ಆ್ಯಪ್ನಗರ

ರೋಹಿಣಿ ಸಿಂಧೂರಿ ವರ್ಗಾವಣೆ: ಸರಕಾರದ ನಿಲುವು ಕೇಳಿದ ಹೈಕೋರ್ಟ್‌

ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಸರಕಾರದ ನಿಲುವೇನು ಎಂದು ಹೈಕೋರ್ಟ್‌ ಕೇಳಿದೆ...

Vijaya Karnataka 21 Jun 2018, 5:00 am
ಬೆಂಗಳೂರು: ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಸರಕಾರದ ನಿಲುವೇನು ಎಂದು ಹೈಕೋರ್ಟ್‌ ಕೇಳಿದೆ.
Vijaya Karnataka Web highcourt enterncy


ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಏ.17ರಂದು ನೀಡಿದ್ದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಎಚ್‌.ಜಿ.ರಮೇಶ್‌ ಹಾಗೂ ನ್ಯಾ.ಪಿ.ಎಂ.ನವಾಜ್‌ ನೇತೃತ್ವದ ವಿಭಾಗೀಯಪೀಠ ಬುಧವಾರ ವಿಚಾರಣೆ ಕೈಗೆತ್ತಿಕೊಂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ನಾಗಪ್ರಸನ್ನ ''ಮಾ.7ರಂದು ರಾಜ್ಯ ಸರಕಾರ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅರ್ಜಿದಾರರನ್ನು ವರ್ಗಾಯಿಸಿದ್ದ ಆದೇಶಕ್ಕೆ ಮಧ್ಯಾಂತರ ತಡೆ ನೀಡಬೇಕು, ಆ ಮೂಲಕ ಅವರು ಮತ್ತೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಸಲ್ಲಿಸಿರುವ ಮಧ್ಯಾಂತರ ಅರ್ಜಿ ಮಾನ್ಯ ಮಾಡಬೇಕು''ಎಂದು ಕೋರಿದರು.

ನ್ಯಾಯಪೀಠ,'' ವರ್ಗಾವಣೆ ವಿಚಾರದಲ್ಲಿ ಹೊಸ ಸರಕಾರದ ನಿಲುವು ಏನು? ಅರ್ಜಿದಾರರು ಹೇಳಿರುವಂತೆ ಸರಕಾರ ಅವರನ್ನು ಮತ್ತೆ ಹಾಸನಕ್ಕೆ ವರ್ಗಾವಣೆ ಮಾಡಿದರೆ ಅರ್ಜಿದಾರರ ಮನವಿ ಈಡೇರಿದಂತಾಗುತ್ತದೆ''ಎಂದು ಹೇಳಿತು. ಗುರುವಾರವೇ ಸರಕಾರದ ನಿಲುವಿನ ಬಗ್ಗೆ ಮಾಹಿತಿ ಪಡೆದು ಸಲ್ಲಿಸುವಂತೆ ಸರಕಾರಿ ವಕೀಲರಿಗೆ ಕೋರ್ಟ್‌ ಸೂಚನೆ ನೀಡಿತು.ಆದರೆ ಅವರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೋಮವಾರಕ್ಕೆ(ಜೂ.25)ಕ್ಕೆ ಮುಂದೂಡಿತು.

ಮಾ.7ರಂದು ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ತಮ್ಮನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಲಾಗಿದೆ, ತಮ್ಮ ಅವಧಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಬೇಕಿತ್ತು, ಎಂಟು ತಿಂಗಳಿಗೆ ಅಲ್ಲಿಂದ ವರ್ಗಾವಣೆ ಮಾಡಿರುವುದು ನಿಯಮ ಬಾಹಿರ ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ