ಆ್ಯಪ್ನಗರ

ಬಿಎಸ್‌ವೈ, ಸಿದ್ದು ದೋಸ್ತಿ ಮಾತು; ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ನಡೆದ ಅಭಿನಂದನಾ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರುದ್ಧ ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 28 Feb 2020, 3:02 pm
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 78ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ಶುಭಹಾರೈಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web siddaramaiah and bs yeddyurappa friendship discuss in social media
ಬಿಎಸ್‌ವೈ, ಸಿದ್ದು ದೋಸ್ತಿ ಮಾತು; ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ


ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಭಿನ್ನ ಸಿದ್ಧಾಂತದ ರಾಜಕೀಯ ವಿರೋಧಿ ನಾಯಕರ ಈ ಸಮಾಗಮಕ್ಕೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸಿದ್ದರಾಮಯ್ಯ ಅವರಿಗೆ ಸ್ವತಃ ಸಿಎಂ ಪುತ್ರ ವಿಜಯೇಂದ್ರ ಆಹ್ವಾನ ನೀಡಿದ್ದರು. ಈ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದರು.

ಬಿಎಸ್‌ವೈಗೆ ಜನ್ಮದಿನದ ಸಂಭ್ರಮ, ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಅಭಿನಂದನಾ ಸಮಾವೇಶ

ಬಿಎಸ್‌ವೈ ಓರ್ವ ಹೋರಾಟಗಾರ, ಹೋರಾಟದ ಹಿನ್ನೆಲೆಯಿಂದ ಬಂದವರಿಗೆ ಮಾತ್ರ ಜನರ ಸಮಸ್ಯೆ ಅರ್ಥವಾಗುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಬಿಎಸ್‌ವೈ ಕಾರಣ ಎಂಬುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದರು.


ಸಿದ್ದರಾಮಯ್ಯ ಅವರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಕೆ ಮಾಡಿದ್ದಕ್ಕೆ ಸಿಎಂ ಬಿಎಸ್‌ವೈ ವೇದಿಕೆಯಲ್ಲಿ ಭಾವುಕರಾಗಿ ಧನ್ಯವಾದ ಸಲ್ಲಿಸಿದ್ದರು.

ಹಳಸಿದ ‘ಲವ-ಕುಶ’ರ ಸಂಬಂಧ, ಬಿಎಸ್‌ವೈ ಅಭಿನಂದನಾ ಸಮಾರಂಭಕ್ಕೆ ಈಶ್ವರಪ್ಪ ಗೈರು

ಇದಾದ ಬಳಿಕ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ “ರಾಜಕಾರಣ ಬೇರೆ, ಮನುಷ್ಯ ಸಂಬಂಧಗಳು ಬೇರೆ. ನಾನು ಮತ್ತು ಯಡಿಯೂರಪ್ಪ ಅವರು ಎಷ್ಟೇ ಆರೋಪ ಪ್ರತ್ಯಾರೋಪ ಮಾಡಿದರೂ, ರಾಜಕೀಯವಾಗಿ, ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯ ಸಂಬಂಧ. ಮನುಷ್ಯ ಜೀವನದಲ್ಲಿ ಕಟ್ಟಕಡೆಯದಾಗಿ ಗೆಲ್ಲಬೇಕಿರುವುದು ಇದೇ” ಎಂದಿದ್ದರು.

ಸಿದ್ದರಾಮಯ್ಯ ಹಾಗೂ ಬಿ.ಎಸ್‌ ಯಡಿಯೂರಪ್ಪ ಸಮಾಗಮ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ನೆಟ್ಟಿಗರು ಪರ ಹಾಗೂ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಜಕಾರಣಿಗಳು ಅಗತ್ಯ ಬಿದ್ದಾಗ ಒಂದಾಗುವುದಾದರೆ ಕಾರ್ಯಕರ್ತರನ್ನು ಏಕೆ ಪರಸ್ಪರ ದ್ವೇಷಿಗಳನ್ನಾಗಿ ಮಾರ್ಪಡಿಸುತ್ತೀರಿ ? ಎಂದು ಹಲವರು ಪ್ರಶ್ನಿಸಿದ್ದಾರೆ.


ಭಿನ್ನ ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡುತ್ತಾ, ಪರಸ್ಪರ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದರೂ ನೀವು ಮನುಷ್ಯ ಸಂಬಂಧದ ಹೆಸರಲ್ಲಿ ಒಂದಾದಿರಿ. ಆದರೆ ನಿಮ್ಮ ಮಾತುಗಳನ್ನು ಕೇಳಿ ಓಟು ಹಾಕಿದ ಜನರು ಮಾತ್ರ ಪರಸ್ಪರ ದ್ವೇಷದಿಂದ ದೂರವಾಗುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ರಾಜಕೀಯ ಬೇರೆ ವೈಯಕ್ತಿಯ ಜೀವನ ಬೇರೆ ಎಂದಾದರೆ ನಾವ್ಯಾಕೆ ಪರಸ್ಪರ ಕಿತ್ತಾಡುಕೊಳ್ಳಬೇಕು ಎಂದು ಟ್ವಿಟ್ಟರ್‌ನಲ್ಲಿ ಚಿತ್ರ ದೇವರಾಜ್ ಎಂಬುವವರು ಪ್ರಶ್ನಿಸಿದ್ದಾರೆ.


ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಸಿದ್ದರಾಮಯ್ಯ ಹೋಗಬಾರದಿತ್ತು. ಅದೇನು ಬಡ ಜನರ ಉದ್ದಾರದ ಸಮಾವೇಶವೇ ?ಎಂದು ಫೇಸ್‌ಬುಕ್‌ನಲ್ಲಿ ಹೇಮಾವತಿ ವೆಂಕಟ್‌ ಎಂಬುವವರ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬಿಎಸ್‌ವೈ ಭೇಟಿಯಾಗಿ ಆರೋಗ್ಯ ವಿಚಾರಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಸ್ನೇಹ ಸುದ್ದಿಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ