ಆ್ಯಪ್ನಗರ

ಸಮ್ಮಿಶ್ರ ಸರಕಾರದ ವಿರುದ್ಧ ನಿರಂತರ ಹೋರಾಟ: ಬಿಎಸ್‌ವೈ

ಸಾಲ ಮನ್ನಾ ವಿಚಾರದಲ್ಲಿ ಮಾತು ತಪ್ಪಿರುವ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಲು ಗುರುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರತಿಪಕ್ಷ ನಾಯಕರಾಗಿ ಬಿ.ಎಸ್‌.ಯಡಿಯೂರಪ್ಪ ಕಾರ್ಯ ನಿರ್ವಹಿಸಲಿದ್ದಾರೆ.

Vijaya Karnataka 25 May 2018, 9:02 am
ಬೆಂಗಳೂರು: ಸಾಲ ಮನ್ನಾ ವಿಚಾರದಲ್ಲಿ ಮಾತು ತಪ್ಪಿರುವ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಲು ಗುರುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರತಿಪಕ್ಷ ನಾಯಕರಾಗಿ ಬಿ.ಎಸ್‌.ಯಡಿಯೂರಪ್ಪ ಕಾರ್ಯ ನಿರ್ವಹಿಸಲಿದ್ದಾರೆ.
Vijaya Karnataka Web bsy


ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ನಿರಂತರ ಹೋರಾಟ

ರಾಜ್ಯ ಸರಕಾರದ ಎಲ್ಲ ನಿರ್ಧಾರಗಳು ಹಾಗೂ ನಡೆಯನ್ನು ಎಚ್ಚರಿಕೆಯಿಂದ ಗಮನಿಸುವಂತೆ ಸಭೆಯಲ್ಲಿ ಯಡಿಯೂರಪ್ಪ ಸೂಚನೆ ನೀಡಿದ್ದು, ಪ್ರತಿಯೊಂದು ತಪ್ಪನ್ನೂ ಜನತೆಯ ಮುಂದಿಡುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ವಿಶ್ವಾಸಮತ ಗಳಿಕೆಯಲ್ಲಿ ನಾವು ಸೋತಿರಬಹುದು. ಆದರೆ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕೈ ಕಟ್ಟಿ ಕೂರಬಾರದು. ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಸಿದ್ಧತೆ ನಡೆಸಬೇಕು. 28 ಲೋಕಸಭಾ ಕ್ಷೇತ್ರದಲ್ಲೂ ನಾವು ಗೆಲ್ಲಬೇಕು. ನಾವು ಯಾವುದೇ ಕಾರಣಕ್ಕೂ ಮನೆಯಲ್ಲಿ ಕೂರುವುದಿಲ್ಲ. ನೀವೆಲ್ಲರೂ ನನ್ನ ಜತೆ ಪಕ್ಷ ಸಂಘಟನೆಗೆ ಸಹಕರಿಸಬೇಕು ಎಂದು ಯಡಿಯೂರಪ್ಪ ಸಭೆಯಲ್ಲಿ ಕರೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಸುನೀಲ್‌ ಕುಮಾರ್‌ ಸಚೇತಕ


ಶುಕ್ರವಾರ ಮೈತ್ರಿ ಸರಕಾರದ ವಿಶ್ವಾಸ ಮತ ಯಾಚನೆ ಹಾಗೂ ಅದಕ್ಕೂ ಮುನ್ನ ಸ್ಪೀಕರ್‌ ಚುನಾವಣೆ ನಡೆಯುವುದಿರಂದ ಪಕ್ಷದ ಎಲ್ಲ ಸದಸ್ಯರಿಗೂ ವಿಪ್‌ ನೀಡಲಾಗಿದ್ದು, ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಸಚೇತಕರಾಗಿದ್ದ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರನ್ನೇ ಸಚೇತಕರಾಗಿ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕೇಂದ್ರ ಸಚಿವ ಅನಂತಕುಮಾರ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌, ಸಂಸದೆ ಶೋಭಾ ಕರಂದ್ಲಾಜೆ, ಕೆ.ಎಸ್‌.ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ ಸೇರಿದಂತೆ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

' ಸಾಂದರ್ಭಿಕ ಶಿಶುವಿಗೆ ಇಷ್ಟು ಸೊಕ್ಕಾದರೆ, 22 ರಾಜ್ಯಗಳಲ್ಲಿ ಅಧಿಕಾರ ಹಿಡಿದವರಿಗೆ ಎಷ್ಟು ಸೊಕ್ಕಿರಬೇಡ ? ಮೈತ್ರಿ ಸರಕಾರ ನಾಲ್ಕು ಕಾಲು, ಎರಡು ತಲೆ ಇರುವ ವಿಚಿತ್ರ ಮಗು. ಹೀಗಾಗಿ ಕುತೂಹಲಕ್ಕಾಗಿ ಜನ ಸೇರಿದ್ದರು'
-ಸಿ.ಟಿ.ರವಿ, ಬಿಜೆಪಿ ರಾಜ್ಯ ವಕ್ತಾರ.
***********************************
ನಿಮ್ಮ ಯೋಗ್ಯತೆಗೆ ಎಷ್ಟು ಸೀಟು ಗೆದ್ದಿದ್ದೀರಿ ? ಬಿಎಸ್‌ವೈ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಅವರ ಅಶ್ವಮೇಧ ಕುದುರೆ ಕಟ್ಟಿ ಹಾಕಿದ್ದೇನೆ ಎಂದು ಹೇಳುವ ಕುಮಾರಸ್ವಾಮಿ ಅವರೇ ನಿಮ್ಮ ಯೋಗ್ಯತೆಗೆ ಎಷ್ಟು ಸ್ಥಾನ ಗೆದ್ದಿದ್ದೀರಿ ಎಂದು ನೋಡಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಶ್ನೆಸಿದ್ದಾರೆ.

ನಿಮಗೆ ಅಧಿಕಾರದ ಮದ. ಅದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದೀರಿ. 149 ಕಡೆಗಳಲ್ಲಿ ಠೇವಣಿ ಕಳೆದುಕೊಂಡಿರುವುದು ನಿಮಗೆ ಗೊತ್ತಿಲ್ಲವೇ ? 37 ಕಡೆ ಗೆದ್ದು ಮೋದಿ ಅಶ್ವಮೇಧ ಕುದುರೆ ಕಟ್ಟಿ ಹಾಕುತ್ತೀರಾ ? ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಮೊದಲ ಪತ್ರಿಕಾಗೋಷ್ಠಿಯಲ್ಲೇ ನೀವು ಸಾಣೇಹಳ್ಳಿ ಶ್ರೀಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದೀರಿ. ರಾಜಕೀಯಕ್ಕೆ ಬನ್ನಿ ಎಂದು ಸವಾಲು ಹಾಕಿರುವುದು ಆ ಮಠದ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಈ ಬಗ್ಗೆ ತಕ್ಷಣ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ