ಆ್ಯಪ್ನಗರ

ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಕುಮಾರಸ್ವಾಮಿ ಸಿನಿಮಾ ವ್ಯಕ್ತಿ ಎಂದು ಬಿಎಸ್‌ವೈ ತಿರುಗೇಟು

'ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಸಿನಿಮಾ ವ್ಯಕ್ತಿ ಅವರು ಏನನ್ನು ಬೇಕಾದರೂ 'ಪ್ರೊಡ್ಯೂಸ್‌' ಮಾಡಬಲ್ಲರು...

Vijaya Karnataka 9 Feb 2019, 5:00 am
ಬೆಂಗಳೂರು: 'ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಸಿನಿಮಾ ವ್ಯಕ್ತಿ. ಅವರು ಏನನ್ನು ಬೇಕಾದರೂ 'ಪ್ರೊಡ್ಯೂಸ್‌' ಮಾಡಬಲ್ಲರು. ನನ್ನ ವಿರುದ್ಧ ಅವರು ಮಾಡಿರುವ ಆರೋಪ ಸಾಬೀತಾದರೆ 24 ಗಂಟೆಯೊಳಗೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ' ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
Vijaya Karnataka Web bsy


ಆಪರೇಷನ್‌ ಕಮಲಕ್ಕೆ ಸಂಬಂಧಪಟ್ಟ ಸಿಡಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ''ಸಿಡಿಯಲ್ಲಿರುವುದು ನನ್ನ ಧ್ವನಿಯಲ್ಲ. ಕುಮಾರಸ್ವಾಮಿ ಇದನ್ನು ಸೃಷ್ಟಿ ಮಾಡಿದ್ದಾರೆ. ಅವರ ಈ ಪ್ರಯತ್ನದಿಂದ ಪ್ರತಿಪಕ್ಷ ನಾಯಕರ ದೂರವಾಣಿ ಕರೆಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಶರಣಗೌಡ ಜತೆಗೆ ನಾನಾಗಲಿ, ನಮ್ಮ ಪಕ್ಷದ ಶಾಸಕರಾಗಲಿ ಮಾತನಾಡಿರುವುದು ಸತ್ಯಕ್ಕೆ ದೂರವಾದ ಕಟ್ಟುಕತೆ,'' ಎಂದು ಆರೋಪಿಸಿದರು.

''ನಿಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದರೆ ಅದಕ್ಕೆ ನನ್ನನ್ನು ಏಕೆ ಹೊಣೆ ಮಾಡುತ್ತೀರಿ ? ಖುದ್ದು ನೀವೇ ನಮ್ಮ ಪಕ್ಷದ ಶಾಸಕರಾದ ಸುಭಾಷ್‌ ಗುತ್ತೇದಾರ್‌ ಅವರಿಗೆ ಮಂತ್ರಿಗಿರಿ ಆಮಿಷ ನೀಡಿ ಜೆಡಿಎಸ್‌ಗೆ ಆಹ್ವಾನಿಸಿದ್ದು ಸುಳ್ಳೇ ? ನಿಮ್ಮ ಸಚಿವರಾದ ಪುಟ್ಟರಾಜು ಹಾಗೂ ಸಾ.ರಾ.ಮಹೇಶ್‌ ಅವರು ಬಿಜೆಪಿಯ ನಾಲ್ವರು ಶಾಸಕರು ನಮ್ಮ ಜತೆಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನೀವೇ ಶಾಸಕರ ಖರೀದಿಗೆ ಯತ್ನಿಸುತ್ತಿದ್ದೀರಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ,'' ಎಂದು ಪ್ರಶ್ನಿಸಿದರು.

''ಗಣಿದಣಿ ಬಲ್ದೋಟ ಅವರ ಹಣ ಬಲದಿಂದ ಈ ಹಿಂದೆ ನಮ್ಮ ಸರಕಾರ ಇದ್ದಾಗ 16 ಜನ ಶಾಸಕರ ಜತೆಗೆ ಗೋವಾ ರೆಸಾರ್ಟ್‌ಗೆ ಹೋಗಿದ್ದನ್ನು ನೀವು ಮರೆತಂತೆ ಕಾಣುತ್ತದೆ. ಒಂದು ಪಕ್ಷದ ಶಾಸಕರನ್ನು ಗುಂಪಾಗಿ ಸೆಳೆದು ಸರಕಾರವನ್ನು ಅಸ್ಥಿರಗೊಳಿಸುವ ಪರಂಪರೆಯನ್ನು ಆರಂಭಿಸಿದ್ದೇ ನೀವು. ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮಗೆ ಶಾಸಕರ ಬೆಂಬಲವಿಲ್ಲ. ನಾವು 104 ಶಾಸಕರು ಮಾತ್ರ ಇದ್ದೇವೆ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. 15ಕ್ಕೂ ಹೆಚ್ಚು ಶಾಸಕರು ಬಜೆಟ್‌ ಅಧಿವೇಶನಕ್ಕೆ ಗೈರಾಗಲಿದ್ದು, ಆ ನಂತರ ಏನು ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ,'' ಎಂದು ಹೇಳಿದರು.

ಸ್ಪೀಕರ್‌ಗೆ ಅವಮಾನ

''ಸಿಡಿ ಬಿಡುಗಡೆ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ಪೀಕರ್‌ ಘನತೆ ಕುಂದಿಸಿದ್ದಾರೆ. ನಾನು ಸ್ಪೀಕರ್‌ಗೆ ಹಣದ ಆಮಿಷ ನೀಡಿ ಅವರನ್ನು ಸುಮ್ಮನಾಗಿಸಿದ್ದೇನೆ ಎಂದು ಆರೋಪಿಸುವ ಮೂಲಕ ಸ್ಪೀಕರ್‌ ಘನತೆಯನ್ನು ಕುಂದಿಸಿದ್ದಾರೆ. ಅದೇ ರೀತಿ ಜಡ್ಜ್‌ಗಳನ್ನು ಅಮಿತ್‌ ಶಾ ಮ್ಯಾನೇಜ್‌ ಮಾಡುತ್ತಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇಂಥ ಸುಳ್ಳು ಆರೋಪ ಮಾಡುವ ಬೇಜವಾಬ್ದಾರಿ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ. ನನ್ನ ವಿರುದ್ಧ ಮಾಡಿರುವ ಈ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆಗೆ ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ' ಎಂದು ಸವಾಲು ಹಾಕಿದರು. ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಮಾಧುಸ್ವಾಮಿ, ಶಿವನಗೌಡ ನಾಯಕ್‌, ಸುಭಾಷ್‌ ಗುತ್ತೇದಾರ್‌, ರೇಣುಕಾಚಾರ್ಯ ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ