋುಣಭಾರ ಕಾಯಿದೆ-2018 ಅನ್ನು ಜಾರಿಗೊಳಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಾಲ ಪಡೆದವರ ಮೇಲೆ ಯಾವುದೇ ರೀತಿಯ ಕಾನೂನು ಬಾಹಿರ ಒತ್ತಡ ಹಾಕದಂತೆ/ದೌರ್ಜನ್ಯವೆಸಗದಂತೆ ಪೊಲೀಸ್‌ ಇಲಾಖೆ ಹಲವು ಮುಂಜಾಗ್ರತ ಕ್ರಮಗಳಿಗೆ ಮುಂದಾಗಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಅವರು ಎಲ್ಲಾ ಘಟಕಾಧಿಕಾರಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಸಾಲ ಮರುಪಾವತಿಸುವಂತೆ ಲೇವಾದೇವಿಗಾರರು ಇಲ್ಲವೇ ಹಣಕಾಸು ಸಂಸ್ಥೆಗಳು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆ ಮಹತ್ವ ಪಡೆದುಕೊಂಡಿದೆ. ಸುತ್ತೋಲೆಯಲ್ಲಿ ಸೂಚಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

''ಹಣ ಲೇವಾದೇವಿ ಹಾಗೂ ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ಅನೌಪಚಾರಿಕ ಸಾಲ ನೀಡುವವರಿಂದ ಜಾರಿಯಲ್ಲಿರುವ ಕಾನೂನು ಪಾಲಿಸಲಾಗುತ್ತಿದೆಯೇ ಮತ್ತು ಸಾಲ ಮರುಪಾವತಿಗಾಗಿ ಅನಧಿಕೃತವಾಗಿ ಒತ್ತಡ/ಕಿರುಕುಳ ನೀಡಲಾಗುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ವಸೂಲಿ ಮಾಡುವುದು, ಸಾಲ ಮರುಪಾವತಿಗಾಗಿ ಸಾರ್ವಜನಿಕರು, ರೈತರನ್ನು ಶೋಷಿಸುತ್ತಿರುವ ಬಗ್ಗೆ ಯಾವುದೇ ದೂರು ಬಂದಲ್ಲಿ ಇಲ್ಲವೇ ಸ್ವಯಂ ಪ್ರೇರಿತವಾಗಿ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಬೇಕು. ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ 'ಸಹಾಯವಾಣಿ ಕೇಂದ್ರ' ವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ಇದರ ನಿರ್ವಹಣೆಗಾಗಿ ಸಿವಿಎಲ್‌/ ನಿಸ್ತಂತು ವಿಭಾಗದ ಒಬ್ಬ ಪೊಲೀಸ್‌ ಸಬ್‌ಇನ್‌ಸ್ಪೆಕ್ಷರ್‌ ಮಟ್ಟದ ಅಧಿಕಾರಿ ನೇಮಿಸಬೇಕು,''ಎಂದು ಸೂಚಿಸಲಾಗಿದೆ.

''ದೂರುಗಳನ್ನು ವಿಳಂಬಕ್ಕೆ ಆಸ್ಪದವಿಲ್ಲದೆ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಿಗೆ ಹಾಗೂ ನಗರ ಮಟ್ಟದಲ್ಲಿ ಉಪ ಪೊಲೀಸ್‌ ಆಯುಕ್ತರು, (ಕಾನೂನು ಮತ್ತು ಸುವ್ಯವಸ್ಥೆ ) ಇವರಿಗೆ ರವಾನಿಸಬೇಕು, ತಕ್ಷಣವೇ ಆ ಅಧಿಕಾರಿ ಕಾರ್ಯಪ್ರವೃತ್ತರಾಗಬೇಕು. ಸಹಾಯವಾಣಿಯ ದೂರವಾಣಿ ಸಂಖ್ಯೆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು. ಅನಧಿಕೃತ ಬಡ್ಡಿ ವ್ಯವಹಾರ/ಲೇವಾದೇವಿ ಮಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬೀಟ್‌ ಪೊಲೀಸ್‌ ಸಿಬ್ಬಂದಿ ಸಹಾಯ ಮಾಡಬೇಕು,'' ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ