ಆ್ಯಪ್ನಗರ

ರೈತರಿಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜ ವಿತರಣೆ

ಮುಂದಿನ ಸಾಲಿನಿಂದ ರೈತರಿಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

Vijaya Karnataka 26 Sep 2017, 5:00 am

ರೈತರಿಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜ ವಿತರಣೆ (ಹೆಡ್‌)

*ರೈತರು ಹಳೆ ಪದ್ಧತಿ ಮೂಲಕ ಬೀಜೋತ್ಪಾದನೆಗೆ ಮುಂದಾಗಬೇಕು

*ಖಾಸಗಿ ಸಂಸ್ಥೆಗಳಿಂದ ಕಳಪೆ ಬೀಜ ವಿತರಣೆ ತಪ್ಪಲಿದೆ

*ಕೃಷಿಯಿಂದಾಗು ನಷ್ಟದಿಂದ ಯುವಜನರು ಕೃಷಿಯಿಂದ ವಿಮುಖ

*ಕೃಷಿರಂಗ ಸಬಲಗೊಳಿಸಲು ಸರಕಾರದಿಂದ ಕ್ರಮ

ಬೆಂಗಳೂರು: ಮುಂದಿನ ಸಾಲಿನಿಂದ ರೈತರಿಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ನಗರದ ಹೆಬ್ಬಾಳದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಪುಷÜ್ಪ ಹರಾಜು ಕೇಂದ್ರದ 'ಪುಷ್ಪ ಸ್ಟುಡಿಯೊ-ತರಬೇತಿ ಕೇಂದ್ರ' ಹಾಗೂ 'ಬೀಜ ಭವನ' ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

''ಪ್ರಮಾಣೀಕರಿಸಿದ ಬಿತ್ತನೆ ಬೀಜ ವಿತರಿಸಲು ಮೂರು ವರ್ಷಗಳ ಕಾಲ ಒಡಂಬಡಿಕೆ ಆಗಿದೆ. ಬೀಜ ನಿಗಮ, ಕೃಷಿ ವಿವಿ ಸಹಯೋಗದಲ್ಲಿ ಬೀಜೋತ್ಪಾದನೆ ಕೈಗೊಂಡು ರೈತರಿಗೆ ಪೂರೈಸಲಾಗುತ್ತದೆ. ಇದಕ್ಕೆ ಸಂಪುಟದ ಒಪ್ಪಿಗೆ ಕೂಡ ನೀಡಲಾಗಿದೆ. ಇದರಿಂದ ಉತ್ಪಾದನೆ ಹೆಚ್ಚುವ ಜತೆಗೆ ರೈತರಿಂದ ಬರುವ ದೂರುಗಳು ನಿಲ್ಲುತ್ತವೆ,'' ಎಂದರು.

''ಹಿಂದಿನ ದಿನಗಳಲ್ಲಿ ಕೃಷಿಕರು ತಮಗೆ ಬೇಕಾದ ಬಿತ್ತನೆ ಬೀಜಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಅದಕ್ಕೆಂದೇ ಮನೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಸರಕಾರ ಬೀಜ ಪೂರೈಕೆ ಮಾಡುತ್ತಿದ್ದಂತೆ ಆ ಪದ್ಧತಿ ನಿಂತೇ ಹೋಯಿತು. ಖಾಸಗಿ ಕಂಪನಿಗಳು ವಿತರಿಸುವ ಬೀಜಗಳು ಗುಣಮಟ್ಟ ಇಲ್ಲವೆಂಬ ಕೂಗೆದ್ದಿದೆ. ಇದರಿಂದಾಗಿ ರೈತರು ತಮ್ಮ ಹಳೆಯ ಪದ್ಧತಿಯಂತೆ ಬೀಜೋತ್ಪಾದನೆಯಲ್ಲಿ ತೊಡಗಲು ಮುಂದಾಗಲಿ,'' ಎಂದು ಮನವಿ ಮಾಡಿದರು.

''ರೈತರು ಬೆಳೆಯುವ ಬೆಳೆಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೃಷಿ ಹಿಡುವಳಿ ಇಳಿಕೆ, ಹವಾಮಾನ ಬದಲಾವಣೆ ಹಾಗೂ ಸೂಕ್ತ ದರ ಸಿಗದಿರುವುದು ರೈತರನ್ನು ಹೈರಾಣ ಮಾಡಿದೆ. ಹೆಚ್ಚಿನ ರೈತರು ಈ ಉಸಾಬರಿಯೇ ಬೇಡ ಎಂದು ಕೃಷಿಯಿಂದ ವಿಮುಖರಾಗಿದ್ದಾರೆ. ಇದು ಯುವಕರನ್ನು ಕೃಷಿಯತ್ತ ಸೆಳೆಯಲು ಅಡ್ಡಿಯಾಗಿದ್ದು, ಸರಕಾರ ವ್ಯವಸಾಯ ಕ್ಷೇತ್ರವನ್ನು ಸಬಲಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ,'' ಎಂದು ಸಿಎಂ ತಿಳಿಸಿದರು.

3 ವರ್ಷಕ್ಕೆ ಒಡಂಬಡಿಕೆ

ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ''ಪ್ರಮಾಣೀಕರಿಸಿದ ಬಿತ್ತನೆ ಬೀಜ ಪೂರೈಸಲು ಕೃಷಿ ಇಲಾಖೆಯು ಬೀಜ ನಿಗಮ ಹಾಗೂ ಕೃಷಿ ವಿವಿಯೊಂದಿಗೆ 3 ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ ಸರಕಾರಕ್ಕೆ 26 ಕೋಟಿ ರೂ. ಉಳಿತಾಯವಾಗಲಿದೆ. ಬೀಜ ನಿಗಮ ಪೂರೈಸುತ್ತಿರುವ 3.5 ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಸೂಚಿಸಲಾಗಿದೆ. ಟಿಎಲ್‌ ಮಾದರಿಯ ಬೀಜಗಳ ಬಗ್ಗೆ ದೂರು ಬಂದಿರುವಂತೆ ಖಾಸಗಿ ಕಂಪನಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಇಲಾಖೆ ಕ್ರಮ ಕೈಗೊಂಡಿದೆ,'' ಎಂದರು.

ಸಚಿವ ಕೆ.ಜೆ.ಜಾರ್ಜ್‌, ಮೇಲ್ಮನೆ ಸದಸ್ಯ ಬಿ.ಎಸ್‌.ಸುರೇಶ್‌, ಉಪ ಮೇಯರ್‌ ಆನಂದ್‌, ಸರಕಾರದ ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯಭಾಸ್ಕರ್‌, ಕೃಷಿ ಕಾರ್ಯದರ್ಶಿ ಎಂ.ಮಹೇಶ್ವರರಾವ್‌, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಚ್‌.ಶಿವಣ್ಣ, ಬೀಜ ನಿಗಮದ ಎಂಡಿ ಡಾ.ಶಿವಮೂರ್ತಪ್ಪ ಮತ್ತಿತರರಿದ್ದರು.

ನಾನೂ ಮಣ್ಣಿನ ಮಗನೆ!?

''ಕೆಲವರು ಏನೂ ಕೆಲಸ ಮಾಡದೆ ಮಣ್ಣಿನ ಮಗನೆಂದು ಬಿಂಬಿಸಿಕೊಳ್ಳುತ್ತಾರೆ. ಅವರಿಂದ ರೈತರಿಗೂ ಉಪಯೋಗ ಆಗಿಲ್ಲ. ಹೀಗಿರುವಾಗ ಮಣ್ಣಿನ ಮಕ್ಕಳೆಂದು ಹೇಳುವುದು ಸರಿಯಲ್ಲ. ನಾನೂ ಕೂಡ ಮಣ್ಣಿನ ಮಗನೇ ಆಗಿದ್ದೇನೆ,'' ಎಂದು ಸಿಎಂ ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್‌ ನೀಡಿದರು. ಆದರೆ, ಎದುರಾಳಿ ಹೆಸರನ್ನು ಸಿಎಂ ಹೇಳಲಿಲ್ಲ. ಇದು ಯಾರನ್ನು ಉದ್ದೇಶಿಸಿ ಹೇಳಿದ ಮಾತು ಎಂಬ ಗುಸುಗುಸು ಸಭಿಕರಲ್ಲಿ ನಡೆಯಿತು.

''ಹುಟ್ಟೂರಿನಲ್ಲಿರುವ ಹೊಲದಲ್ಲಿ ಶಾಲಾ ವಿದ್ಯಾರ್ಥಿ ಆಗಿರುವಾಗಲೇ ಕೃಷಿಯಲ್ಲಿ ತೊಡಗಿದ್ದೆ. ಪದವಿ ಪೂರ್ಣಗೊಳಿಸುವವರೆಗೂ ನಿತ್ಯವೂ ಹೊಲದಲ್ಲಿ ಕೆಲಸ ಮಾಡಿಯೇ ವ್ಯಾಸಂಗ ಮುಂದುವರಿಸಬೇಕಿತ್ತು,'' ಎಂದು ಸಿಎಂ ತಮ್ಮ ಕೃಷಿ ಕಾಯಕದ ದಿನಗಳನ್ನು ಮೆಲುಕು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ