ಆ್ಯಪ್ನಗರ

ಭಾರಿ ಮಳೆಗೆ ಬೆಳೆ ಹಾನಿ: ಡಿಸಿಗಳಿಂದ ವರದಿ ಕೋರಿದ ಸರಕಾರ

ಎಲ್ಲಾ ಜಿಲ್ಲಾಧಿಕಾರಿಗಳೂ ಇತ್ತೀಚಿನ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ಶೀಘ್ರವೇ ವರದಿ ಸಲ್ಲಿಸುವಂತೆ ಸರಕಾರ ಸೂಚನೆ ನೀಡಿದೆ.

Vijaya Karnataka 5 Jun 2018, 9:21 am
ಬೆಂಗಳೂರು : ಎಲ್ಲಾ ಜಿಲ್ಲಾಧಿಕಾರಿಗಳೂ ಇತ್ತೀಚಿನ ಮಳೆಯಿಂದ ಉಂಟಾದ ಬೆಳೆ ಹಾನಿ ಕುರಿತು ಶೀಘ್ರವೇ ವರದಿ ಸಲ್ಲಿಸುವಂತೆ ಸರಕಾರ ಸೂಚನೆ ನೀಡಿದೆ.
Vijaya Karnataka Web hdk


ಮುಂಗಾರು ಪೂರ್ವದಲ್ಲೇ ಮಳೆ ಆರ್ಭಟದಿಂದ ಕೆಲವೆಡೆ ಬೆಳೆಗಳು ನೆಲ ಕಚ್ಚಿದೆ. ಇದು ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ, ರೈತರಿಗೆ ತೊಂದರೆ ಆಗಿರುವ ಕುರಿತು ಮಾಹಿತಿ ಕೋರಲಾಗಿದೆ. ಈಗಿನ್ನೂ ಬಿತ್ತನೆ ಆರಂಭಗೊಂಡಿದ್ದು, ಜುಲೈ-ಆಗಸ್ಟ್‌ ವೇಳೆಗೆ ಬಹುತೇಕ ಪೂರ್ಣಗೊಳ್ಳಲಿದೆ. ಹಿಂದಿನ ಸಾಲಿನಲ್ಲಿ ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ಸಮಸ್ಯೆಯಾದ ಕಾರಣ ನಿಯಮಿತವಾಗಿ ನಷ್ಟದ ವರದಿಯನ್ನು ಸರಕಾರಕ್ಕೆ ಕಳುಹಿಸಲು ಡಿಸಿಗಳಿಗೆ ನಿರ್ದೇಶಿಸಲಾಗಿದೆ.

ಈ ಮಧ್ಯೆ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಒದಗಿಸುವಂತೆ ರೈತ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ. ಪ್ರತಿ ವರ್ಷ ಕೆಲ ಬೆಳೆಗಳು ಮಳೆಯಿಂದ ನೆಲ ಕಚ್ಚುತ್ತಿದ್ದರೂ, ಅಧಿಕಾರಿ ವರ್ಗ ಸಮರ್ಪಕ ಮಾಹಿತಿ ಸಂಗ್ರಹಿಸದೆ ಪರಿಹಾರ ವಿತರಣೆಗೆ ಅಡ್ಡಿಯಾಗಿದೆ. ಸರಕಾರ ಕೂಡ ಗಂಭೀರತೆ ಹೊಂದದ ಕಾರಣ ರೈತನಿಗೆ ನಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಆಯಾ ತಿಂಗಳಲ್ಲೇ ಬೆಳೆ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದಲ್ಲಿ ನಿಯಮದಂತೆ ಕೃಷಿಕರಿಗೆ ಪರಿಹಾರ ಪಡೆಯಲು ಸಾಧ್ಯವಾಗಲಿದೆ ಎಂಬ ಸಲಹೆ ರೈತ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಬೇಸಿಗೆ ಬೆಳೆಗೆ ಸಂಬಂಧಿಸಿದಂತೆ ಮಂಡ್ಯ, ದಾವಣಗೆರೆ ಸಹಿತ ಮೂರು ಜಿಲ್ಲೆಗಳಲ್ಲಿ 1987 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಈ ಪೈಕಿ ಹೆಚ್ಚು ಪ್ರಮಾಣದಲ್ಲಿ ಭತ್ತದ ಫಸಲು ನೆಲಕಚ್ಚಿದೆ. ಇದು ಸೇರಿದಂತೆ ಇತ್ತೀಚಿನ ಮಳೆಯಿಂದ ನಷ್ಟವಾಗಿರುವ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ವಿವರವಾದ ಮಾಹಿತಿ ಸಂಗ್ರಹಿಸುತ್ತಿದೆ. ಕೆಲ ದಿನಗಳ ಬಳಿಕ ಕ್ರೊಡೀಕೃತ ರೂಪದಲ್ಲಿ ಆಯಾ ಡಿಸಿಗಳು ಸರಕಾರಕ್ಕೆ ವಿವರವಾದ ವರದಿ ರವಾನಿಸಲಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ