Please enable javascript.Karnataka Elections,ವಿಐಪಿ ಕಣ: ರಾಮನಗರ ಕ್ಷೇತ್ರ ನೋಟ - ramanagara constituency - Vijay Karnataka

ವಿಐಪಿ ಕಣ: ರಾಮನಗರ ಕ್ಷೇತ್ರ ನೋಟ

Vijaya Karnataka 5 Apr 2018, 7:58 am
Subscribe

ಮೂವರು ಮುಖ್ಯಮಂತ್ರಿಗಳನ್ನು ನೀಡಿರುವ ರಾಮನಗರ ಕ್ಷೇತ್ರ ಮೈಸೂರು ರಾಜ್ಯದ ಕಾಲದಿಂದಲೂ ಅಸ್ತಿತ್ವದಲ್ಲಿದೆ.

ramanagar
ಇತಿಹಾಸ

ಮೂವರು ಮುಖ್ಯಮಂತ್ರಿಗಳನ್ನು ನೀಡಿರುವ ರಾಮನಗರ ಕ್ಷೇತ್ರ ಮೈಸೂರು ರಾಜ್ಯದ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಕೆಂಗಲ್‌ ಹನುಮಂತಯ್ಯ ಈ ಕ್ಷೇತ್ರದಿಂದ ಗೆದ್ದು ರಾಜ್ಯದ 2ನೇ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌, ಸಂಸ್ಥಾ ಕಾಂಗ್ರೆಸ್‌, ಜನತಾಪಕ್ಷ , ಜೆಡಿಎಸ್‌... ಹೀಗೆ ನಾನಾ ರಾಜಕೀಯ ಪಕ್ಷ ಗಳ ಅಭ್ಯರ್ಥಿಗಳು ಇಲ್ಲಿ ಆಯ್ಕೆಯಾಗಿದ್ದಾರೆ. ದೇವೇಗೌಡರ ಕುಟುಂಬ ರಾಮನಗರಕ್ಕೆ ಬಂದ ಮೇಲೆ ಜೆಡಿಎಸ್‌ ಹೆಚ್ಚು ಪ್ರಾಬಲ್ಯ ಹೊಂದಿದೆ. ಕೆಂಗಲ್‌ ಹನುಮಂತಯ್ಯ, ಮಾದಯ್ಯ ಗೌಡ ಧನಂಜಯ, ಬಿ ಪುಟ್ಟಸ್ವಾಮಯ್ಯ, ಅಬ್ದುಲ್‌ ಸಮದ್‌, ಸಿ ಬೋರಯ್ಯ, ಪುಟ್ಟಸ್ವಾಮಿಗೌಡ ಶಾಸಕರಾಗಿದ್ದ ಈ ಕ್ಷೇತ್ರ ಜೆಡಿಎಸ್‌ ಅನ್ನು ನೀರೆರೆದು ಪೋಷಿಸಿದ್ದು, ದೇವೇಗೌಡರು ಇಲ್ಲಿ ಸ್ಪರ್ಧೆಗೆ ನಿಂತ ಮೇಲೆಯೇ ಎನ್ನಬಹುದು. 1994ರಲ್ಲಿ ರಾಮನಗರದಿಂದ ಗೆದ್ದ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದರು. 2004ರ ಚುನಾವಣೆಯಲ್ಲಿ ಎಚ್‌ ಡಿ ಕುಮಾರಸ್ವಾಮಿ ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು ರಾಮನಗರದಿಂದ ಸ್ಪರ್ಧಿಸಿದ್ದರು. 2007ರಲ್ಲಿ ಕುಮಾರಸ್ವಾಮಿ ಆಯ್ಕೆಯಾಗಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಸಿಎಂ ಆಗಿದ್ದರು.

- ಮಹತ್ವ -

ಕರ್ನಾಟಕದ ರಾಜಕೀಯದಲ್ಲಿ ರಾಮನಗರ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದೆ. ರಾಜಧಾನಿ ಬೆಂಗಳೂರಿಗೆ ಸಮೀಪದ ಕ್ಷೇತ್ರವಾಗಿರುವುದರಿಂದ ಸಹಜವಾಗಿಯೇ ರಾಜಕೀಯ ಪಲ್ಲಟಗಳು ಇಲ್ಲೂ ಪ್ರಭಾವ ಬೀರುತ್ತವೆ. ಪ್ರತಿ ಚುನಾವಣೆಯಲ್ಲೂ ಈ ಕ್ಷೇತ್ರ ಹೆಚ್ಚು ಸದ್ದು ಮಾಡುತ್ತಲೇ ಇರುತ್ತದೆ. ಜೆಡಿಎಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಈ ಕ್ಷೇತ್ರದಿಂದ ಈ ಬಾರಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಂಬ ಮಾಹಿತಿ ಇದೆಯಾದರೂ ಅವರು ಚೆನ್ನಪಟ್ಟಣದಿಂದಲೂ ಕಣಕ್ಕಿಳಿಯಲಿದ್ದಾರೆಂಬ ಗುಸುಗುಸು ಇದೆ. ಒಂದೊಮ್ಮೆ ಈ ಚುನಾವಣೆ ಬಳಿಕ ಜೆಡಿಎಸ್‌ ಪ್ರಮುಖ ಪಾತ್ರ ನಿರ್ವಹಣೆಗೆ ಮುಂದಾದರೆ ಮತ್ತೆ ಈ ಕ್ಷೇತ್ರ ಹೆಚ್ಚು ಸುದ್ದಿಯಲ್ಲಿರಲಿದೆ.

- ಲೆಕ್ಕಾಚಾರ-

ಒಂದು ಅಂದಾಜಿನಂತೆ ರಾಮನಗರ ಕ್ಷೇತ್ರದಲ್ಲಿ 65000 ಒಕ್ಕಲಿಗ ಮತದಾರರಿದ್ದಾರೆ. 52000 ದಲಿತ, 40000 ಮುಸ್ಲಿಂ, 11000 ಲಿಂಗಾಯತ, 9000 ಕುರಬರು, 8000 ತಿಗಳ ಸಮುದಾಯದ ಮತದಾರರಿದ್ದಾರೆ. ಉಳಿದ ಮತಗಳು ಒಬಿಸಿಯ ಇತರ ಸಮುದಾಯಗಳಾದ ಆರ್ಯವೈಶ್ಯ, ಬ್ರಾಹ್ಮಣ ಇತ್ಯಾದಿಗಳಾಗಿವೆ. ಒಕ್ಕಲಿಗ ಹಾಗೂ ದಲಿತ ಮತದಾರರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅವರೇ ನಿರ್ಣಾಯಕ ಪಾತ್ರವಹಿಸುತ್ತಾರೆ. ದೇವೇಗೌಡರ ಕಾಲದಿಂದಲೂ ಒಕ್ಕಲಿಗರು ಜೆಡಿಎಸ್‌ಗೆ ಶಕ್ತಿ ತುಂಬಿದ್ದಾರೆ.
ವಿಐಪಿ ಕಣ: ರಾಮನಗರ ಕ್ಷೇತ್ರ ನೋಟ

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ