ಆ್ಯಪ್ನಗರ

ಮಾ.25 ರಿಂದ ದ್ವಿತೀಯ ಪಿಯು ಮೌಲ್ಯಮಾಪನ

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾ.25ರಿಂದ ಆರಂಭವಾಗಲಿದ್ದು, ಎಲ್ಲ ಉಪನ್ಯಾಸಕರು ಮೌಲ್ಯಮಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫರ್‌ ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka 19 Mar 2019, 7:24 am
ಬೆಂಗಳೂರು : ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾ.25ರಿಂದ ಆರಂಭವಾಗಲಿದ್ದು, ಎಲ್ಲ ಉಪನ್ಯಾಸಕರು ಮೌಲ್ಯಮಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫರ್‌ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web Exam 1


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೇಡಿಕೆಗಳ ಈಡೇರಿಕೆಗೆ ಉಪನ್ಯಾಸಕರು ಮೌಲ್ಯಮಾಪನವನ್ನು ಬಹಿಷ್ಕಾರ ಮಾಡುವುದು ಸರಿಯಾದ ಕ್ರಮವಲ್ಲ. ಒಂದು ವೇಳೆ ಮೌಲ್ಯಮಾಪನವನ್ನು ಬಹಿಷ್ಕರಿಸಿದರೆ, ಮೌಲ್ಯಮಾಪನಕ್ಕೆ ಬರುವ ಉಪನ್ಯಾಸಕರ ಹೆಚ್ಚುವರಿ ಪಟ್ಟಿ ನಮ್ಮ ಬಳಿಯಿದೆ. ಅವರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿಸಲಾಗುವುದು,'' ಎಂದರು.

''ಮಾ.21ರಿಂದ ಉತ್ತರ ಪತ್ರಿಕೆಗಳ ಕೋಡಿಂಗ್‌, ಡಿ-ಕೋಡಿಂಗ್‌ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ. ಇದೇ ಮೊದಲ ಬಾರಿಗೆ ಮೌಲ್ಯಮಾಪನ ಕೇಂದ್ರಗಳಿಂದಲೇ ತಂತ್ರಾಂಶದ ನೆರವಿನೊಂದಿಗೆ ಅಂಕಗಳನ್ನು ಇಲಾಖೆಯ ಸರ್ವರ್‌ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಈ ಅಂಕಗಳನ್ನು ಒಎಂಆರ್‌ ಶೀಟ್‌ನೊಂದಿಗೆ ತಾಳೆ ಮಾಡಿ ನೋಡಲಾಗುತ್ತದೆ. ಏಪ್ರಿಲ್‌ ಅಂತ್ಯಕ್ಕೆ ಫಲಿತಾಂಶ ಪ್ರಕಟಿಸಲು ಶತಾಯಗತಾಯ ಪ್ರಯತ್ನಿಸಲಾಗುವುದು,'' ಎಂದು ತಿಳಿಸಿದರು.


ಜೀವಶಾಸ್ತ್ರಕ್ಕೆ ಕೃಪಾಂಕ ಇಲ್ಲ:

ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಎಲ್ಲಾ ಪ್ರಶ್ನೆಗಳನ್ನು ಎನ್‌ಸಿಇಆರ್‌ಟಿ ಪಠ್ಯ ಕ್ರಮದಂತೆಯೇ ಕೇಳಲಾಗಿದೆ. ಹಾಗಾಗಿ, ಜೀವಶಾಸ್ತ್ರ ವಿಷಯಕ್ಕೆ ಯಾವುದೇ ಕೃಪಾಂಕ ನೀಡುವುದಿಲ್ಲ ಎಂದು ಡಾ.ಪಿ.ಸಿ.ಜಾಫರ್‌ ಸ್ಪಷ್ಟಪಡಿಸಿದರು.

ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ:

ಕೆಲವು ಪ್ರಾಂಶುಪಾಲರು ವಿದ್ಯಾರ್ಥಿಗಳ ಮಾಹಿತಿಯನ್ನು ಸರಿಯಾಗಿ ನಮೂದು ಮಾಡದ ಕಾರಣ, ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಹೆಚ್ಚುವರಿ ಪ್ರಶ್ನೆ ಪತ್ರಿಕೆಗಳನ್ನು ಪೂರೈಕೆ ಮಾಡುವಂತಹ ಸನ್ನಿವೇಶ ಸೃಷ್ಟಿಯಾಯಿತು. ಹಾಗಾಗಿ, ಕರ್ತವ್ಯಲೋಪ ಎಸಗಿದ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಾ.ಪಿ.ಸಿ.ಜಾಫರ್‌ ತಿಳಿಸಿದರು.

ಹಾವೇರಿ, ಕೊಪ್ಪಳ ಹಾಗೂ ಇತರೆ ಕೆಲವು ಜಿಲ್ಲೆಗಳಲ್ಲಿ ಸುಮಾರು ಹತ್ತು ಕಾಲೇಜುಗಳಲ್ಲಿ ಯಾವ ವಿಷಯಕ್ಕೆ ಎಷ್ಟು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಎಂಬ ಮಾಹಿತಿಯನ್ನು ಕ್ರಮಬದ್ಧವಾಗಿ ನೀಡಿರಲಿಲ್ಲ. ಪ್ರಾಂಶುಪಾಲರ ಇಂತಹ ನಿರ್ಲಕ್ಷ್ಯ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ. ಆದ್ದರಿಂದ, ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಪ್ರಾಂಶುಪಾಲರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪಿಯು ತರಗತಿ ಆರಂಭ ಕುರಿತು ಸರಕಾರದ ನಿರ್ಧಾರಕ್ಕೆ ಬದ್ಧ

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಮೇ 6ರಿಂದ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಡಾ.ಪಿ.ಸಿ.ಜಾಫರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ