ಆ್ಯಪ್ನಗರ

ಕ್ಯೂನೆಟ್‌ ವಂಚನೆ ಬಾಲ ಕಟ್‌: ಬೆಂಗಳೂರಿನ ಏಳು ಸಾವಿರ ಮಂದಿಗೂ ಟೋಪಿ

ದೇಶಾದ್ಯಂತ ಸಾವಿರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕ್ಯೂನೆಟ್ ಜಾಲವನ್ನು ಬೇರು ಸಮೇತ ಕಿತ್ತು ಹಾಕುವಲ್ಲಿ ಸೈದರಾಬಾದ್ ಪೊಲೀಸ್ ಕಮಿಷನರ್ ನೇತೃತ್ವದ ತಂಡ ಯಶಸ್ವಿಯಾಗಿದೆ.

Vijaya Karnataka 28 Aug 2019, 7:41 am
ಬೆಂಗಳೂರು: ಬೆಂಗಳೂರಿನ ಏಳು ಸಾವಿರಕ್ಕೂ ಅಧಿಕ ಮಂದಿಗೂ ಸೇರಿ ದೇಶಾದ್ಯಂತ ಸಾವಿರಾರು ಮಂದಿಗೆ ಸಹಸ್ರಾರು ಕೋಟಿ ರೂಪಾಯಿ ವಂಚಿಸಿದ್ದ 'ಕ್ಯೂ ನೆಟ್‌' ಜಾಲವನ್ನು ಬೇರು ಸಮೇತ ಕಿತ್ತು ಹಾಕುವಲ್ಲಿ ಸೈಬರಾಬಾದ್‌(ಹೈದರಾಬಾದ್‌ ಹೊರ ವಲಯ) ಪೊಲೀಸ್‌ ಕಮಿಷನರ್‌ ವಿ.ಸಿ.ಸಜ್ಜನರ್‌ ನೇತೃತ್ವದ ತಂಡ ಯಶಸ್ವಿ ಆಗಿದೆ.
Vijaya Karnataka Web qnet


ಹಾಂಕಾಂಗ್‌ನಲ್ಲಿ ಕಾರ್ಯಾರಂಭ ಮಾಡಿದ 'ಕ್ಯೂನೆಟ್‌' ಕಂಪನಿಯ ವಂಚಕರು ಭಾರತದಾದ್ಯಂತ ಸ್ಥಳೀಯರನ್ನೇ ಬಳಸಿಕೊಂಡು ಅತ್ಯಧಿಕ ಲಾಭ ಆಮಿಷ ತೋರಿಸಿ, ನಾನಾ ಸ್ಕೀಂಗಳ ಹೆಸರಿನಲ್ಲಿ 75 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಣ ಲಪಟಾಯಿಸಿದ್ದರು. ಬೆಂಗಳೂರಿನ 7 ಸಾವಿರಕ್ಕೂ ಅಧಿಕ ಮಂದಿ ಜಾಲಕ್ಕೆ ಬಲಿಯಾಗಿ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದರು. ಈ ಎಲ್ಲಾ ವಿವರಗಳನ್ನು ಇದೇ ವರ್ಷದ ಜನವರಿ 28 ರಂದು 'ವಿಜಯ ಕರ್ನಾಟಕ' ವಿವರವಾಗಿ ವರದಿ ಮಾಡಿತ್ತು. ಬಳಿಕ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸೂಚಿಸಿತ್ತು. ಇಷ್ಟಾದ ಮೇಲೂ 'ವಿಹಾನ್‌ ಡೈರೆಕ್ಟ್ ಸೆಲ್ಲಿಂಗ್‌' ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 'ಕ್ಯೂ ನೆಟ್‌' ಜಾಲವನ್ನು ಮೊದಲಿಗೆ ಸೈಬರಾಬಾದ್‌ ಪೊಲೀಸರು ಪತ್ತೆ ಹಚ್ಚಿ ತನಿಖೆ ಆರಂಭಿಸಿದ್ದರು.

ಈಗ ತನಿಖೆ ಪೂರ್ಣಗೊಳಿಸಿರುವ ಸೈಬರಾಬಾದ್‌ ಪೊಲೀಸ್‌ ಕಮಿಷನರ್‌ ವಿ.ಸಿ.ಸಜ್ಜನರ್‌ ನೇತೃತ್ವದ ತಂಡ ಪತ್ರಿಕಾಗೋಷ್ಠಿ ನಡೆಸಿ, ಈ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಮತ್ತು ಯಾವುದೇ ಕಾರಣಕ್ಕೂ ವಂಚಕ ಸ್ಕೀಂಗಳ ಆಮಿಷಗಳಿಗೆ ಬಲಿಯಾಗದಂತೆ ಹೇಳಿದೆ.

- ಹೆಸರು ಬದಲಾಯಿಸುತ್ತಾ ಹೋದರು -

ಜರ್ಮನಿಯ ಚಿನ್ನದ ನಾಣ್ಯ, ಪ್ರವಾಸದ ಆಕರ್ಷಕ ಆಫರ್‌, ಕಡಿಮೆ ಅವಧಿಯಲ್ಲಿ ಶೇ.200 ರಿಂದ 400 ಕ್ಕೂ ಅಧಿಕ ಮೊತ್ತದ ಲಾಭ... ಸೇರಿದಂತೆ ನಾನಾ ಸ್ಕೀಂಗಳ ಆಮಿಷಗಳನ್ನು ಕಂಪನಿ ಒಡ್ಡುತ್ತಿತ್ತು. ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಉದ್ಯಮಿಗಳು, ವೈದ್ಯರು ಸೇರಿ ಪ್ರತಿಷ್ಠಿತ ವರ್ಗದವರಿಂದಲೇ ಕೋಟಿಗಟ್ಟಲೆ ಹಣ ಲಪಟಾಯಿಸಿತ್ತು. ಮೊದಲಿಗೆ ಚೆನ್ನೈನ 172 ಮಂದಿ ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಬೆಂಗಳೂರಿನಲ್ಲೂ ವಂಚನೆಗೆ ಒಳಗಾದವರೆಲ್ಲ ಸೇರಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸಿದರು.

ದೂರುಗಳು ದಾಖಲಾಗುತ್ತಿದ್ದಂತೆ ಸ್ಕೀಂಗಳ ಹೆಸರನ್ನು ಬದಲಾಯಿಸುತ್ತಾವಂಚನೆಗೆ ಹೊಸ ಹೊಸ ವ್ಯಕ್ತಿಗಳನ್ನು ನೇಮಿಸಿಕೊಂಡು ನಿರಂತರವಾಗಿ ವಂಚನೆ ಮುಂದುವರೆಸಿತ್ತು ಎನ್ನುವುದು ಸೈಬರಾಬಾದ್‌ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

- ಮತ್ತೆ ಮತ್ತೆ ಬಲಿ ಆಗಬೇಡಿ -

ಮಲ್ಟಿ ಲೆವೆಲ್‌ ಮಾರ್ಕೆಟಿಂಗ್‌ ರೂಪದಲ್ಲಿ ವಂಚಕ ಕಂಪನಿಗಳು ಹೆಣೆಯುವ ಜಾಲಕ್ಕೆ ಬಲಿ ಆಗಬೇಡಿ. ನೇರ ಮಾರುಕಟ್ಟೆ, ನೆಟ್‌ವರ್ಕ್‌ ಮಾರ್ಕೆಟಿಂಗ್‌ ರೂಪದಲ್ಲೂ ವಂಚಕ ಕಂಪನಿಗಳು ಕಾರ್ಯ ನಿರ್ವಹಿಸುತ್ತವೆ. ಈ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಮತ್ತು ಅಂಥ ಚಟುವಟಿಕೆಗಳು ಗೊತ್ತಾದರೆ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

-ಲುಕ್‌ಔಟ್‌ ನೋಟಿಸ್‌-

'ವಿಜಯ ಕರ್ನಾಟಕ' ಈ ಬಗ್ಗೆ ವಿಶೇಷ ವರದಿ ಪ್ರಕಟಿಸಿದ ಬಳಿಕ ಕ್ಯೂನೆಟ್‌ ಪರವಾಗಿ ಕೆಲಸ ಮಾಡುತ್ತಿದ್ದ ಗುಹಾನ್‌ ರಾಮಚಂದ್ರನ್‌, ಎಂ.ಎನ್‌.ಗುಣಶೀಲ, ಶುಭಾ ತುಳಸಿರಾಮ್‌, ವೆಂಕ ಶ್ರೀನಿವಾಸ ರಾವ್‌, ಬಾಲಾಜಿ ವೀರವಳ್ಳಿ, ಪ್ರೇಮದಾಸ್‌, ಕಾಂತ ವಿಜಯ ಸಾರಥಿ, ಮುಹಮದ್‌ ಇಮ್ತಿಯಾಜ್‌, ಮಾಲ್ಕಮ್‌ ದೇಸಾಯಿ, ಜೋಸೆಫ್‌ ಫೆರೇರಾ ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಯಾಗಿತ್ತು. ಆ ಬಳಿಕ 170 ಮಂದಿ ಬಂಧನವಾಗಿತ್ತು.

- ವಿವೇಕ್‌ ಓಬೇರಾಯ್‌ಗೆ ನೋಟಿಸ್‌ -

ಹಾಂಕಾಂಗ್‌ ಮೂಲದ ಕ್ಯೂನೆಟ್‌ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿ ಈ ಕಂಪನಿಯ ನಾನಾ ಫ್ರಾಂಚೈಸಿಗಳು ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಬಾಲಿವುಡ್‌ ಸ್ಟಾರ್‌ಗಳಾದ ಅನಿಲ್‌ ಕಪೂರ್‌, ವಿವೇಕ್‌ ಓಬೇರಾಯ್‌, ಬೊಮ್ಮನ್‌ ಇರಾನಿ, ಜಾಕಿ ಶ್ರಾಫ್‌, ಪೂಜಾ ಹೆಗ್ಡೆ, ತೆಲುಗು ನಟ ಅಲ್ಲೂ ಶಿರಿಶ್‌ ಸೇರಿ ಹಲವರಿಗೆ ಸೈಬರಾಬಾದ್‌ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ