ಆ್ಯಪ್ನಗರ

ಪಿಯುಸಿ ದಾಖಲಾತಿ ಹೆಚ್ಚಳಕ್ಕೆ ಆಂದೋಲನ

ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಆಂದೋಲನ ಕೈಗೊಳ್ಳಲು ಸುತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ದತ್ತು ನೀಡುವ ಮೂಲಕ ದಾಖಲಾತಿ, ಹಾಜರಾತಿ ಹಾಗೂ ಗುಣಮಟ್ಟದ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ.

Vijaya Karnataka 11 May 2018, 8:18 am
ಬೆಂಗಳೂರು: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಆಂದೋಲನ ಕೈಗೊಳ್ಳಲು ಸುತ್ತೋಲೆ ಹೊರಡಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನ್ಯಾಸಕರಿಗೆ ವಿದ್ಯಾರ್ಥಿಗಳನ್ನು ದತ್ತು ನೀಡುವ ಮೂಲಕ ದಾಖಲಾತಿ, ಹಾಜರಾತಿ ಹಾಗೂ ಗುಣಮಟ್ಟದ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದೆ.
Vijaya Karnataka Web SHIKHA


''ಈ ಆಂದೋಲನಕ್ಕಾಗಿ ಕಾಲೇಜಿನಲ್ಲಿರುವ ಸಂಪನ್ಮೂಲ ಸೌಲಭ್ಯ, ಸರಕಾರದ ಯೋಜನೆ ಬಿಂಬಿಸುವಂತಹ ಆಕರ್ಷಣೀಯವಾದ ಕರಪತ್ರ, ದೂರವಾಣಿ / ವಾಟ್ಸ್ಯಾಪ್‌ / ಫೇಸ್‌ಬುಕ್‌ ಮೂಲಕ ಅಭಿಯಾನ ಕೈಗೊಳ್ಳುವುದು. ಇದಕ್ಕಾಗಿ ಕಾಲೇಜುಗಳ ಸಂಚಿತ ನಿಧಿಯಲ್ಲಿರುವ ಅನುದಾನದಲ್ಲಿ 1000 ರೂ. ಮೊತ್ತಕ್ಕೆ ಮೀರದಂತೆ ಭರಿಸಬಹುದು,'' ಎಂದು ಇಲಾಖೆಯ ನಿರ್ದೇಶಕಿ ಸಿ. ಶಿಖಾ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

''ಪ್ರತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಮ್ಮ ವ್ಯಾಪ್ತಿ ಬರುವ ಎಲ್ಲ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವುದರ ಜತೆಗೆ, ಪೋಷಕರನ್ನು ಸಂಪರ್ಕಿಸಿ ಕಾಲೇಜಿಗೆ ಸೇರಿಸಲು ಉತ್ತೇಜನ ನೀಡಬೇಕು,'' ಎಂದು ನಿರ್ದೇಶನ ನೀಡಲಾಗಿದೆ.

ಸ್ಥಳೀಯ ಕೇಬಲ್‌ ಟಿವಿಗಳಲ್ಲಿ ಕಾಲೇಜಿನ ಸೌಲಭ್ಯ,ಸಾಧಕ ವಿದ್ಯಾರ್ಥಿಗಳ ವಿವರ ಭಿತ್ತರ ಹಾಗೂ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಫ್ಲೆಕ್ಸ್‌ ರೂಪದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ.

''2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎರಡು ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರ ಸಂಗ್ರಹಿಸಬೇಕು. ಅದೇ ರೀತಿ ಕ್ರೀಡೆ, ಬರವಣಿಗೆ, ಸಾಹಿತ್ಯ, ಸಮಾಜ ಸೇವೆಯಲ್ಲಿ ಉತ್ತಮ ಸಾಧನೆಗೈದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ವಿವರಗಳನ್ನು ಭಾವಚಿತ್ರ ಸಮೇತ ಇಲಾಖೆ ಕಚೇರಿಯ ಶೈಕ್ಷಣಿಕ ಕಚೇರಿಗೆ ಇ-ಮೇಲ್‌ ಮೂಲಕ ಕಳಿಸಬೇಕು. ಈ ಪೈಕಿ ಅರ್ಹವನ್ನು ಪರಿಶೀಲಿಸಿ ವೆಬ್‌ಸೈಟ್‌ಗೆ ಅಳವಡಿಸಲಾಗುವುದು,'' ಎಂದು ಶಿಖಾ ತಿಳಿಸಿದ್ದಾರೆ.

ಸರಕಾರೇತರ ಶುಲ್ಕ ಮರುಪಾವತಿ:

ಕಳೆದ ಸಾಲಿನಿಂದಲೇ ಎಲ್ಲಾ ವಿದ್ಯಾರ್ಥಿನಿಯರ ದಾಖಲಾತಿಗೆ ಸಂಬಂಧಿಸಿದ ಸರಕಾರೇತರ ಶುಲ್ಕ (456 ರೂ.) ಮರು ಪಾವತಿ ಮಾಡಲಾಗುತ್ತಿದೆ. ಪ್ರತಿಭಾವಂತ ಎಸ್‌ಸಿ/ ಎಸ್‌ಟಿ ವಿಜ್ಞಾನ ಮತ್ತು ವಾಣಿಜ್ಯ ಸಂಯೋಜನೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಒದಗಿಸಲು 'ಪುಸ್ತಕ ನಿಧಿ- ಬುಕ್‌ ಬ್ಯಾಂಕ್‌' ಯೋಜನೆ ಪ್ರಾರಂಭಿಸಲಾಗಿದೆ.

ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಎಸ್‌ಸಿ/ ಎಸ್‌ಟಿ ಪ್ರತಿಭಾವಂತ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್‌ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೆ ದಸರಾ ರಜೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ.

ತಜ್ಞರಿಂದ 'ಸ್ಪೋಕನ್‌ ಆ್ಯಂಡ್‌ ಕಮ್ಯುನಿಕೇಟಿವ್‌ ಇಂಗ್ಲಿಷ್‌' ತರಬೇತಿ ನೀಡಲು ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಈ ಎಲ್ಲ ಯೋಜನೆಗಳನ್ನು ಈ ವರ್ಷದಲ್ಲಿಯೂ ಮುಂದುವರಿಸಲು ಇಲಾಖೆ ನಿರ್ಧರಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ