ಆ್ಯಪ್ನಗರ

ಅನರ್ಹತೆ: ಹೊರ ಬಂದ ದೋಸ್ತಿ ಕೊನೆ ಅಸ್ತ್ರ

ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ದೋಸ್ತಿ ನಾಯಕರು ರಾಜೀನಾಮೆ ಸಲ್ಲಿಸಿರುವ ಅತೃಪ್ತ ...

Vijaya Karnataka 12 Jul 2019, 5:00 am
ಬೆಂಗಳೂರು: ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ದೋಸ್ತಿ ನಾಯಕರು ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ ಮುಂದೆ ವಾದ ಮಂಡಿಸಿದ್ದಾರೆ.
Vijaya Karnataka Web 1107-2-2-03 (10)


ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ, ಗೃಹ ಸಚಿವ ಎಂ.ಬಿ.ಪಾಟೀಲ್‌ ಸೇರಿ ಕಾಂಗ್ರೆಸ್‌ ನಾಯಕರು ಸ್ಪೀಕರ್‌ ಅವರನ್ನು ಗುರುವಾರ ಮಧ್ಯಾಹ್ನ ಭೇಟಿಯಾಗಿ ಚರ್ಚಿಸಿದರು. ಈ ವೇಳೆ ವಕೀಲರೂ ಆಗಿರುವ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಕರಿಕೋಟು ಧರಿಸಿ ಸ್ಪೀಕರ್‌ ಕೊಠಡಿ ಪ್ರವೇಶಿಸಿದ್ದರು. ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಠಳ್ಳಿ ವಿರುದ್ಧ ಈ ಮೊದಲು ನೀಡಿದ್ದ ದೂರನ್ನು ಪುನರ್‌ ಪರಿಶೀಲಿಸಬೇಕು. ಈ ಇಬ್ಬರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ದೋಸ್ತಿಗಳ ಹೊಸ ಅಸ್ತ್ರ!
ಈ ಬಾರಿ ರಾಜೀನಾಮೆ ಸಲ್ಲಿಸಿದವರಲ್ಲಿ ಐವರ ಪತ್ರ ಕ್ರಮಬದ್ಧವಾಗಿದೆ. ಇನ್ನು 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಲ್ಲವೆಂದು ಸ್ಪೀಕರ್‌ ತಿಳಿಸಿದ್ದರು. ಇದಾದ ಬಳಿಕ ಹಳೆಯ ರಾಜೀನಾಮೆ ಪತ್ರ ವಾಪಸ್‌ ಪಡೆದ ಈ ಶಾಸಕರು ಹೊಸ ಪತ್ರ ನೀಡಿದ್ದಾರೆ. ಇ-ಮೇಲ್‌ ಮೂಲಕ ಈ ಪ್ರಕ್ರಿಯೆ ನಡೆಸಲಾಗಿದೆ. 8 ಶಾಸಕರು 2ನೇ ಪತ್ರ ನೀಡುವುದಕ್ಕೆ ಮೊದಲು ಸಿಎಲ್‌ಪಿ ಸಭೆ ನಡೆಸಿ ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಂತೆ ಕ್ರಮ ಜರುಗಿಸಲು ದೂರು ನೀಡಲಾಗಿದೆ. ಇದರ ಆಧಾರದಲ್ಲಿ ಅನರ್ಹತೆಗೊಳಿಸುವಂತೆ ಸ್ಪೀಕರ್‌ ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು ಎಂದು ಗೊತ್ತಾಗಿದೆ.

ವಿಪ್‌ ಅಸ್ತ್ರ
ಕಾಂಗ್ರೆಸ್‌ನ 8 ಶಾಸಕರು 2ನೇ ರಾಜೀನಾಮೆ ಪತ್ರ ನೀಡುವುದಕ್ಕಿಂತ ಮುನ್ನವೇ ಇವರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ ಅವರಿಗೆ ದೂರು ಸಲ್ಲಿಸಿದ್ದನ್ನು ಮತ್ತೊಂದು ಬಿಗಿ ಅಸ್ತ್ರವಾಗಿ ಮಾಡಿಕೊಳ್ಳುವುದೂ ಕಾಂಗ್ರೆಸ್‌ ಯೋಚನೆ. ಅನರ್ಹತೆ ಪ್ರಕರಣದ ವಿಚಾರಣೆ ಬಾಕಿಯಿರುವುದರಿಂದ ಇವರು ಈಗಲೂ ಕಾಂಗ್ರೆಸ್‌ ಶಾಸಕರೆನ್ನಿಸಿಕೊಳ್ಳುತ್ತಾರೆ. ಹಾಗಾಗಿ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಇವರಿಗೆ ವಿಪ್‌ ಜಾರಿಗೊಳಿಸಿ ಇಕ್ಕಟ್ಟಿನಲ್ಲಿ ಸಿಲುಕಿಸಲಾಗುತ್ತದೆ. ವಿಪ್‌ ಬಲೆಗೆ ಬಿದ್ದ ಈ ಶಾಸಕರು ಹಣಕಾಸು ವಿಧೇಯಕ ಪಾಸಾಗುವಾಗ ಅಥವಾ ವಿಶ್ವಾಸಮತ ಸಾಬೀತಾಗುವಾಗ ಆಡಳಿತ ಪಕ್ಷದ ಪರವಾಗಿ ಮತ ಚಲಾಯಿಸಬೇಕಾಗುತ್ತದೆ. ಅತೃಪ್ತರು ಹಾಗೆ ನಡೆದುಕೊಂಡರೆ ಸರಕಾರ ಬಚಾವಾಗುತ್ತದೆ. ಇಲ್ಲದಿದ್ದರೆ ಅನರ್ಹತೆ ಪ್ರಕರಣ ಜೀವಂತವಾಗಿಟ್ಟು ಆಟವಾಡಿಸಬಹುದು ಎನ್ನುವುದು ಕೈನಾಯಕರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.

ವಿಪ್‌ ಜಾರಿ
ಈ ಮಧ್ಯೆ ಜುಲೈ 12 ರಿಂದ 26ರ ವರೆಗೆ ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ಕಾಂಗ್ರೆಸ್‌ನ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗಿ, ಸರಕಾರದ ಪರವಾಗಿ ಮತ ಚಲಾಯಿಸುವಂತೆ ವಿಪ್‌ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ