ಆ್ಯಪ್ನಗರ

ಮೇಕೆದಾಟು ಪಾದಯಾತ್ರೆ: ಡಿಕೆಶಿ ಅಬ್ಬರ, ಸಿದ್ದು ಸೈಲೆಂಟ್ !

ಪಾದಯಾತ್ರೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಶಾಸಕರೂ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಪಕ್ಷದಲ್ಲಿ ಆಂತರಿಕವಾಗಿಯೂ ಶಾಸಕರ ವಿಶ್ವಾಸಗಳಿಸುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗುವುದಾಗಿ ಹೇಳಿದರೂ ಪಾದಯಾತ್ರೆ ಉದ್ದಕ್ಕೂ ಅವರ ಭಾಗಿ ಸಾಧ್ಯತೆ ಕಡಿಮೆ. ಆರೋಗ್ಯ ಕಾರಣ‌ ನೀಡಿ ಪಾದಯಾತ್ರೆ ಆರಂಭ ಹಾಗೂ ಸಮಾರಂಭ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ.

Reported byಇರ್ಷಾದ್ ಉಪ್ಪಿನಂಗಡಿ | Vijaya Karnataka Web 29 Dec 2021, 3:27 pm

ಹೈಲೈಟ್ಸ್‌:

  • ಕಾಂಗ್ರೆಸ್ ಜನವರಿ 9ರಿಂದ ಹತ್ತು ದಿನಗಳ ಕಾಲ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ
  • ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಗೆ ಮೇಕೆದಾಟು ಪಾದಯಾತ್ರೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದೆ
  • ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡುತ್ತಿದ್ದರೂ, ಡಿಕೆಶಿಯಷ್ಟು ಉತ್ಸಾಹ ಅವರಲ್ಲಿ ಕಾಣುತ್ತಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಬೆಂಗಳೂರು: ವಿಳಂಬವಾಗುತ್ತಿರುವ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜನವರಿ 9ರಿಂದ ಹತ್ತು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಬ್ಬರದ ಎದ್ದು ಕಾಣುತ್ತಿದ್ದರೆ ಸಿದ್ದರಾಮಯ್ಯ ಮಾತ್ರ ಸೈಲೆಂಟಾಗಿದ್ದಾರೆ.
ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಗೆ ಮೇಕೆದಾಟು ಪಾದಯಾತ್ರೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದೆ. ಈಗಾಗಲೇ ಮೇಕೆದಾಟು ಯೋಜನೆಯ ಲಾಭ ಆಗುವ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ ಪಾದಯಾತ್ರೆ ಯಶಸ್ವಿಗೊಳಿಸುವ ತಯಾರಿಯಲ್ಲಿದ್ದಾರೆ.

ಸ್ವತಃ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂಬ ನಿಟ್ಟಿನಲ್ಲಿ ಸರ್ವ ತಯಾರಿಗಳನ್ನು ಮಾಡುತ್ತಿದ್ದಾರೆ.

ಆದರೆ ಸಿದ್ದರಾಮಯ್ಯ ಮಾತ್ರ ಈ ವಿಚಾರವಾಗಿ ಸೈಲೆಂಟಾಗಿದ್ದಾರೆ. ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡುತ್ತಿದ್ದರೂ, ಡಿಕೆಶಿಯಷ್ಟು ಉತ್ಸಾಹ ಅವರಲ್ಲಿ ಎದ್ದು ಕಾಣುತ್ತಿಲ್ಲ. ಇವರ ಬದಲಾಗಿ ಪಾದಯಾತ್ರೆಯ ಮುಂದಾಳತ್ವವನ್ನು ಡಿಕೆಶಿನೇ ವಹಿಸಿಕೊಂಡಿದ್ದಾರೆ.
ಮೇಕೆದಾಟು ಕೂಡ ಕಾವೇರಿ ನದಿಯೇ, ಪಾದಯಾತ್ರೆಗೆ ಎಲ್ಲರಿಗೂ ಆಹ್ವಾನ ನೀಡಿದ್ದೇವೆ: ಡಿಕೆಶಿ
2013ರಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸುವಲ್ಲಿ ಬಳ್ಳಾರಿ ಪಾದಯಾತ್ರೆ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿತ್ತು. ಬೆಂಗಳೂರಿನಿಂದ ಬಳ್ಳಾರಿಗೆ ನಡೆದ ಪಾದಯಾತ್ರೆ ರಾಜಕೀಯ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಪಾದಯಾತ್ರೆ ನೇತೃತ್ವ ವಹಿಸಿ ಯಶಸ್ವಿಗೊಳಿಸಿದ್ದ ಸಿದ್ದರಾಮಯ್ಯ ಅವರ ವರ್ಚಸ್ಸು ವಿಸ್ತರಣೆಗೂ ಇದು ಕಾರಣವಾಗಿತ್ತು.

ಇದೀಗ ಡಿಕೆ ಶಿವಕುಮಾರ್ ಕೂಡಾ ಪಾದಯಾತ್ರೆಯ ಮೂಲಕ ಅಬ್ಬರ ಸೃಷ್ಟಿಸಲು ತಂತ್ರರೂಪಿಸುತ್ತಿದ್ದಾರೆ. ರಾಜಕೀಯವಾಗಿ ಈಗಾಗಲೇ ಮೇಕೆದಾಟು ಚರ್ಚೆ ಶುರುವಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಮೇಕೆದಾಟು ಸದ್ದಾಗಿತ್ತು. ಈ ನಿಟ್ಟಿನಲ್ಲಿ ಮೇಕೆದಾಟು ಪಾದಯಾತ್ರೆ ಡಿಕೆಶಿಗೆ ರಾಜಕೀಯ ಲಾಭ ತಂದುಕೊಡಲಿದೆ ಎಂಬುವುದರಲ್ಲಿ ಸಂಶಯವಿಲ್ಲ.
ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಕೈಯಲ್ಲೊಂದು ರಾಜಕೀಯ ಅಸ್ತ್ರ!
ಸಾಮಾಜಿಕ ಜಾಲತಾಣದಲ್ಲೂ ಬಿರುಸು

ಮೇಕೆದಾಟು ಪಾದಯಾತ್ರೆ ಶತಾಯಗತಾಯವಾಗಿ ಯಶಸ್ವಿಗೊಳಿಸಲು ಡಿಕೆ ಶಿವಕುಮಾರ್ ತಂತ್ರ ರೂಪಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಪಾದಯಾತ್ರೆ ಚರ್ಚೆ ನಡೆಯುತ್ತಿದೆ. ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯದ ಮೂಲಕ ಪಾದಯಾತ್ರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಾದಯಾತ್ರೆ ಮಾಡಿದ್ರೆ ಡಿಕೆಶಿ ಮುಖ್ಯಮಂತ್ರಿ ಆಗಲ್ಲ : ಸಚಿವ ಸೋಮಶೇಖರ್ ವ್ಯಂಗ್ಯ
ಇನ್ನು ಪಾದಯಾತ್ರೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಶಾಸಕರೂ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಪಕ್ಷದಲ್ಲಿ ಆಂತರಿಕವಾಗಿಯೂ ಶಾಸಕರ ವಿಶ್ವಾಸಗಳಿಸುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ. ಇನ್ನು ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗುವುದಾಗಿ ಹೇಳಿದರೂ ಪಾದಯಾತ್ರೆ ಉದ್ದಕ್ಕೂ ಅವರ ಭಾಗಿ ಸಾಧ್ಯತೆ ಕಡಿಮೆ. ಆರೋಗ್ಯ ಕಾರಣ‌ ನೀಡಿ ಪಾದಯಾತ್ರೆ ಆರಂಭ ಹಾಗೂ ಸಮಾರಂಭ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಒಟ್ಟಿನಲ್ಲಿ ಈ ಪಾದಯಾತ್ರೆ ಡಿಕೆಶಿಗೆ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ತಂದು ಕೊಡಲಿದೆ ಎಂದು ಕಾದು ನೋಡಬೇಕಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ