ಆ್ಯಪ್ನಗರ

ದೇಶದ ಹಿತ ದೃಷ್ಟಿಯಿಂದ ಬಿಜೆಪಿ ಜತೆ ಕೈಜೋಡಿಸಲು ಸಿದ್ಧ: ಕೆಸಿ ರಾಮಮೂರ್ತಿ

"ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಯ ಭಾಗವಾಗುವ ಆಶಯದಿಂದ ರಾಜೀನಾಮೆ ನೀಡಿದ್ದೇನೆ. ದೇಶದ ಹಿತ ದೃಷ್ಟಿಯಿಂದ ಬಿಜೆಪಿ ಜತೆ ಕೈಜೋಡಿಸಲು ಸಿದ್ಧನಿದ್ದೇನೆ," ಎಂಬುದಾಗಿ ಕೆಸಿ ರಾಮಮೂರ್ತಿ ಸ್ಪಷ್ಟಪಡಿಸಿದ್ದಾರೆ.

Vijaya Karnataka 16 Oct 2019, 8:59 pm
ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ರಾಜ್ಯಸಭಾ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಬಿಜೆಪಿ ಹಾಕಿರುವ 'ಆಪರೇಷನ್‌ ಕಮಲ'ದ ಗಾಳ, ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಕಾರ್ಯತಂತ್ರದ ಮುಂದುವರಿದ ಭಾಗ ಎನ್ನಲಾಗುತ್ತಿದೆ. ಈಗಾಗಲೇ ಹಲವಾರು ರಾಜ್ಯಗಳಲ್ಲಿನ ಕಾಂಗ್ರೆಸ್‌ನ ಹಲವು ರಾಜ್ಯಸಭೆ ಸದಸ್ಯರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.
Vijaya Karnataka Web KCRamamurthy


ವಿಧಾನಸಭೆ ಉಪ ಸಮರದ ಹೊಸ್ತಿಲಲ್ಲೇ ಈ ಬೆಳವಣಿಗೆ ಕಾಂಗ್ರೆಸ್‌ಗೆ ಆಘಾತ ತಂದಿದೆ. ರಾಜ್ಯಸಭೆ ಅಧ್ಯಕ್ಷರೂ ಆದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ರಾಮಮೂರ್ತಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನೂ ತೊರೆದಿದ್ದಾರೆ. ಕರ್ನಾಟಕ ವಿಧಾನಸಭೆಯಿಂದ ಜುಲೈ 2016ರಲ್ಲಿರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮಮೂರ್ತಿ ಅವರ ಸದಸ್ಯತ್ವದ ಅವಧಿ ಜೂನ್‌ 2022ರವರೆಗೆ ಇತ್ತು. ಕಾಂಗ್ರೆಸ್‌ ಪಕ್ಷವನ್ನು ತೊರೆದಿರುವ ರಾಮಮೂರ್ತಿ ಬಿಜೆಪಿಗೆ ಸೇರ್ಪಡೆಯಾಗಿ, ಆ ಪಕ್ಷದಿಂದ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆಗಳಿವೆ.

ಹಲವು ನಾಯಕರ ಮೇಲೆ ಐಟಿ ದಾಳಿ, ಜಾರಿ ನಿರ್ದೇಶನಾಲಯದ ಬಿಗಿ ಹಿಡಿತದ ಬೆಳವಣಿಗೆಗಳಿಂದ ಕಾಂಗ್ರೆಸ್‌ ಪಾಳಯ ಬೆದರಿರುವ ಬೆನ್ನಲ್ಲೇ, ರಾಮಮೂರ್ತಿ ಅವರ ಈ ದಿಢೀರ್‌ ನಿರ್ಧಾರ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಐಪಿಎಸ್‌ ಅಧಿಕಾರಿಯಾಗಿದ್ದ ಕೆಸಿ ರಾಮಮೂರ್ತಿ ಸ್ವಯಂ ನಿವೃತ್ತಿ ಪಡೆದು ರಾಜಕಾರಣ ಪ್ರವೇಶಿಸಿದ್ದರು. ಸಿಎಂಆರ್‌ ಶಿಕ್ಷಣ ಸಮೂಹದ ಮುಖ್ಯಸ್ಥರೂ ಆದ ಅವರು ಕಾಂಗ್ರೆಸ್‌ ಸೇರಿ 2016ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಚುನಾವಣೆ ಸಂದರ್ಭದಲ್ಲಿ ಚಲುವರಾಯಸ್ವಾಮಿ, ಜಮೀರ್‌ ಅಹ್ಮದ್‌ ನೇತೃತ್ವದಲ್ಲಿ ಜೆಡಿಎಸ್‌ನ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದರು. ಕೆ.ಆರ್‌. ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯರಾದ ತಮ್ಮನ್ನು ಪರಿಗಣಿಸಿಲ್ಲ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ನಿರ್ಲಕ್ಷಿಸಿದ್ದರಿಂದ ಬೇಸತ್ತು ರಾಮಮೂರ್ತಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

''ನಾನು ಬಿಜೆಪಿಯ ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ತರಾತುರಿಯಲ್ಲಿಯೂ ಈ ನಿರ್ಧಾರ ಕೈಗೊಂಡಿಲ್ಲ. ಹಲವು ದಿನಗಳಿಂದ ಈ ಬಗ್ಗೆ ಯೋಚಿಸಿದ್ದೆ. ಕಾಂಗ್ರೆಸ್‌ ಮುಖಂಡರ ಬಳಿಯೂ ಈ ಕುರಿತು ಚರ್ಚೆ ನಡೆಸಿದ್ದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಅನುಭವವನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ಬಿಜೆಪಿ ಸೇರಲು ಸಿದ್ಧನಿದ್ದೇನೆ,'' ಎಂದು ರಾಮಮೂರ್ತಿ ಹೇಳಿದ್ದಾರೆ.

"ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಯ ಭಾಗವಾಗುವ ಆಶಯದಿಂದ ರಾಜೀನಾಮೆ ನೀಡಿದ್ದೇನೆ. ದೇಶದ ಹಿತ ದೃಷ್ಟಿಯಿಂದ ಬಿಜೆಪಿ ಜತೆ ಕೈಜೋಡಿಸಲು ಸಿದ್ಧನಿದ್ದೇನೆ," ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಇದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಳ್ಳಿ ಹಾಕಿದ್ದಾರೆ. "ಪ್ರತಿಪಕ್ಷ ನಾಯಕರಲ್ಲಿ ಭೀತಿ ಸೃಷ್ಟಿಸಿ ಪಕ್ಷ ತೊರೆಯುವಂತಹ ವಾತಾವರಣವನ್ನು ದೇಶದಲ್ಲಿ ಬಿಜೆಪಿ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ ನಾಯಕರನ್ನು ಬೆದರಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದನ್ನೇ ಬಿಜೆಪಿ ವ್ಯವಹಾರವಾಗಿ ಮಾಡಿಕೊಂಡು ಬಿಟ್ಟಿದೆ. ಕೆ.ಸಿ. ರಾಮಮೂರ್ತಿ ಪ್ರಕರಣವೂ ಇದರ ಒಂದು ಭಾಗ ಅಷ್ಟೆ," ಎಂಬುದಾಗಿ ಅವರು ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ