ಆ್ಯಪ್ನಗರ

ಜೆಡಿಎಸ್‌ ಸಭೆಯಿಂದ ಸಂದೇಶ್‌ ನಾಗರಾಜ್‌ ಹೊರಕ್ಕೆ

ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟ ಮೇಲ್ಮನೆ ಸದಸ್ಯ ಸಂದೇಶ್‌ ನಾಗರಾಜ್‌ ಅವರು ಆಹ್ವಾನ ಇಲ್ಲದೆಯೂ ಶಾಸಕಾಂಗ ಪಕ್ಷದ ಸಭೆಗೆ ಬಂದು ಸಹೋದ್ಯೋಗಿಗಳ ಆಕ್ರೋಶಕ್ಕೆ ಗುರಿಯಾಗಿ ಮುಜುಗರದಿಂದಲೇ ಹೊರನಡೆದ ಪ್ರಸಂಗ ಗುರುವಾರ ನಡೆಯಿತು.

Vijaya Karnataka 13 Jul 2018, 9:38 am
ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟ ಮೇಲ್ಮನೆ ಸದಸ್ಯ ಸಂದೇಶ್‌ ನಾಗರಾಜ್‌ ಅವರು ಆಹ್ವಾನ ಇಲ್ಲದೆಯೂ ಶಾಸಕಾಂಗ ಪಕ್ಷದ ಸಭೆಗೆ ಬಂದು ಸಹೋದ್ಯೋಗಿಗಳ ಆಕ್ರೋಶಕ್ಕೆ ಗುರಿಯಾಗಿ ಮುಜುಗರದಿಂದಲೇ ಹೊರನಡೆದ ಪ್ರಸಂಗ ಗುರುವಾರ ನಡೆಯಿತು.
Vijaya Karnataka Web nagaraj


ವಿಧಾನಸೌಧದಲ್ಲಿ ಬೆಳಗ್ಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಘಟನೆ ನಡೆಯಿತು. ಸಭೆಯಲ್ಲಿ ಸಂದೇಶ್‌ ನಾಗರಾಜ್‌ ಉಪಸ್ಥಿತಿಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಮೊದಲಿಗೆ ಆಕ್ಷೇಪಿಸಿದರು. ''ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ ಇಂಥವರನ್ನು ಏಕೆ ಕರೆದಿದ್ದೀರಿ?'' ಎಂದು ಅವರು ಸಿಎಂ ಉಪಸ್ಥಿತಿಯಲ್ಲೇ ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಸಾ.ರಾ.ಮಹೇಶ್‌ ಆಕ್ಷೇಪಕ್ಕೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರೂ ಧ್ವನಿಗೂಡಿಸಿ ''ಇಂಥವರಿಂದ ಪಕ್ಷಕ್ಕೆ ಧಕ್ಕೆಯಾಗಿದೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದವರಿಗೆ ಈಗ ಇಲ್ಲೇನು ಕೆಲಸ'' ಎಂದು ಖಾರವಾಗಿ ಪ್ರಶ್ನಿಸಿದರು. ಸದಸ್ಯರ ಆಕ್ಷೇಪದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ''ನಾವ್ಯಾರೂ ಕರೆದಿಲ್ಲ. ಆಹ್ವಾನ ಇಲ್ಲದೆಯೂ ಬಂದಿದ್ದಾರೆ'' ಎಂದು ಸ್ಪಷ್ಟಪಡಿಸಿದರು. ಪಕ್ಷದ ವಿರುದ್ಧ ಕೆಲಸ ಮಾಡಿರುವ ಸಂದೇಶ್‌ ನಾಗರಾಜ್‌ ಅವರನ್ನು ಜೆಡಿಎಸ್‌ನಿಂದ ಕೂಡಲೇ ಉಚ್ಛಾಟನೆ ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಇದರಿಂದ ಮುಜುಗರಕ್ಕೆ ಒಳಗಾದ ಸಂದೇಶ್‌ ನಾಗರಾಜ್‌ ಹೊರನಡೆದರು.

ಅಧಿವೇಶನ ಅಂತ್ಯದಲ್ಲಿ ಸಭೆ

ಅಧಿವೇಶನ ಆರಂಭದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುವುದು ಸಾಮಾನ್ಯ. ಆದರೆ, ಅಧಿವೇಶನದ ಕೊನೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅನ್ನಭಾಗ್ಯ ಅಕ್ಕಿ ಕಡಿತ ಮತ್ತಿತರ ಬಜೆಟ್‌ ತೀರ್ಮಾನಗಳ ಅಗತ್ಯವಿರಲಿಲ್ಲ. ಈ ನಿರ್ಧಾರ ಕೈಬಿಡಬೇಕು ಎಂದು ಬಹಳಷ್ಟು ಶಾಸಕರು ಸಿಎಂಗೆ ಸಲಹೆ ಮಾಡಿದರು. ಜತೆಗೆ, ಸಾಲ ಮನ್ನಾ ವ್ಯಾಪ್ತಿ ವಿಸ್ತರಣೆ ಕುರಿತಂತೆ ಕುಮಾರಸ್ವಾಮಿ ಅವರು ಪಕ್ಷದ ಸಹೋದ್ಯೋಗಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ