ಆ್ಯಪ್ನಗರ

ಕೋವಿಡ್‌ ಭಯ: ಶಾಲೆ ಪುನರಾರಂಭ ಗೊಂದಲ, ತಜ್ಞರು, ಪೋಷಕರ ಅಭಿಪ್ರಾಯವೇನು?

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶಾಲೆ ಆರಂಭ ಮಾಡಬೇಕೋ ಬೇಡವೋ ಎಂಬ ಚರ್ಚೆ ತೀವ್ರಗೊಳ್ಳುತ್ತಿದೆ. ಈ ಬಗ್ಗೆ ತಜ್ಞರು ಹಾಗೂ ಪೋಷಕರು ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ?

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 8 Oct 2020, 10:34 am
ಬೆಂಗಳೂರು: ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭ ಮಾಡಬೇಕೋ ಅಥವಾ ಬೇಡವೋ ಎಂಬುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆ ಆರಂಭ ಮಾಡುವುದು ಬೇಡ ಎಂದು ಪೋಷಕರು ಹೇಳುತ್ತಿದ್ದಾರೆ. ಶಾಲೆ ಆರಂಭದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡರೂ ಮಕ್ಕಳ ಸುರಕ್ಷತೆ, ಆರೋಗ್ಯದ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಸರ್ಕಾರ ಹೇಳುತ್ತಿದೆ. ಈ ಬಗ್ಗೆ ಆರೋಗ್ಯ ತಜ್ಞರು ಹಾಗೂ ಶಿಕ್ಷಣ ತಜ್ಞರು ಜೊತೆಗೆ ಪೋಷಕರು ಏನು ಹೇಳುತ್ತಾರೆ ಎಂಬ ವಿವರ ಇಲ್ಲಿದೆ.
Vijaya Karnataka Web School


ಶಾಲೆ ಆರಂಭದ ಬಗ್ಗೆ ಪೋಷಕರ ಅಭಿಪ್ರಾಯವೇನು?

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸದ್ಯ ಶಾಲೆಯನ್ನು ಆರಂಭಿಸುವುದು ಬೇಡ ಎಂಬುವುದು ಬಹುತೇಕ ಪೋಷಕರ ಅಭಿಪ್ರಾಯವಾಗಿದೆ. “ಸಣ್ಣ ಮಕ್ಕಳಿಗೆ ಶಾಲೆಗಳಲ್ಲಿ ಶುಚಿತ್ವ ಕಾಪಾಡಲು ಸಾಧ್ಯವಿಲ್ಲ. ಸರ್ಕಾರ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಿದರೂ ಶಾಲೆಯಲ್ಲಿ ಇದರ ಪಾಲನೆ ಸಾಧ್ಯವೇ?ಅಲ್ಲದೆ, ಮಕ್ಕಳ ಚಟುವಟಿಕೆಗಳನ್ನು ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಗಮನಿಸಲು ಕೂಡಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸದ್ಯ ಪ್ರಾಥಮಿಕ ಶಾಲೆ ಆರಂಭ ಮಾಡುವುದು ಬೇಡ. ಒಂದು ವೇಳೆ ಆರಂಭಿಸಿದರೂ ಹೈಸ್ಕೂಲ್ ಮಕ್ಕಳಿಗೆ ಮೊದಲು ಆರಂಭಿಸಲಿ” ಎನ್ನುತ್ತಾರೆ ಪೋಷಕರಾದ ನೂರ್‌ ಜಹಾನ್‌ ಖಾನ್.

ಶಾಲೆ ಪುನರಾರಂಭ: ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸುರಕ್ಷತೆ ಸರ್ಕಾರದ ಆದ್ಯತೆ ಎಂದ್ರು ಶ್ರೀರಾಮುಲು

ಮತ್ತೋರ್ವ ಪೋಷಕರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. “ಸದ್ಯದ ವಾತಾವರಣದಲ್ಲಿ ಸಣ್ಣ ಮಕ್ಕಳನ್ನು ಶಾಲೆಗೆ ಕಳಿಸುವುದು ಪೋಷಕರಾಗಿ ನಮಲ್ಲಿ ಭಯ ಮೂಡುತ್ತಿದೆ. ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ, ಒಂದಿಷ್ಟು ತಿಂಗಳುಗಳ ಕಾಲ ಇದು ಮುಂದುವರಿಯಲಿ. ಪರಿಸ್ಥಿತಿ ನೋಡಿ ನಂತರ ಸರ್ಕಾರ ಶಾಲೆ ಆರಂಭದ ಕುರಿತಾಗಿ ಸರ್ಕಾರ ಚಿಂತಿಸಲಿ” ಎನ್ನುತ್ತಾರೆ ಪ್ರತಿಮಾ ರಮೇಶ್.

ಇದು ಪೋಷಕರ ಅಭಿಪ್ರಾಯವಾದರೆ ತಜ್ಞರು ಇದಕ್ಕೆ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಶಾಲೆ ಆರಂಭ ಮಾಡುವುದು ಒಳಿತು ಎಂದರೆ ಮತ್ತೆ ಕೆಲವರು ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯವೂ ಇವೆ.

ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ ಏನು?

ಕೆಲವೊಂದು ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭ ಮಾಡುವುದು ಒಳಿತು ಎನ್ನುತ್ತಾರೆ ಶಿಕ್ಷಣ ತಜ್ಞ ಶ್ರೀಪಾದ್ ಭಟ್. ವಿಜಯ ಕರ್ನಾಟಕ ವೆಬ್ ಜೊತೆಗೆ ಮಾತನಾಡಿದ ಅವರು, “ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ವಿನ್ಯಾಸ ಬದಲಿಸಿ ಪ್ರತಿ ದಿನ ಎರಡು ಬಾರಿ ಸ್ಯಾನಿಟೈಜ್‌ ಮಾಡಿ ಹಾಗೂ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಯನ್ನು ಪುನರಾರಂಭ ಮಾಡಬೇಕು. ವೈದ್ಯಕೀಯ ಅಂಕಿ ಅಂಶಗಳನ್ನು ಗಮನಿಸಿದರೆ ಸಣ್ಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಅವರಿಗೆ ಕೋವಿಡ್‌ ನಿಂದ ಸಮಸ್ಯೆ ಆಗಿರುವುದು ವಿರಳಾತಿವಿರಳ. ಈ ನಿಟ್ಟಿನಲ್ಲಿ ಆತಂಕದಲ್ಲಿರುವ ಪೋಷಕರಿಗೆ ಸರ್ಕಾರ ಮನವರಿಕೆ ಮಾಡಬೇಕು. ಮಕ್ಕಳಿಗೆ ಸೂಕ್ತ ಪೌಷ್ಠಿಕಾಂಶದ ಆಹಾರವನ್ನು ನೀಡಿ ಶಾಲೆಗಳನ್ನು ಮತ್ತೆ ಆರಂಭಿಸಬೇಕು” ಎನ್ನುತ್ತಾರೆ.

ಶಾಲೆಗಳು ಮುಚ್ಚಿರುವುದರಿಂದ ಹಲವು ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸಲಾಗುತ್ತಿದೆ. ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರೀಪಾದ್ ಭಟ್.

ಶಾಲೆ ಪುನರಾರಂಭಕ್ಕೆ ಸರ್ಕಾರ ತಯಾರಿ: ಆತುರ ಏಕೆ ಎಂದು ಕಾಂಗ್ರೆಸ್ ಪ್ರಶ್ನೆ

“ ದೇಶಾದ್ಯಂತ ಲಾಕ್‌ಡೌನ್ ಮಾಡಿ ಶಾಲೆ ಮುಚ್ಚಿದ ಸಂದರ್ಭದಲ್ಲಿ 564 ಕೋವಿಡ್‌ ಪ್ರಕರಣಗಳು ಇದ್ದವು. ಆರು ತಿಂಗಳಲ್ಲಿ ಪ್ರಕರಣದ ಸಂಖ್ಯೆ 65 ಲಕ್ಷಕ್ಕೆ ಏರಿಕೆಯಾಗಿದೆ. ಕೋವಿಡ್‌ನಿಂದಾದ ಸಾವಿನ ಸಂಖ್ಯೆ 10 ಇದ್ದದ್ದು ಇದೀಗ 1 ಲಕ್ಷ ದಾಟಿದೆ. ಅಂತರಾಷ್ಟ್ರೀಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 65 ಲಕ್ಷ ಕೋವಿಡ್‌ ಪ್ರಕರಣಗಳ ಪೈಕಿ 14 ವರ್ಷದೊಳಗಿನ ಮಕ್ಕಳಿಗೆ ಇದರಿಂದ ಗಣನೀಯವಾದ ಉಂಟಾಗುವುದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗಿರುವ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ನಡೆಸಲಾಗಿರುವ ಅಧ್ಯಯನದ ಪ್ರಕಾರ ಕೋವಿಡ್‌ನಿಂದ ಮಕ್ಕಳಿಗೆ ಯಾವುದೇ ಸಮಸ್ಯೆ ಇಲ್ಲ. ಅನುವಂಶೀಯ ಕಾಯಿಲೆ ಇದ್ದ ಮಕ್ಕಳಿಗಷ್ಟೇ ಸಮಸ್ಯೆ ಆಗಿದ್ದು ಅದರಲ್ಲೂ ಸಾವಿನ ಪ್ರಮಾಣ ತೀರ ಕಡಿಮೆ. ಹೀಗಿರುವಾಗ ಶಾಲೆ ಪುನರಾರಂಭ ಏಕೆ ಮಾಡಬಾರದು” ಎಂದು ಪ್ರಶ್ನಿಸುತ್ತಾರೆ ಆರೋಗ್ಯ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ

ಶಾಲೆ ಮುಚ್ಚಿರುವುದರಿಂದ ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ಪರಿಣಾಮಗಳು ಗೋಚರಿಸಿಕೊಳ್ಳುತ್ತಿವೆ. ಇದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದೇಶದ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಬೇಕು. ಕೋವಿಡ್‌ನಿಂದ ಅಪಾಯವಿರುವ ವಯಸ್ಕರಿಗೆ ಸಾರ್ವಜನಿಕವಾಗಿ ತಿರುಗಾಡಲು ಅವಕಾಶ ನೀಡಿ ಸಣ್ಣ ಮಕ್ಕಳಿಗೆ ಈ ರೀತಿಯ ಬಂಧನ ಏಕೆ ಎಂದು ಪ್ರಶ್ನಿಸುತ್ತಾರೆ ಡಾ. ಕಕ್ಕಿಲ್ಲಾಯ

ಈ ನಿಟ್ಟಿನಲ್ಲಿ ಸರ್ಕಾರ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕಾಗಿದೆ. ಪೋಷಕರ ಆತಂಕ ದೂರಮಾಡುವ ನಿಟ್ಟಿನಲ್ಲಿ ಅವರಿಗೆ ವಾಸ್ತವ ಸ್ಥಿತಿಗತಿಗಳ ಕುರಿತಾಗಿ ಮನವರಿಕೆ ಮಾಡಬೇಕಾಗಿದೆ. ವೈಜ್ಞಾನಿಕ ಅಂಕಿಅಂಶಗಳನ್ನು ಆಧರಿಸಿ ಶಾಲೆ ಆರಂಭ ಮಾಡಬೇಕೋ ಬೇಡವೋ ಎಂಬುವುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ